ಭಾರತೀಯ ರೈಲ್ವೆ ಇಲಾಖೆಗೆ ಬುಧವಾರ ಕರಾಳ ದಿನವಾಗಿ ಪರಿಣಮಿಸಿದೆ. ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ನಡೆದ ಎರಡು ಪ್ರತ್ಯೇಕ ಭೀಕರ ರೈಲು ದುರಂತಗಳಲ್ಲಿ ಒಟ್ಟು 10 ಜನರು ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ.
ಉತ್ತರ ಪ್ರದೇಶ: ಹಳಿ ದಾಟುತ್ತಿದ್ದ ನಾಲ್ವರು ಭಕ್ತರ ದುರಂತ ಅಂತ್ಯ ಮೊದಲ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಚುನಾರ್ ರೈಲು ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಕಾರ್ತಿಕ ಪೂರ್ಣಿಮೆಯ ಪ್ರಯುಕ್ತ ಗಂಗಾ ಸ್ನಾನಕ್ಕೆ ತೆರಳುತ್ತಿದ್ದ ನಾಲ್ವರು ಯಾತ್ರಾರ್ಥಿಗಳು ರೈಲ್ವೆ ಹಳಿ ದಾಟುತ್ತಿದ್ದಾಗ ವೇಗವಾಗಿ ಬಂದ ನೇತಾಜಿ ಎಕ್ಸ್‌ಪ್ರೆಸ್ (12311) ರೈಲಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರೈಲ್ವೆ ಅಧಿಕಾರಿಗಳ ಪ್ರಕಾರ, ಪ್ರಯಾಣಿಕರು ಪ್ಲಾಟ್‌ಫಾರ್ಮ್‌ನ ಬದಿಯಲ್ಲಿ ಇಳಿಯುವ ಬದಲು, ತಪ್ಪಾಗಿ ರೈಲಿನ ಎದುರು ಭಾಗದಲ್ಲಿ ಇಳಿದಿದ್ದಾರೆ. ಈ ವೇಳೆ, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ರೈಲು ಅವರಿಗೆ ಡಿಕ್ಕಿ ಹೊಡೆದಿದೆ. ಘಟನೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ರಕ್ಷಣಾ ಕಾರ್ಯಗಳನ್ನು ಚುರುಕುಗೊಳಿಸಲು ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳಿಗೆ ಸೂಚನೆ ನೀಡಿದ್ದಾರೆ.
ಛತ್ತೀಸ್‌ಗಢ: ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ, 6 ಸಾವು: ಈ ದುರಂತದ ಬೆನ್ನಲ್ಲೇ, ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ಲಾಲ್‌ಖಾದನ್ ಬಳಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಸಂಜೆ ಸುಮಾರು 4 ಗಂಟೆಯ ಸಮಯದಲ್ಲಿ, ಪ್ರಯಾಣಿಕರ ರೈಲೊಂದು ಗೂಡ್ಸ್ ರೈಲಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹಲವಾರು ಬೋಗಿಗಳು ಹಳಿತಪ್ಪಿವೆ.
ಪ್ರಾಥಮಿಕ ವರದಿಗಳ ಪ್ರಕಾರ, ಈ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ತಕ್ಷಣವೇ ಆರಂಭವಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಒಂದೇ ದಿನದಲ್ಲಿ ಸಂಭವಿಸಿದ ಈ ಎರಡು ದುರಂತಗಳು ದೇಶಾದ್ಯಂತ ಆತಂಕಕ್ಕೆ ಕಾರಣವಾಗಿದ್ದು, ರೈಲ್ವೆ ಇಲಾಖೆ ಎರಡೂ ಘಟನೆಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.























