ಉಡುಪಿ: ಅಯೋಧ್ಯೆ ಶ್ರೀರಾಮ ಮಂದಿರದ ಮೊದಲ ಮಹಡಿಯಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮ ದರ್ಬಾರ್ ನಲ್ಲಿರುವ ಶ್ರೀರಾಮ ಪಟ್ಟಾಭಿಷೇಕದ ಶ್ರೀರಾಮ ಸೀತೆ ಲಕ್ಷ್ಮಣ ಆಂಜನೇಯ ವಿಗ್ರಹಗಳಿಗೆ ತೊಡಿಸಲಾಗಿರುವ ಚಿನ್ನಾಭರಣಗಳನ್ನು ಉಡುಪಿಯಲ್ಲಿ ಸಿದ್ಧಪಡಿಸಲಾಗಿದೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರ ಮನವಿಯಂತೆ ಇಲ್ಲಿನ ಪ್ರಸಿದ್ಧ ಸ್ವರ್ಣ ಜ್ಯುವೆಲ್ಲರ್ಸ್ ನವರು ಕೇವಲ ಹತ್ತು ದಿನಗಳಲ್ಲಿ ಈ ಆಭರಣಗಳನ್ನು ತಯಾರಿಸಿ ಕೊಟ್ಟಿದ್ದಾರೆ. ನ.24ರಂದು ಸೋಮವಾರ ಸ್ವರ್ಣ ಸಂಸ್ಥೆಯ ಗುಜ್ಜಾಡಿ ದೀಪಕ್ ನಾಯಕ್ ಮೊದಲಾದವರು ಅಯೋಧ್ಯೆಗೆ ತೆರಳಿ ಈ ಆಭರಣಗಳನ್ನು ಶಿಲಾ ವಿಗ್ರಹಗಳಿಗೆ ತೊಡಿಸಿದ್ದಾರೆ.
ಈ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿರುವ ಸಂಸ್ಥೆಯ ಪಾಲುದಾರ ಗುಜ್ಜಾಡಿ ರಾಮದಾಸ ನಾಯಕ್, ಇದು ನಮಗೆ ಲಭಿಸಿದ ಅಪೂರ್ವ ಅವಕಾಶ. ಗುರು-ಹಿರಿಯರ ಪುಣ್ಯಫಲದಿಂದ ಈ ಅವಕಾಶ ಲಭಿಸಿದೆ. ಅಯೋಧ್ಯೆ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡು ಪ್ರಧಾನ ಮಂತ್ರಿಯಿಂದ ಭಗವಾಧ್ವಜಾರೋಹಣದ ಸದವಸರದಲ್ಲೇ ಈ ಆಭರಣ ತಯಾರಿಯ ಅವಕಾಶ ಲಭಿಸಿರುವುದು `ಸ್ವರ್ಣ’ ಕುಟುಂಬಕ್ಕೆ ಶಾಶ್ವತ, ಸ್ಮರಣೀಯ ಕ್ಷಣ ಎಂದವರು ತಿಳಿಸಿದ್ದಾರೆ.
ಈ ಹಿಂದೆ ಕಾಶಿ ಮಠಾಧೀಶರ ಆದೇಶದಂತೆ ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಬೆಳ್ಳಿ ಪಲ್ಲಕ್ಕಿ, ಸುವರ್ಣ ಅಟ್ಟೆ ಪ್ರಭಾವಳಿ, ಕಂಠೀಹಾರ ಇತ್ಯಾದಿಗಳನ್ನು ನಿರ್ಮಿಸುವ ಅವಕಾಶವೂ ಲಭಿಸಿತ್ತು. ಇದೀಗ ಶ್ರೀರಾಮ ಪರಿವಾರದ ಎಲ್ಲಾ ವಿಗ್ರಹಗಳಿಗೆ ಕಾಲಿನ ನೂಪುರ, ಕಂಠೀಹಾರ, ಕಿರೀಟ, ಕರ್ಣ ಕುಂಡಲ ಸಹಿತ ಶಿರದಿಂದ ಪಾದದ ವರೆಗೆ ಎಲ್ಲಾ ಆಭರಣಗಳನ್ನು ತಯಾರಿಸಿ, ತೊಡಿಸಲಾಗಿದೆ ಎಂದು ರಾಮದಾಸ ನಾಯಕ್ ತಿಳಿಸಿದ್ದಾರೆ.
























