ನವದೆಹಲಿ: ನರೇಂದ್ರ ಮೋದಿಯನ್ನು ಉಪ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಭೇಟಿ ಮಾಡಿದರು. ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಆಗಸ್ಟ್ 21 ಕೊನೆಯ ದಿನವಾಗಿದೆ.
ಭಾನುವಾರ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯ ಬಳಿಕ ಸಿ.ಪಿ.ರಾಧಾಕೃಷ್ಣನ್ ಉಪ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು.
ಮಹಾರಾಷ್ಟ್ರ ರಾಜ್ಯಪಾಲರಾದ ಸಿ.ಪಿ.ರಾಧಾಕೃಷ್ಣನ್ ಸೋಮವಾರ ನವದೆಹಲಿಗೆ ಭೇಟಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಭೇಟಿಯಾದರು. ಉಪ ರಾಷ್ಟ್ರಪತಿ ಚುನಾವಣೆಗೆ ಸಿ.ಪಿ.ರಾಧಾಕೃಷ್ಣನ್ ಎಂದು ನಾಮಪತ್ರ ಸಲ್ಲಿಸಲಿದ್ದಾರೆ? ಎಂಬುದು ಇನ್ನೂ ಖಚಿತವಾಗಿಲ್ಲ.
ನರೇಂದ್ರ ಮೋದಿ ಪೋಸ್ಟ್: ಪ್ರಧಾನಿ ನರೇಂದ್ರ ಮೋದಿ ಸಿ.ಪಿ.ರಾಧಾಕೃಷ್ಣನ್ ಭೇಟಿಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ ಮೋದಿ, ಸಿ.ಪಿ.ರಾಧಾಕೃಷ್ಣನ್ ಅವರ ದೀರ್ಘಕಾಲದ ಸಾಮಾಜಿಕ ಸೇವೆ ವಿವಿಧ ಕ್ಷೇತ್ರದ ಅನುಭವ ನಮ್ಮ ದೇಶದ ಆಡಳಿತಕ್ಕೆ ಸಹಕಾರಿಯಾಗಲಿದೆ. ಸಮರ್ಪಣೆ ಮತ್ತು ಸಂಕಲ್ಪದೊಂದಿಗೆ ಅವರ ಸೇವೆ ರಾಷ್ಟ್ರಕ್ಕೆ ಮುಂದುವರೆಯಲಿ ಎಂದು ಹೇಳಿದ್ದಾರೆ.
ಉಪ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಆಗಸ್ಟ್ 21 ಕೊನೆಯ ದಿನವಾಗಿದೆ. ಸಿ.ಪಿ.ರಾಧಾಕೃಷ್ಣನ್ ಎಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ? ಎಂಬುದು ಇನ್ನೂ ಅಂತಿಮಗೊಂಡಿಲ್ಲ.
ನಾಮಪತ್ರ ಸಲ್ಲಿಕೆ ಮಾಡುವ ಮೊದಲು ಅವರು ಮಹಾರಾಷ್ಟ್ರ ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ಸಲ್ಲಿಸಬೇಕಿದೆ. ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಬೇಕು. ಬಳಿಕ ಉಪ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಬೇಕು.
ಉಪ ರಾಷ್ಟ್ರಪತಿ ಚುನಾವಣೆ ಸೆಪ್ಟೆಂಬರ್ 9ರಂದು ಬೆಳಗ್ಗೆ 10 ಗಂಟೆಯಿಂದ ನಡೆಯಲಿದೆ. ಅಂದು ಸಂಜೆಯೇ ಮತ ಎಣಿಕೆ ಮಾಡಿ ಫಲಿತಾಂಶ ಘೋಷಣೆ ಮಾಡಲಾಗುತ್ತದೆ. ಉಪ ರಾಷ್ಟ್ರಪತಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆಯೇ? ಅಥವ ಚುನಾವಣೆ ನಡೆಯಲಿದೆಯೇ ಎಂಬುದು ಇನ್ನೂ ಅಂತಿಮವಾಗಿಲ್ಲ.
ಚುನಾವಣೆಗೆ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಇನ್ನೂ ಸಹ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಿಹಾರದಲ್ಲಿ ಮತ ಅಧಿಕಾರ ಯಾತ್ರೆ ಕೈಗೊಂಡಿದ್ದು, ದೆಹಲಿಯಲ್ಲಿ ಇಲ್ಲ.
ಉಪ ರಾಷ್ಟ್ರಪತಿ ಚುನಾವಣೆಗೆ ಲೋಕಸಭೆ, ರಾಜ್ಯಸಭೆ ಸದಸ್ಯರು ಮತದಾನ ಮಾಡಲಿದ್ದಾರೆ. ಎನ್‌ಡಿಎ ಮೈತ್ರಿಕೂಟ ಸದ್ಯ ಹೊಂದಿರುವ ಸದಸ್ಯ ಬಲದ ಆಧಾರದಲ್ಲಿ ಸುಲಭವಾಗಿ ಗೆಲುವು ಸಾಧಿಸಬಹುದಾಗಿದೆ. ಆದ್ದರಿಂದ ಇಂಡಿಯಾ ಮೈತ್ರಿಕೂಟ ಅಭ್ಯರ್ಥಿ ಕಣಕ್ಕಿಳಿಸುವ ಸಾಧ್ಯತೆ ಕಡಿಮೆ ಇದೆ.
ಸಿ.ಪಿ.ರಾಧಾಕೃಷ್ಣನ್ ಯಾರು?: ಸಿ.ಪಿ.ರಾಧಾಕೃಷ್ಣನ್ ಪೂರ್ಣ ಹೆಸರು ಚಂದ್ರಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್. ಪ್ರಸ್ತುತ ಮಹಾರಾಷ್ಟ್ರ ರಾಜ್ಯಪಾಲರು. ಜುಲೈ 31, 2024ರಂದು ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಸಿ.ಪಿ.ರಾಧಾಕೃಷ್ಣನ್ ಒಂದೂವರೆ ವರ್ಷ ಜಾರ್ಖಂಡ್ ರಾಜ್ಯಪಾಲರಾಗಿ, ತೆಲಂಗಾಣ ರಾಜ್ಯಪಾಲರಾಗಿ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಕೆಲಸ ನಿರ್ವಹಣೆ ಮಾಡಿದ್ದಾರೆ. ಆರ್‌ಎಸ್‌ಎಸ್ ಜೊತೆ ಮೊದಲು ಒಡನಾಟ ಹೊಂದಿದ್ದ ತಮಿಳುನಾಡು ರಾಜ್ಯದ ಸಿ.ಪಿ.ರಾಧಾಕೃಷ್ಣನ್ ಬಳಿಕ ಜನಸಂಘದ ಮೂಲಕ ಬಿಜೆಪಿ ಸೇರಿದರು.
ಎರಡು ಬಾರಿ ಅವರು ಸಂಸದರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬಿಬಿಎ ಪದವಿ ಪಡೆದಿರುವ ಸಿ.ಪಿ.ರಾಧಾಕೃಷ್ಣನ್ ಟೆಬಲ್ ಟೆನ್ನಿಸ್ ಚಾಂಪಿಯನ್, ಕ್ರಿಕೆಟ್ ಮತ್ತು ವಾಲಿಬಾಲ್ ಸಹ ಅವರಿಗೆ ಅಚ್ಚುಮೆಚ್ಚು.