ನವದೆಹಲಿ: ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಶುಕ್ರವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಉಕ್ರೇನ್ ಸಂಘರ್ಷದ ಕುರಿತು ಭಾರತದ ನಿಲುವನ್ನು ಸ್ಪಷ್ಟವಾಗಿ ಮಂಡಿಸಿದರು.
“ಭಾರತವು ಎಂದಿಗೂ ತಟಸ್ಥ ನಿಲುವು ಹೊಂದಿಲ್ಲ. ಬದಲಾಗಿ ಇದು ಸಂಪೂರ್ಣವಾಗಿ ಶಾಂತಿಯ ಪರವಾಗಿದೆ” ಎಂದು ಮೋದಿ ಪುಟಿನ್‌ಗೆ ಹೇಳಿದರು.
ಪ್ರಧಾನಿ ಮೋದಿ, ಉಕ್ರೇನ್‌ನಲ್ಲಿ ಯುದ್ಧ ಕೊನೆಗಾಣಿಸಿ ಶಾಂತಿ ನೆಲೆಸಲು ಮಾಡುವ ಎಲ್ಲ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ ಎಂದು ಘೋಷಿಸಿದರು. “ಶಾಂತಿ ನೆಲೆಸಲು ಬೇಕಾದ ಎಲ್ಲ ಪ್ರಯತ್ನಗಳಿಗೆ ನಾವು ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ,” ಎಂದು ಬಲವಾಗಿ ಮಾತುಗಳನ್ನ ಒತ್ತಿ ಹೇಳಿದರು.
ಸ್ನೇಹ ಮತ್ತು ನಂಬಿಕೆಯ ಮಾತು: ಸಂಘರ್ಷ ಪ್ರಾರಂಭವಾದಾಗಿನಿಂದ ಪುಟಿನ್ ಜೊತೆ ನಿರಂತರ ಚರ್ಚೆ ನಡೆಸುತ್ತಿರುವುದನ್ನು ಉಲ್ಲೇಖಿಸಿದ ಮೋದಿ, “ಸಂಘರ್ಷ ಆರಂಭವಾದ ನಂತರ ನಾವು ಹಲವು ಚರ್ಚೆಗಳನ್ನು ನಡೆಸುತ್ತಿದ್ದೇವೆ ಎಂದರು.
ಆಪ್ತ ಸ್ನೇಹಿತನಾಗಿ ನೀವು ನಮಗೆ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡುತ್ತಲೇ ಬಂದಿದ್ದೀರಿ. ನಂಬಿಕೆಯೇ ಮುಖ್ಯ ಎಂದು ನನಗನಿಸುತ್ತದೆ,” ಎಂದರು.
ಶಾಂತಿಯ ಮಾರ್ಗವನ್ನು ಕಂಡುಕೊಳ್ಳುವ ಆಶಯ ವ್ಯಕ್ತಪಡಿಸಿದ ಪ್ರಧಾನಿ, “ನಾವೆಲ್ಲರೂ ಶಾಂತಿಯ ಮಾರ್ಗವನ್ನು ಕಂಡುಕೊಳ್ಳಬೇಕು. ಇತ್ತೀಚಿನ ಪ್ರಯತ್ನಗಳ ಬಗ್ಗೆ ನನಗೆ ತಿಳಿದಿದೆ. ಆದರೆ ಜಗತ್ತಿನಲ್ಲಿ ಶಾಂತಿ ನೆಲೆಸುವ ಬಗ್ಗೆ ನನಗೆ ವಿಶ್ವಾಸವಿದೆ,” ಎಂದು ಭರವಸೆ ವ್ಯಕ್ತಪಡಿಸಿದರು.
ಜಾಗತಿಕ ವೇದಿಕೆಯಲ್ಲಿ ಮಹತ್ವ: ಉಕ್ರೇನ್ ಸಂಘರ್ಷದ ನಂತರ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುತ್ತಿರುವ ಭಾರತದ ಮೇಲೆ ಜಾಗತಿಕವಾಗಿ ಒತ್ತಡ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಪ್ರಧಾನಿ ಮೋದಿ ಈ ಹೇಳಿಕೆ ಮಹತ್ವ ತಳಿದುಕೊಂಡರು.
ಭಾರತವು ತನ್ನನ್ನು ತಾನು ಶಾಂತಿ ಸ್ಥಾಪನೆಗೆ ಬದ್ಧವಾದ ರಾಷ್ಟ್ರ ಎಂದು ಮತ್ತೊಮ್ಮೆ ಜಾಗತಿಕ ವೇದಿಕೆಯಲ್ಲಿ ಪ್ರಸ್ತುತಪಡಿಸಿದೆ.
ಮಾತುಕತೆಯು ಉಭಯ ದೇಶಗಳ ನಡುವಿನ ರಕ್ಷಣಾ, ಇಂಧನ ಮತ್ತು ಆರ್ಥಿಕ ಸಹಕಾರದ ಕುರಿತೂ ಕೇಂದ್ರೀಕೃತವಾಗಿದ್ದು, ಜಗತ್ತಿನ ಕಣ್ಣು ಈ ಶೃಂಗಸಭೆಯ ನಿರ್ಧಾರಗಳ ಮೇಲೆ ನೆಟ್ಟಿದೆ ಎಂದರು.




















