Vande Bharat Sleeper: ವಂದೇ ಭಾರತ್ ಸ್ಲೀಪರ್, ಸೆಪ್ಟೆಂಬರ್‌ನಲ್ಲಿ ಸಂಚಾರ, ಮಾರ್ಗ

0
110

ಬೆಂಗಳೂರು: ವಂದೇ ಭಾರತ್ ಸ್ಲೀಪರ್ ಭಾರತೀಯ ರೈಲ್ವೆಯ ಬಹು ನಿರೀಕ್ಷಿತ ರೈಲು. ದೂರದ ನಗರಗಳನ್ನು ಸಂಪರ್ಕಿಸಲು ಈ ಮಾದರಿ ರೈಲುಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಈಗಾಗಲೇ ರೈಲುಗಳ ಪ್ರಾಯೋಗಿಕ ಸಂಚಾರ ಸಹ ಯಶಸ್ವಿಯಾಗಿದೆ. ಈಗ ಸಂಚಾರ ನಡೆಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಬಿಳಿ, ಕೇಸರಿ ಬಣ್ಣದ ರೈಲುಗಳಿಗೆ ಭಾರೀ ಬೇಡಿಕೆ ಇದೆ. ಇದರ ಅಭಿವೃದ್ಧಿಗೊಳಿಸಿದ ಭಾಗವಾಗಿ ದೇಶದ ಹಲವು ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಚಿಂತನೆ ನಡೆಸಿದೆ.

ಸದ್ಯದ ಮಾಹಿತಿಯಂತೆ ಸೆಪ್ಟೆಂಬರ್‌ನಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳ ಸಂಚಾರ ಆರಂಭವಾಗಲಿದೆ. ಗುಜರಾತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್‌ ಸೆಪ್ಟೆಂಬರ್‌ನಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಓಡಿಸಲಾಗುತ್ತದೆ ಎಂದು ಹೇಳಿದ್ದಾರೆ. ಈಗಾಗಲೇ ಸಚಿವರು ರೈಲು ಬೋಗಿಯ ವಿನ್ಯಾಸವನ್ನು ನೋಡಿ ಅಂತಿಮಗೊಳಿಸಿದ್ದಾರೆ.

ಯಾವ ಮಾರ್ಗದಲ್ಲಿ ರೈಲು?: ನಮೋ ಭಾರತ್, ಅಮೃತ್ ಭಾರತ್ ಬಳಿಕ ವಂದೇ ಭಾರತ್ ಸ್ಲೀಪರ್ ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡಿರುವ ವಂದೇ ಭಾರತ್ ಸ್ಲೀಪರ್ ರೈಲು ಭಾರತೀಯ ರೈಲ್ವೆಯಲ್ಲಿ ಸಂಚಾರ ಆರಂಭಿಸಲಿದೆ.

ಯಾವ ಮಾರ್ಗದಲ್ಲಿ ವಂದೇ ಭಾರತ್ ರೈಲುಗಳು ಸಂಚಾರ ನಡೆಸಲಿವೆ ಎಂಬುದು ಇನ್ನೂ ಅಂತಿಮ ಘೋಷಣೆಯಾಗಿಲ್ಲ. ಆದರೆ ಸದ್ಯದ ಮಾಹಿತಿಯಂತೆ

  • ದೆಹಲಿ-ಹೌರಾ
  • ದೆಹಲಿ-ಮುಂಬೈ
  • ದೆಹಲಿ-ಪುಣೆ
  • ದೆಹಲಿ-ಸಿಕಂದರಾಬಾದ್

ಮಾರ್ಗದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳ ಸಂಚಾರ ಆರಂಭವಾಗಲಿದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಉಳಿದ ಮಾರ್ಗದಲ್ಲಿ ರೈಲುಗಳ ಸಂಚಾರವನ್ನು ಪ್ರಾರಂಭಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕರ್ನಾಟಕದಲ್ಲಿ ಮಂಗಳೂರು-ಮುಂಬೈ, ಬೆಂಗಳೂರು-ಬೆಳಗಾವಿ ಸೇರಿದಂತೆ ವಿವಿಧ ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಬೇಕು ಎಂದು ಬೇಡಿಕೆ ಇಡಲಾಗಿದೆ. ರೈಲ್ವೆ ಖಾತೆಯ ರಾಜ್ಯ ಸಚಿವರು ಕರ್ನಾಟಕದ ತುಮಕೂರು ಕ್ಷೇತ್ರದ ಸಂಸದ ವಿ.ಸೋಮಣ್ಣ. ಆದ್ದರಿಂದ ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೂ ಈ ಮಾದರಿ ರೈಲು ಸಿಗುವ ನಿರೀಕ್ಷೆ ಇದೆ.

ಬಿಇಎಂಎಲ್ ಮತ್ತು ಐಸಿಎಫ್ ಜಂಟಿಯಾಗಿ ವಂದೇ ಭಾರತ್ ಸ್ಲೀಪರ್ ರೈಲು ತಯಾರು ಮಾಡಿವೆ. 16 ಬೋಗಿಯ ರೈಲು ಇದಾಗಿದ್ದು, 1ಎಸಿ ಫಸ್ಟ್ ಕ್ಲಾಸ್, 2 ಎಸಿ 2ಟೈರ್, ಎಸಿ 3 ಟೈರ್, ಬೋಗಿಯನ್ನು ಇದು ಒಳಗೊಂಡಿರಲಿದೆ. ಈ ರೈಲನ್ನು ಗಂಟೆಗೆ 180 ಕಿ.ಮೀ. ವೇಗದಲ್ಲಿ ಸಂಚಾರ ನಡೆಸುವಂತೆ ವಿನ್ಯಾಸಗೊಳಿಸಲಾಗಿದೆ.

2024ರಲ್ಲಿಯೇ ವಂದೇ ಭಾರತ್ ಸ್ಲೀಪರ್ ರೈಲು ಬೋಗಿಗಳು ಸಿದ್ಧವಾಗಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಯ ಮಾರ್ಗದಲ್ಲಿ ಈ ರೈಲುಗಳನ್ನು ಓಡಿಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಪೂರ್ಣಗೊಳಿಸಲಾಗಿದೆ.

ವಂದೇ ಭಾರತ್ ಸ್ಲೀಪರ್ ರೈಲು ಹಲವು ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡಿದೆ. ರಿಯಲ್ ಟೈಂ ಮಾರ್ಗದ ಮಾಹಿತಿ, ಯುಎಸ್‌ಬಿ ಆಧಾರಿತ ರೀಡಿಂಗ್ ಲ್ಯಾಂಪ್, ಎಲ್ಲಾ ಬೋಗಿಗಳಿಗೂ ಸಿಸಿಟಿವಿ, ಅತ್ಯಾಧುನಿಕ ಪ್ಯಾಂಟ್ರಿ, ಎಸಿ ಬೋಗಿಯಲ್ಲಿ ಬಿಸಿನೀರು ಸೌಲಭ್ಯ, ವಿಕಲಾಂಗ ಶೌಚಾಲಯ ವ್ಯವಸ್ಥೆ, ಬಯೋ ವ್ಯಾಕ್ಯುವ್ ಶೌಚಾಲಯ, ಸೆನ್ಸಾರ್ ಆಧಾರಿತ ಬಾಗಿಲುಗಳನ್ನು ಬೋಗಿ ಹೊಂದಿದೆ.

ಭಾರತೀಯ ರೈಲ್ವೆ ಈಗಾಗಲೇ 200 ವಂದೇ ಭಾರತ್ ಸ್ಲೀಪರ್ ಮಾದರಿ ರೈಲುಗಳ ತಯಾರಿಕೆಗೆ ಟೆಂಡರ್ ಅಂತಿಮಗೊಳಿಸಿದೆ. ದೇಶದಲ್ಲಿ ದೂರ ಪ್ರಯಾಣದ ಮಾರ್ಗದಲ್ಲಿ ಈ ಮಾದರಿ ರೈಲುಗಳನ್ನು ಪರಿಚಯಿಸಲು ಯೋಜನೆ ರೂಪಿಸಲಾಗಿದೆ. ಟೆಂಡರ್ ಪಡೆದ ಕಂಪನಿ 35 ವರ್ಷಗಳ ಕಾಲ ರೈಲಿನ ನಿರ್ವಹಣೆಯನ್ನು ನೋಡಿಕೊಳ್ಳಬೇಕಿದೆ.

Previous articleʼಗ್ಯಾರಂಟಿʼ ಕೊಂಡಾಡಿದ ಸಿಎಂ: ಸ್ವಾತಂತ್ರ್ಯೋತ್ಸವ ಭಾಷಣದ ಹೈಲೆಟ್ಸ್!
Next articleವೋಟರ್ ಲಿಸ್ಟ್‌ನಿಂದ ಕೈಬಿಟ್ಟ ಹೆಸರುಗಳ ಪ್ರಕಟಣೆಗೆ ಸುಪ್ರೀಂ ಕೋರ್ಟ್ ಸೂಚನೆ

LEAVE A REPLY

Please enter your comment!
Please enter your name here