ಬಿಹಾರ ವಿಧಾನಸಭೆ ಚುನಾವಣೆ-2025ಕ್ಕೆ ದಿನಗಣನೆ ಆರಂಭವಾಗಿದೆ. ಲಾಲೂ ಪ್ರಸಾದ್ ಯಾದವ್ ಪುತ್ರ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಪಕ್ಷಕ್ಕೆ ತಾವೇ ರಾಷ್ಟ್ರೀಯ ಅಧ್ಯಕ್ಷರು ಎಂದು ಘೋಷಣೆ ಮಾಡಿಕೊಂಡಿದ್ದು, ಪಕ್ಷದ ಚಿಹ್ನೆಯನ್ನು ಬಿಡುಗಡೆಗೊಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಆರ್‌ಜೆಡಿ ಪಕ್ಷದಿಂದ ಲಾಲೂ ಪ್ರಸಾದ್ ಯಾದವ್ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಉಚ್ಛಾಟನೆ ಮಾಡಲಾಗಿತ್ತು. ಶುಕ್ರವಾರ ಅವರು ಹೊಸ ಪಕ್ಷವನ್ನು ಘೋಷಣೆ ಮಾಡಿದ್ದಾರೆ.
ತೇಜ್ ಪ್ರತಾಪ್ ಯಾದವ್ ಹೊಸ ಪಕ್ಷದ ಹೆಸರು ‘ಜನಶಕ್ತಿ ಜನತಾ ದಳ’. ‘ಕಪ್ಪು ಹಲಗೆ’ ಪಕ್ಷದ ಚಿಹ್ನೆಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವರು ಪೋಸ್ಟ್ ಹಾಕಿದ್ದು, ತಮ್ಮ ಪಕ್ಷಕ್ಕೆ ತಾವೇ ರಾಷ್ಟ್ರೀಯ ಅಧ್ಯಕ್ಷರು ಎಂದು ಹೇಳಿದ್ದಾರೆ.
ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಚುನಾವಣಾ ಆಯೋಗ ಅಧಿಕಾರಿಗಳು ‘ಜನಶಕ್ತಿ ಜನತಾ ದಳ’ ಹೆಸರಿನ ಯಾವುದೇ ಪಕ್ಷ ನೋಂದಣಿಯಾಗಿಲ್ಲ. ‘ಕಪ್ಪು ಹಲಗೆ’ ಚಿಹ್ನೆಯನ್ನು ನಾವು ಪಕ್ಷಕ್ಕೆ ನೀಡಿಲ್ಲ ಎಂದು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ಆರ್‌ಜೆಡಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದರು. ಆಗ ಅವರು ಹೊಸ ಪಕ್ಷ ಸ್ಥಾಪನೆ ಮಾಡುತ್ತೇನೆ. ಸಣ್ಣ ಪಕ್ಷಗಳ ಜೊತೆ ನಾನು ಚುನಾವಣಾ ಮೈತ್ರಿ ಮಾಡಿಕೊಳ್ಳುತ್ತೇನೆ ಎಂದು ಘೋಷಣೆ ಮಾಡಿದ್ದರು.
ಬಿಹಾರ ಚುನಾವಣೆ ಹೊತ್ತಿನಲ್ಲಿಯೇ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಕುಟುಂಬದಲ್ಲಿ ಎಲ್ಲವೂ ಸರಿ ಇಲ್ಲ. ಬುಧವಾರ ಲಾಲೂ ಪುತ್ರಿ ರೋಹಿಣಿ ಆಚಾರ್ಯ ಸಾಮಾಜಿಕ ಜಾಲತಾಣದಲ್ಲಿ ಲಾಲೂ ಪ್ರಸಾದ್ ಯಾದವ್, ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಅವರನ್ನು ಅನ್‌ಫಾಲೋ ಮಾಡಿದ್ದರು.
ಸದ್ಯದ ಮಾಹಿತಿ ಪ್ರಕಾರ ರೋಹಿಣಿ ಆಚಾರ್ಯ ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಬಯಸಿದ್ದಾರೆ. ಆದರೆ ತೇಜಸ್ವಿ ಯಾದವ್ ಸೇರಿದಂತೆ ಲಾಲೂ ಕುಟುಂಬದಲ್ಲಿ ಇದಕ್ಕೆ ಒಪ್ಪಿಗೆ ಇಲ್ಲ. ರಾಜಕೀಯ ವಿಚಾರಕ್ಕೆ ಕುಟುಂಬದಲ್ಲಿ ಕಲಹ ನಡೆಯುತ್ತಿದೆ.
ಆರ್‌ಜೆಡಿ ಪಕ್ಷ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ಮೈತ್ರಿಕೂಟದ ಜೊತೆ ಇದೆ. ತೇಜಸ್ವಿ ಯಾದವ್ ಕೆಲವು ದಿನಗಳ ಹಿಂದೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜೊತೆ ಮತಗಳ್ಳತನ ವಿರುದ್ಧ ನಡೆದ ಬೃಹತ್ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.
ಆರ್‌ಜೆಡಿ ಮತ್ತು ಕಾಂಗ್ರೆಸ್ ಸೀಟು ಹಂಚಿಕೆ ಮಾಡಿಕೊಳ್ಳುವ ಮೂಲಕ ಬಿಹಾರ ಚುನಾವಣೆಯನ್ನು ಎದುರಿಸಲಿವೆ. ಆದರೆ ಯಾರಿಗೆ ಎಷ್ಟು ಸೀಟು? ಎಂಬುದು ಇನ್ನೂ ಸಹ ಅಂತಿಮವಾಗಿಲ್ಲ. ಇಂತಹ ಹೊತ್ತಿನಲ್ಲಿಯೇ ಲಾಲೂ ಕುಟುಂಬದಲ್ಲಿ ರಾಜಕೀಯ ಬಿರುಗಾಳಿ ಎದ್ದಿದೆ.
ನವೆಂಬರ್ 22ರೊಳಗೆ ಬಿಹಾರದ 242 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ. ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಘೋಷಣೆ ಮಾಡಲು ತಯಾರಿ ನಡೆಸಿದೆ.
ರಾಜ್ಯದಲ್ಲಿ ಸದ್ಯ ಬಿಜೆಪಿ, ಜೆಡಿಯು ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದು, ನಿತೀಶ್ ಕುಮಾರ್ ಮುಖ್ಯಮಂತ್ರಿ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಗೂ ಬೆಂಬಲ ನೀಡಿರುವ ಜೆಡಿಯು ಎನ್‌ಡಿಎ ಪ್ರಮುಖ ಮಿತ್ರಪಕ್ಷವಾಗಿದೆ. ಬಿಹಾರ ಚುನಾವಣೆಯನ್ನು ಬಿಜೆಪಿ ಜೆಡಿಯು ಜೊತೆ ಸೀಟು ಹಂಚಿಕೆ ಮಾಡಿಕೊಂಡು ಎದುರಿಸಲಿದೆ.