ಬಿಹಾರ ಚುನಾವಣೆ: ಬಿಜೆಪಿ ಅಭ್ಯರ್ಥಿ ಆಗಲಿದ್ದಾರಾ ಮೋದಿ ಮೆಚ್ಚಿದ ಮೈಥಿಲಿ

0
44

ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಅಖಾಡದಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಈ ಬಾರಿ, 25 ವರ್ಷದ ಜನಪ್ರಿಯ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಹೆಸರು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮೈಥಿಲಿ ಠಾಕೂರ್ ಮುಂಬರುವ ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಇತ್ತೀಚೆಗೆ ಮೈಥಿಲಿ ಠಾಕೂರ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತ್ತು ಕೇಂದ್ರ ಸಚಿವ ನಿತ್ಯಾನಂದ ರಾಯ್ ಅವರನ್ನು ಭೇಟಿಯಾದ ನಂತರ ಈ ಚರ್ಚೆಗಳು ಮತ್ತಷ್ಟು ತೀವ್ರಗೊಂಡಿವೆ. ಈ ಭೇಟಿಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ಪ್ರವೇಶದ ಸಾಧ್ಯತೆಗಳಿಗೆ ಮತ್ತಷ್ಟು ಪುಷ್ಟಿ ನೀಡಿವೆ.ಪಿಟಿಐನೊಂದಿಗೆ ಮಾತನಾಡಿದ ಮೈಥಿಲಿ, ತಮ್ಮ ಹುಟ್ಟೂರು ಮಧುಬನಿ ಜಿಲ್ಲೆಯ ಬೇಣಿಪಟ್ಟಿಯಿಂದ ರಾಜಕೀಯಕ್ಕೆ ಪ್ರವೇಶಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

“ರಾಜಕೀಯಕ್ಕೆ ಬರುವ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ, ಆದರೆ ನನ್ನ ಹಳ್ಳಿ ಪ್ರದೇಶಕ್ಕೆ ಹೋಗಲು ನಾನು ಬಯಸುತ್ತೇನೆ. ನನಗೆ ಅದರೊಂದಿಗೆ ವಿಶೇಷ ಸಂಬಂಧವಿದೆ. ರಾಜಕೀಯ ಪಯಣವನ್ನು ನನ್ನ ಊರಿನಿಂದ ಪ್ರಾರಂಭಿಸುವುದರಿಂದ ನನಗೆ ಕಲಿಯಲು ಅವಕಾಶ ಸಿಗುತ್ತದೆ, ಜನರನ್ನು ಭೇಟಿಯಾಗುವುದು, ಅವರೊಂದಿಗೆ ಮಾತನಾಡುವುದು ಸಾಧ್ಯವಾಗುತ್ತದೆ,” ಎಂದು ಹೇಳಿದ್ದಾರೆ.

ಮೈಥಿಲಿ ಠಾಕೂರ್ ಹಲವು ಸಂಗೀತ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮಧುರ ಕಂಠದಿಂದ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. 2024ರಲ್ಲಿ ಪ್ರಧಾನಿ ಮೋದಿಯವರಿಂದ ‘ನ್ಯಾಷನಲ್ ಕ್ರಿಯೇಟರ್ ಪ್ರಶಸ್ತಿ’ಯನ್ನೂ ಪಡೆದಿದ್ದಾರೆ. ಅವರ ಜನಪ್ರಿಯತೆ ಮತ್ತು ರಾಜ್ಯದ ಅಭಿವೃದ್ಧಿಯ ಬಗೆಗಿನ ಆಸಕ್ತಿ, ಅವರನ್ನು ರಾಜಕೀಯಕ್ಕೆ ಕರೆತರಲು ಬಿಜೆಪಿಗೆ ಆಕರ್ಷಣೀಯವಾಗಿಸಿದೆ.

“ಸಾಧ್ಯವಿರುವ ಎಲ್ಲಾ ರೀತಿಯಲ್ಲೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಸಿದ್ಧಳಿದ್ದೇನೆ. ತಾವೆ ಮತ್ತು ರಾಯ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಬಿಹಾರದ ಅಭಿವೃದ್ಧಿಯ ಬಗ್ಗೆ ಚರ್ಚಿಸಿದ್ದೇನೆ,” ಎಂದು ಮೈಥಿಲಿ ಸ್ಪಷ್ಟಪಡಿಸಿದ್ದಾರೆ. ಬಿಹಾರ ವಿಧಾನಸಭೆ ಚುನಾವಣೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ. ಈ ಸಂದರ್ಭದಲ್ಲಿ ಮೈಥಿಲಿ ಠಾಕೂರ್ ಅವರ ರಾಜಕೀಯ ಪ್ರವೇಶದ ಕುತೂಹಲ ಇಡೀ ರಾಜ್ಯದ ಗಮನ ಸೆಳೆದಿದೆ.

Previous articleಮಂಗಳೂರು: ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ರೋಗಿಗಳಿಗಿಲ್ಲ ESI ಸೌಲಭ್ಯ – ಶಾಸಕ ಕಾಮತ್
Next articleಪಿಎಂಎಫ್‍ಎಂಇ ಸಹಕಾರ: ಉದ್ಯಮಿಯಾಗಿ ಯಶಸ್ಸು ಕಂಡ ಉತ್ತರ ಕನ್ನಡ ಮಹಿಳೆ

LEAVE A REPLY

Please enter your comment!
Please enter your name here