ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಪಡೆಯಲು ಯುವಜನತೆ ಏನೆಲ್ಲಾ ಸರ್ಕಸ್ ಮಾಡುತ್ತಾರೆ ಎನ್ನುವುದನ್ನು ಕೇಳಿದರೆ ನಿಮಗೆ ಆಶ್ಚರ್ಯ ಆಗುತ್ತೆ. ಇದರಲ್ಲಿ ಇನ್ನೂ ಕೆಲವರಂತೂ ತಮ್ಮ ಜೀವವನ್ನೇ ಪಣಕಿಟ್ಟು ಜನರ ಗಮನವನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಾರೆ.
ಇವುಗಳ ಮಧ್ಯೆ ಜನರ ಸೆಲ್ಫಿ ಹುಚ್ಚಂತೂ ಈಗ ಅತಿರೇಕಕ್ಕೆ ಹೋಗಿದೆ. ಫೋನ್ ತೆಗೆದುಕೊಂಡು ಎಲ್ಲೆಂದರಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಜಾಗ ಯಾವುದು, ಅಲ್ಲಿ ನಮ್ಮ ಜೀವಕ್ಕೆ ಅಪಾಯವಿದೆಯಾ? ಎನ್ನುವ ಕನಿಷ್ಠ ಅರಿವು ಕೂಡ ಆ ವೇಳೆ ಅವರಿಗೆ ಇರುವುದಿಲ್ಲ.
ಹೀಗಿರುವಾಗ ದಿ ಬಾರ್ಬರ್ ಲಾ ಫರ್ಮ್‌ನ ಇತ್ತೀಚಿನ ಅಧ್ಯಯನ ಒಂದು ಆಘಾತಕಾರಿ ಅಂಕಿ ಅಂಶವನ್ನು ಪ್ರಕಟಿಸಿದೆ. ಸೆಲ್ಫಿ ತೆಗೆದುಕೊಳ್ಳಲಾಗುತ್ತಿರುವ ಪ್ರಪಂಚದ ಅತ್ಯಂತ ಅಪಾಯಕಾರಿ ಸ್ಥಳಗಳನ್ನು ಬಹಿರಂಗಪಡಿಸಿದೆ. ಅಲ್ಲದೇ ಇನ್ನೊಂದು ಆಘಾತಕಾರಿ ಸಂಗತಿ ಎಂದರೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸಂಭವಿಸುತ್ತಿರುವ ಸಾವುಗಳಲ್ಲಿ ಭಾರತವೇ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ.
ಕಳೆದ 11 ವರ್ಷಗಳ ಅವಧಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಉಂಟಾದ ದುರ್ಘಟನೆಗಳನ್ನು ಸಂಶೋಧನೆ ಒಳಪಡಿಸಲಾಗಿದ್ದು, ಮಾರ್ಚ್ 2014ರಿಂದ ಮೇ 2025ರ ವರೆಗಿನ ಜಾಗತಿಕ ವರದಿಗಳನ್ನು ಈ ಸಂಶೋಧನೆಯು ವಿಶ್ಲೇಷಿಸಿದೆ.
ಸೆಲ್ಫಿ ತೆಗೆದುಕೊಳ್ಳುವಾಗ ಪ್ರಪಂಚದಾದ್ಯಂತ ನಡೆದಿರುವ ಘಟನೆಗಳಲ್ಲಿ ಶೇಕಡಾ 42.1ರಷ್ಟು ಪ್ರಕರಣಗಳು ಭಾರತದಲ್ಲಿ ದಾಖಲಾಗಿವೆ. ಅಂದರೆ 271 ಘಟನೆಗಳು ಭಾರತದಲ್ಲಿ ನಡೆದಿದ್ದು, ಇದರಲ್ಲಿ 214 ಮೃತಪಟ್ಟ ಘಟನೆಯಾಗಿದ್ದರೆ 57 ಗಾಯಗೊಂಡ ಪ್ರಕರಣಗಳಾಗಿವೆ.
ಇನ್ನು ತಜ್ಞರ ಪ್ರಕಾರ ಭಾರತದಲ್ಲಿ ಯುವಕರು ಸಾಮಾಜಿಕ ಮಾಧ್ಯಮಗಳತ್ತ ಹೆಚ್ಚು ಆಕರ್ಷಿತರಾಗಿದ್ದು, ಅದರಲ್ಲಿ ಗಮನ ಸೆಳೆಯಲೆಂದು ರಿಸ್ಕ್ ತೆಗೆದುಕೊಳ್ಳುತ್ತಾರೆ. ಅಲ್ಲದೇ ಭಾರತದ ಜನಸಂಖ್ಯೆ, ಅಪಾಯಕಾರಿ ಸ್ಥಳಗಳು, ಪ್ರವಾಸಿ ಸ್ಥಳಗಳಲ್ಲಿನ ಅಭದ್ರತೆ, ಸಾಮಾಜಿಕ ಜಾಲತಾಣದ ಹುಚ್ಚು ಇಂತಹ ಘಟನೆಗಳಿಗೆ ಸಾಕ್ಷಿಯಾಗಿವೆ.
ಭಾರತಕ್ಕೆ ಮೊದಲ ಸ್ಥಾನ: ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ 271 ದುರ್ಘಟನೆಗಳು ಭಾರತದಲ್ಲಿ ನಡೆದಿದ್ದು ಈ ಮೂಲಕ ಮೊದಲ ಸ್ಥಾನದಲ್ಲಿದೆ. ಯುನೈಟೆಡ್ ಸ್ಟೇಟ್ಸ್ ಎರಡನೇ ಸ್ಥಾನದಲ್ಲಿದ್ದು, 45 ಘಟನೆಗಳು ಸಂಭವಿಸಿದೆ. ಇದರಲ್ಲಿ 37 ಸಾವು, 8 ಗಾಯಗೊಂಡ ಪ್ರಕರಣವಾಗಿವೆ. ರಷ್ಯಾ 19 ಘಟನೆಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇದರಲ್ಲಿ 18 ಸಾವು, 1 ಗಾಯಗೊಂಡ ಪ್ರಕರಣವಾಗಿದೆ. ನಾಲ್ಕನೇ ಸ್ಥಾನದಲ್ಲಿರುವ ಪಾಕಿಸ್ತಾನದಲ್ಲಿ 16 ಘಟನೆಗಳು ನಡೆದಿದ್ದು ಎಲ್ಲ ಪ್ರಕರಣದಲ್ಲಿ ಸಾವು ಸಂಭವಿಸಿದೆ. ಆಸ್ಟ್ರೇಲಿಯಾದಲ್ಲಿ 13 ಸಾವು, 2 ಗಾಯ ಸೇರಿ 15 ಘಟನೆ ನಡೆದಿದ್ದು, ಐದನೇ ಸ್ಥಾನದಲ್ಲಿದೆ.
ರೀಲ್ಸ್ ಮಾಡಲು ಹೋಗಿ ಕೊಚ್ಚಿಹೋದ ಯೂಟ್ಯೂಬರ್: ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿದ್ದ ಯೂಟ್ಯೂಬರ್ ಕೊಚ್ಚಿಹೋದ ಘಟನೆ ಆಗಸ್ಟ್ 25ರಂದು ಒಡಿಶಾದ ಕೊರಾಪುಟ್ ಜಿಲ್ಲೆಯಲ್ಲಿ ನಡೆದಿದ್ದು, ಈ ಸುದ್ದಿಗೆ ಅತ್ಯಂತ ತಾಜಾ ಉದಾಹರಣೆಯಾಗಿದೆ. 22 ವರ್ಷದ ಸಾಗರ್ ತುಡು ಎಂಬಾತ ದುಡುಮಾ ಜಲಪಾತದಲ್ಲಿ ತನ್ನ ಯೂಟ್ಯೂಬ್ ಚಾನೆಲ್‌ಗಾಗಿ ವೀಡಿಯೋ ಚಿತ್ರೀಕರಿಸಲು ಬಂದಿದ್ದಾಗ ಈ ಘಟನೆ ನಡೆದಿತ್ತು. ಜಲಪಾತದ ನೀರು ಹರಿಯುವ ಮಧ್ಯದಲ್ಲಿ ಸಾಗರ ನಿಂತುಕೊಂಡು ಚಿತ್ರೀಕರಣ ಮಾಡುವ ವೇಳೆ ಏಕಾಏಕಿ ನೀರು ಬಂದಿದ್ದು, ಬಂಡೆಯ ಮೇಲೆ ನಿಂತಿದ್ದ ಸಾಗರ್ ಕೊಚ್ಚಿ ಹೋಗಿದ್ದಾನೆ.