ಜಿಎಸ್‌ಟಿಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಸೆಪ್ಟೆಂಬರ್ 22ರಿಂದಲೇ ಇದು ಜಾರಿಗೆ ಬರಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಮಂಡಳಿಯ ಸಭೆಯ ಬಳಿಕ ಬದಲಾವಣೆ ಕುರಿತು ವಿವರ ನೀಡಲಾಗಿದೆ.
ಜಿಎಸ್‌ಟಿ ಬದಲಾವಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ‘ಸಾಮಾನ್ಯ ಜನರು, ರೈತರು, ಎಂ.ಎಸ್.ಎಂ.ಇಗಳು, ಮಧ್ಯಮ ವರ್ಗ, ಮಹಿಳೆಯರು ಮತ್ತು ಯುವಕರಿಗೆ ಅನುಕೂಲವಾಗಬಲ್ಲ ಜಿಎಸ್‌ಟಿ ದರ ಕಡಿತ ಮತ್ತು ಸುಧಾರಣೆಗಳ ಕೇಂದ್ರ ಸರ್ಕಾರದ ಪ್ರಸ್ತಾವನೆಗಳಿಗೆ ಸಂಘಟಿತ ಸಹಮತ ನೀಡಿದ ಜಿಎಸ್‌ಟಿ ಮಂಡಳಿಯ ನಡೆಗೆ ಪ್ರಧಾನಮಂತ್ರಿ ಮೆಚ್ಚುಗೆ ಸೂಚಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ‘ಈ ವ್ಯಾಪಕ ಸುಧಾರಣೆಗಳು ನಮ್ಮ ನಾಗರಿಕರ ಜೀವನವನ್ನು ಉನ್ನತೀಕರಿಸಲಿದೆ ಮತ್ತು ಎಲ್ಲರಿಗೂ ವಿಶೇಷವಾಗಿ ಸಣ್ಣ ವರ್ತಕರಿಗೆ ಮತ್ತು ಉದ್ಯಮಿಗಳಿಗೆ ಸುಲಲಿತ ವ್ಯಾಪಾರ ಖಚಿತಪಡಿಸಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ಖಾತೆಯ ಪೋಸ್ಟ್‌ನಲ್ಲಿ, “ನನ್ನ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ, ಜಿಎಸ್‌ಟಿಯಲ್ಲಿ ಭವಿಷ್ಯದ ಪೀಳಿಗೆಯ ಸುಧಾರಣೆಗಳನ್ನು ತರುವ ನಮ್ಮ ಉದ್ದೇಶದ ಬಗ್ಗೆ ಮಾತನಾಡಿದ್ದೆ. ಆರ್ಥಿಕತೆಯನ್ನು ಬಲಪಡಿಸುವ ಮತ್ತು ಸಾಮಾನ್ಯ ಜನರಿಗೆ ಸುಲಲಿತ ಜೀವನ ಒದಗಿಸುವ ಗುರಿಯನ್ನು ಹೊಂದಿರುವ ವಿಶಾಲ ವ್ಯಾಪ್ತಿಯ ಜಿಎಸ್‌ಟಿ ದರ ತರ್ಕಬದ್ಧಗೊಳಿಸುವಿಕೆ ಮತ್ತು ಸುಧಾರಣೆಗಳ ಪ್ರಕ್ರಿಯೆಗಳ ಬಗ್ಗೆ ಕೇಂದ್ರ ಸರ್ಕಾರವು ವಿಸ್ತೃತ ಪ್ರಸ್ತಾವನೆಯನ್ನು ಸಿದ್ಧಪಡಿಸಿತ್ತು’ ಎಂದು ತಿಳಿಸಿದ್ದಾರೆ.
‘ಕೇಂದ್ರ ಮತ್ತು ರಾಜ್ಯಗಳನ್ನೊಳಗೊಂಡ ಜಿಎಸ್‌ಟಿ ಮಂಡಳಿಯು ಸಾಮಾನ್ಯ ಜನರು, ರೈತರು, ಎಂ.ಎಸ್.ಎಂ.ಇ ಗಳು, ಮಧ್ಯಮ ವರ್ಗ, ಮಹಿಳೆಯರು ಮತ್ತು ಯುವಕರಿಗೆ ಪ್ರಯೋಜನಕಾರಿಯಾಗುವ ಜಿಎಸ್‌ಟಿ ದರ ಕಡಿತ ಮತ್ತು ಸುಧಾರಣೆಗಳ ಬಗ್ಗೆ ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಗಳಿಗೆ ಸಾಮೂಹಿಕವಾಗಿ ಸಮ್ಮತಿ ನೀಡಿದೆ ಎಂದು ತಿಳಿಸಲು ಹರ್ಷಿಸುತ್ತೇನೆ’ ಎಂದು ಹೇಳಿದ್ದಾರೆ.
‘ವ್ಯಾಪಕ ಶ್ರೇಣಿಯ ಸುಧಾರಣೆಗಳು ನಮ್ಮ ನಾಗರಿಕರ ಜೀವನವನ್ನು ಮೇಲ್ದರ್ಜೆಗೇರಿಸಲಿವೆ ಮತ್ತು ಎಲ್ಲರಿಗೂ, ವಿಶೇಷವಾಗಿ ಸಣ್ಣ ವರ್ತಕರು ಮತ್ತು ಉದ್ಯಮಗಳಿಗೆ ಸುಲಲಿತ ವ್ಯಾಪಾರ ವ್ಯವಹಾರವನ್ನು ಖಚಿತಪಡಿಸಲಿದೆ’ ಎಂದು ನರೇಂದ್ರ ಮೋದಿ ಪೋಸ್ಟ್ ಹಾಕಿದ್ದಾರೆ.
ಜಿಎಸ್‌ಟಿಯ ಹೊಸ ನೀತಿ ಅರ್ಥ ಮಾಡಿಕೊಳ್ಳಲು ಅತ್ಯಂತ ಸರಳವಾಗಿದೆ. ಇನ್ನು ಮುಂದೆ ಜಿಎಸ್‌ಟಿ ಎರಡು ಸ್ಲಾಬ್‌ಗಳನ್ನು ಮಾತ್ರ ಒಳಗೊಂಡಿರುತ್ತದೆ. ಇಷ್ಟು ದಿನ ಶೇ 5, ಶೇ 12, ಶೇ 18 ಮತ್ತು ಶೇ 28 ಎಂಬ 4 ಸ್ಲಾಬ್‌ಗಳಿತ್ತು. ಇನ್ನು ಮುಂದೆ ಶೇ 5 ಮತ್ತು ಶೇ 18 ಮಾತ್ರ ಇರಲಿದೆ.
ಹಲವು ವಸ್ತುಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಮ್ಯಾಪ್, ಗ್ಲೋಬ್, ರಬ್ಬರ್, ನೋಟ್ ಬುಕ್, ಪೆನ್ಸಿಲ್, ಶಾರ್ಪ್‌ನರ್, ಬಣ್ಣದ ಪೆನ್ಸಿಲ್‌ಗಳಿಗೆ ವಿನಾಯತಿ ಇದೆ.