Home Advertisement
Home ಸುದ್ದಿ ದೇಶ ಸೇನೆಯ ಮೇಜರಿಂದ ಡಿವೋರ್ಸ್‌ ಪಡೆದ ಮಗಳಿಗೆ ಬ್ಯಾಂಡ್-ಬಾಜಾ ಸ್ವಾಗತ: ವೈರಲ್ ಆಯ್ತು ‘ವಿಚ್ಛೇದನ’ ಸಂಭ್ರಮ!

ಸೇನೆಯ ಮೇಜರಿಂದ ಡಿವೋರ್ಸ್‌ ಪಡೆದ ಮಗಳಿಗೆ ಬ್ಯಾಂಡ್-ಬಾಜಾ ಸ್ವಾಗತ: ವೈರಲ್ ಆಯ್ತು ‘ವಿಚ್ಛೇದನ’ ಸಂಭ್ರಮ!

0
30

ನಮ್ಮ ಸಮಾಜದಲ್ಲಿ ‘ವಿಚ್ಛೇದನ’ ಅಥವಾ ಡಿವೋರ್ಸ್ ಎಂದರೆ ಅದೊಂದು ಮುಚ್ಚಿಡಬೇಕಾದ ವಿಚಾರ, ಅದೊಂದು ದೊಡ್ಡ ಕಳಂಕ ಎಂದೇ ಭಾವಿಸಲಾಗುತ್ತದೆ. ಆದರೆ, ಉತ್ತರ ಪ್ರದೇಶದ ಮೀರತ್‌ನಲ್ಲಿ ತಂದೆಯೊಬ್ಬರು ಸಮಾಜದ ಈ ಹಳೆಯ ಕಟ್ಟುಪಾಡುಗಳನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಕಣ್ಣೀರು ಹಾಕುತ್ತಾ ನ್ಯಾಯಾಲಯದಿಂದ ಹೊರಬರಬೇಕಿದ್ದ ಮಗಳನ್ನು, ಈ ತಂದೆ ಬ್ಯಾಂಡ್-ಬಾಜಾ, ಸಿಹಿ ಹಂಚಿಕೆ ಹಾಗೂ ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ಅದ್ಧೂರಿಯಾಗಿ ಮನೆಗೆ ಬರಮಾಡಿಕೊಂಡಿದ್ದಾರೆ!

ಏನಿದು ಘಟನೆ?: ಮೀರತ್‌ನ ಜ್ಞಾನೇಂದ್ರ ಶರ್ಮಾ ಏಕೈಕ ಪುತ್ರಿ ಪ್ರಣಿತಾ ಶರ್ಮಾ ಬದುಕಿನ ಕಥೆ ಇದು. 2018ರಲ್ಲಿ ಪ್ರಣಿತಾರನ್ನು ಭಾರತೀಯ ಸೇನೆಯಲ್ಲಿ ಮೇಜರ್ ಆಗಿರುವ ಗೌರವ್ ಅಗ್ನಿಹೋತ್ರಿ ಎಂಬುವವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು.

ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಗಂಡನ ಮನೆಯವರ ವರದಕ್ಷಿಣೆ ಕಿರುಕುಳ ಹಾಗೂ ದೌರ್ಜನ್ಯ ಮಿತಿಮೀರಿತ್ತು. ದಿನನಿತ್ಯದ ನರಕಯಾತನೆ ತಾಳಲಾರದೆ ಪ್ರಣಿತಾ, ಈ ವಿಷಕಾರಿ ಸಂಬಂಧದಿಂದ ಹೊರಬರಲು ನಿರ್ಧರಿಸಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಅಪ್ಪನ ಅದ್ಧೂರಿ ಸ್ವಾಗತ: ಸುದೀರ್ಘ ಕಾನೂನು ಹೋರಾಟದ ಬಳಿಕ, ನ್ಯಾಯಾಲಯವು ಪ್ರಣಿತಾಗೆ ಅಧಿಕೃತವಾಗಿ ವಿಚ್ಛೇದನ ಮಂಜೂರು ಮಾಡಿತು. ಈ ತೀರ್ಪು ಹೊರಬರುತ್ತಿದ್ದಂತೆಯೇ ನ್ಯಾಯಾಲಯದ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು! ಮಗಳಿಗೆ ಸಿಹಿ ತಿನಿಸಿದ ತಂದೆ ಜ್ಞಾನೇಂದ್ರ ಶರ್ಮಾ, ಸಂಬಂಧಿಕರ ಜೊತೆ ಸೇರಿ ತಮಟೆ ಸದ್ದಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿದರು.

ವಿಶೇಷವೆಂದರೆ, ಆ ತಂದೆ ಧರಿಸಿದ್ದ ಟಿ-ಶರ್ಟ್ ಮೇಲೆ ಮಗಳ ಫೋಟೋ ಹಾಕಿ, “ನನ್ನ ಮಗಳೇ ನನ್ನ ಪ್ರಾಣ, ಅವಳೇ ನನ್ನ ಹೃದಯ” ಎಂದು ಬರೆಸಲಾಗಿತ್ತು. ಮಗಳಿಗೆ ಹೂವಿನ ಹಾರ ಹಾಕಿ, ರಾಜಕುಮಾರಿಯಂತೆ ಮನೆಗೆ ಕರೆದೊಯ್ಯಲಾಯಿತು.