ನವದೆಹಲಿ: ಖ್ಯಾತ ಲೇಖಕಿ ಅರುಂಧತಿ ರಾಯ್‌ರವರ ಆತ್ಮಚರಿತ್ರೆಯಾದ ‘ಮದರ್ ಮೇರಿ ಕಮ್ಸ್ ಟು ಮಿ’ ಪುಸ್ತಕದ ಮಾರಾಟಕ್ಕೆ ನಿರ್ಬಂಧನೆ ಹೇರಲು ಒತ್ತಾಯಿಸಗಾಗಿತ್ತು. ಹಾಗೇ ಪ್ರಸಾರ ಮತ್ತು ಪ್ರದರ್ಶನವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಆದರೆ ಪುಸ್ತಕದ ಮೇಲೆ ನಿಷೇಧ ಹೇರಲು ನಿರಾಕರಿಸಿದ್ದ ಕೇರಳ ಹೈಕೋರ್ಟ್ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿಹಿಡಿದಿದೆ.
ರಾಜಸಿಂಹನ್ ಎಂಬುವರು ಕೇರಳ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ನಿ, ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು.
ಮುಖಪುಟ ಚಿತ್ರದ ಬಗ್ಗೆ ಅರ್ಜಿದಾರರ ವಾದ ವಜಾ: ಪುಸ್ತಕದ ಮುಖಪುಟದಲ್ಲಿ ಲೇಖಕಿ ಅರುಂಧತಿ ರಾಯ್ ‘ಬೀಡಿ’ ಅಥವಾ ‘ಸಿಗರೇಟ್’ ಸೇದುತ್ತಿರುವ ಚಿತ್ರವನ್ನು ಪ್ರಕಟಿಸಿರುವುದು ಕಾನೂನು ವಿರೋಧಿಯಾಗಿದೆ ಎಂದು ಅರ್ಜಿದಾರರು ತಮ್ಮ ವಾದವನ್ನ ಮಂಡಿಸಿದ್ದರು.
ಹಾಗೇ ಈ ಕುರಿತು ಪ್ರತಿಕ್ರಿಯಿಸಿದ ಸಿಜೆಐ, “ಪ್ರಸಿದ್ಧ ಲೇಖಕಿ ಆಗಿರುವ ಅರುಂಧತಿ ರಾಯ್ ಅಂತಹ ವಿಷಯಗಳನ್ನು ಪ್ರಚಾರ ಮಾಡುತ್ತಿಲ್ಲ. ಅಲ್ಲದೆ, ಪುಸ್ತಕದ ಚಿತ್ರವು ನಗರದ ಯಾವುದೇ ಹೋರ್ಡಿಂಗ್‌ನಲ್ಲಿಲ್ಲ ಎಂದರು. ಪುಸ್ತಕವನ್ನು ತೆಗೆದುಕೊಂಡು ಓದುವವರು ಮಾತ್ರ ಅದನ್ನು ನೋಡುತ್ತಾರೆ,” ಎಂದು ಅಭಿಪ್ರಾಯವನ್ನ ತಿಳಿಸಿದರು.
‘ಕೋಟ್ಪಾ’ ಕಾಯಿದೆ ಉಲ್ಲಂಘನೆಯಾಗಿಲ್ಲ: ಲೇಖಕರು ಮತ್ತು ಪ್ರಕಾಶಕ ಸಂಸ್ಥೆ ಪೆಂಗ್ವಿನ್ ಹಮಿಶ್ ಹ್ಯಾಮಿಲ್ಟನ್ ಸಹ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ-2003ರ (COTPA-2003) ಕಲಂ 5 ಅನ್ನು ಉಲ್ಲಂಘಿಸಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ, ಕೇರಳ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸೂಕ್ತ ಕಾರಣವಿಲ್ಲ ಎಂದು ತಿಳಿಸಿದ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ವಜಾಗೊಳಿಸಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಖಚಿತಪಡಿಸಿತು.
ಸುಪ್ರೀಂ ಕೋರ್ಟ್‌ನ ನಿರ್ಧಾರವು ಅರುಂಧತಿ ರಾಯ್ ಆತ್ಮಚರಿತ್ರೆಯಾದ ‘ಮದರ್ ಮೇರಿ ಕಮ್ಸ್ ಟು ಮಿ’ ಪುಸ್ತಕದ ಪ್ರಕಟಣೆ ಮತ್ತು ಪ್ರಸಾರಕ್ಕೆ ದೃಢವಾದ ಬೆಂಬಲ ನೀಡಿದಂತಾಗಿದೆ ಎನ್ನಲಾಗುತ್ತಿದೆ.





















