ಗುರುವಾರ (ಏ.02) ಮಡಿಕೇರಿಯ ತಡಿಯಾಂಡಮೋಲ್ ಚಾರಣಕ್ಕೆ ಏಕಾಂಗಿಯಾಗಿ ತೆರಳಿದ್ದ ಕೇರಳ ಮೂಲದ ಶರಣ್ಯ (36) ನಾಪತ್ತೆಯಾಗಿದ್ದರು. ಇದೀಗ ಸತತ ನಾಲ್ಕು ದಿನಗಳ ನಿರಂತರ ಹುಡುಕಾಟದ ಬಳಿಕ ಮಹಿಳೆಯ ಸುಳಿವು ಸಿಕ್ಕಿದೆ. ಸ್ಥಳೀಯ ಕುಡಿಯ ಸಮುದಾಯದ ಶೋಧ ಕಾರ್ಯದ ವೇಳೆ ಶರಣ್ಯ ಪತ್ತೆಯಾಗಿದ್ದಾರೆ. ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ಹೋಗುವುದಾಗಿ ಗುರುವಾರ ಬೆಳಗ್ಗೆ ಹೋದ ಮಹಿಳೆ, ವಾಪಾಸ್ ಆಗಿರಲಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು, ಮಗಳ ಪತ್ತೆಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡಿದ್ದರು.
ಅರಣ್ಯ, ಪೊಲೀಸ್, ಇಲಾಖೆ, ಗ್ರಾಮಸ್ಥರು ಮತ್ತು ನಕ್ಸಲ್ ನಿಗ್ರಹ ಪಡೆಯಿಂದ ನಿರಂತರ ಶೋಧ ಬೆನ್ನಲ್ಲೇ ಟೆಕ್ಕಿಯ ಸುಳಿವು ಸಿಕ್ಕಿದೆ. ಭಾನುವಾರ (ಏ.05) ಶರಣ್ಯ ಪತ್ತೆಯಾಗಿದ್ದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಆಕೆ ಎಲ್ಲಿದ್ದರು? ಮಿಸ್ ಆಗಿದ್ದು ಹೇಗೆ? ಸ್ವತಃ ಆಕೆಯೇ ವಿವರಿಸಿದ್ದಾಳೆ.
ದಾರಿ ತಪ್ಪಿದ ನಂತರ ಶರಣ್ಯ ಒಂದು ಸಣ್ಣ ಹೊಳೆ ಹತ್ತಿರದ ದೊಡ್ಡ ಕಲ್ಲಿನ ಮೇಲೆ ಕುಳಿತುಕೊಂಡು ರಕ್ಷಣೆಗಾಗಿ ಕಾಯುತ್ತಿದ್ದಳು. ಅವಳ ಬಳಿ 500 ಮಿಲಿ ಲೀಟರ್ ನೀರಿನ ಬಾಟಲ್ ಮಾತ್ರ ಇತ್ತು. ಅದನ್ನು ಹೊಳೆಯಿಂದ ಮತ್ತೆ ಮತ್ತೆ ತುಂಬಿಕೊಂಡು ಕುಡಿದು ಬದುಕುಳಿದಳು. “ಈ ಟ್ರೆಕ್ ಸುಲಭ ಎಂದು ಭಾವಿಸಿ ನಾನು ಆಹಾರ ತೆಗೆದುಕೊಂಡಿರಲಿಲ್ಲ. ನಾನು ದಿನಕ್ಕೆ ಸುಮಾರು ಮೂರು ಲೀಟರ್ ನೀರಿನ ಮೇಲೆ ಬದುಕಿದ್ದೆ,” ಎಂದು ಶರಣ್ಯ ಹೇಳಿದ್ದಾರೆ.
“ರಾತ್ರಿ ವೇಳೆ ಎಲ್ಲ ದಿಕ್ಕಿನಿಂದಲೂ ಶಬ್ದಗಳು ಬರುತ್ತಿದ್ದವು, ಅದು ಸ್ವಲ್ಪ ಭಯ ಹುಟ್ಟಿಸಿತು. ಆದರೂ ನಾನು ಧೈರ್ಯದಿಂದ ಎದುರಿಸಿದೆ. ಆ ದಿನಗಳಲ್ಲಿ ನನಗೆ ಹಸಿವು ಸಹ ಆಗಲಿಲ್ಲ. ಈಗಲೂ ನನಗೆ ಹಸಿವು ಅನ್ನಿಸುತ್ತಿಲ್ಲ,” ಎಂದು ಅವಳು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯನ್ನು ಸಂಗ್ರಹಿಸಿದ ಪೊಲೀಸರು, ಫೂಟೇಜ್ಗಳನ್ನು ಪರಿಶೀಲಿಸಿ ನೋಡಿದಾಗ, ಟ್ರೆಕ್ಕಿಂಗ್ನ ಎಂಟ್ರಿ ಗೇಟ್ನಲ್ಲಿ ಆಕೆ ಹೋಗಿರುವುದು ಕಾಣಿಸಿದೆ. ಆದರೆ, ಹಿಂತಿರುಗುವ ಒಂದೇ ಒಂದು ದೃಶ್ಯ ಕೂಡ ಲಭ್ಯವಿರಲಿಲ್ಲ.
ಕಣ್ಮರೆಯಾಗುವ ಮೊದಲು ಶರಣ್ಯ ಫೋನ್ ಕಾಲ್ ಮಾಡಿದ್ದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಎರಡು ದಿನಗಳಿಂದ ನಿರಂತರವಾಗಿ ಹುಡುಕಾಡಿದರೂ ಆಕೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಭಾನುವಾರ ಮಹಿಳೆ ಪತ್ತೆಯಾಗಿದ್ದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.






















