ಬಿಹಾರ ವಿಧಾನಸಭಾ ಚುನಾವಣಾ ಕಣಕ್ಕಿಳಿಯುವ ಸಂಬಂಧ ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟಗಳಲ್ಲಿ ಸೀಟು ಹಂಚಿಕೆ ಕಸರತ್ತು ಚುರುಕುಗೊಂಡಿದೆ. ಕಳೆದ ಬಾರಿ ಸ್ಪರ್ಧಿಸಿದ್ದ ಎಲ್ಲ ಕ್ಷೇತ್ರಗಳಲ್ಲೂ ಗೆದ್ದಿದ್ದ ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ ಈ ಬಾರಿ 40 ಸೀಟುಗಳಿಗೆ ಪಟ್ಟು ಹಿಡಿದಿದೆ.
ಆದರೆ ಹೆಚ್ಚೆಂದರೆ 25 ಸ್ಥಾನಗಳನ್ನು ನೀಡಲಾಗುತ್ತದೆ ಎನ್ನಲಾಗಿದೆ. ಎನ್‌ಡಿಎ ಸೀಟು ಹಂಚಿಕೆ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ ಎಂದು ಎಚ್‌ಎಎಂ ನಾಯಕ ಸಂತೋಷ್ ಸುಮನ್ ತಿಳಿಸಿದ್ದಾರೆ. ನವೆಂಬರ್ 6, 11ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.
ಬಿಹಾರ ಚುನಾವಣಾ ಉಸ್ತುವಾರಿ ಹೊತ್ತಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಈ ಸೀಟು ಹಂಚಿಕೆ ಮಾತುಕತೆ ನಡೆಸುತ್ತಿದ್ದಾರೆ. ಇನ್ನು 2-3 ದಿನಗಳಲ್ಲಿ ಸೀಟು ಹೊಂದಾಣಿಕೆ ಸೂತ್ರವನ್ನು ಬಹಿರಂಗಗೊಳಿಸುವ ಸಾಧ್ಯತೆ ಇದೆ.
ಆದರೆ ಮೈತ್ರಿಕೂಟದ ಪ್ರಬಲ ಪಕ್ಷ ಜೆಡಿಯು 110 ಸ್ಥಾನಗಳಿಗೆ ಬೇಡಿಕೆ ಮುಂದಿಟ್ಟಿವೆ. ಬಿಜೆಪಿ ಸಹ ಅಷ್ಟೇ ಸಮಪಾಲು ಕೇಳುತ್ತಿದೆ. ಈ ಜಟಿಲತೆ ಸರಿದೂಗಿಸಲು ಸೂತ್ರವೊಂದನ್ನು ಸಿದ್ಧಪಡಿಸಲಾಗಿದೆ ಎನ್ನಲಾಗಿದೆ.
ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯದಲ್ಲೂ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳಲು ಕಸರತ್ತು ನಡೆಯುತ್ತಿದೆ. ಕಳೆದ ಬಾರಿ ಉತ್ತಮ ಫಲಿತಾಂಶ ನೀಡಿದ್ದ ಸಿಪಿಐ(ಎಂಎಲ್) ಈ ಬಾರಿ ಹೆಚ್ಚಿನ ಸ್ಥಾನಗಳಿಗೆ ಪಟ್ಟು ಹಿಡಿದಿದೆ.
ಕಾಂಗ್ರೆಸ್ 78 ಸೀಟುಗಳನ್ನು ಕೇಳುತ್ತಿದ್ದರೆ, ಕೇವಲ 48 ಸೀಟುಗಳನ್ನು ನೀಡುವುದಾಗಿ ಆರ್‌ಜೆಡಿ ಹೇಳುತ್ತಿದೆ. ಹಿಂದಿನ ಚುನಾವಣೆಗಳಲ್ಲಿ ತೆಗೆದುಕೊಂಡ ಮತಗಳ ಆಧಾರದ ಮೇಲೆ ಸೀಟುಗಳನ್ನು ನಿಗದಿಪಡಿಸಲಾಗುತ್ತಿದೆ.
ಸೀಟು ಹಂಚಿಕೆ ಕಗ್ಗಂಟು
- ಎನ್‌ಡಿಎ ಮೈತ್ರಿಕೂಟದಲ್ಲಿ ಕನಿಷ್ಠ 40 ಸ್ಥಾನ ಬೇಕೆನ್ನುತ್ತಿರುವ ಚಿರಾಗ್ ಪಾಸ್ವಾನ್
- ಪಾಸ್ವಾನ್ ನೇತೃತ್ವದ ಎಲ್ ಜೆಪಿಗೆ ಕೇವಲ 25 ಸ್ಥಾನ ನೀಡಲು ಎನ್‌ಡಿಎ ಚಿಂತನೆ
- ಮಹಾಘಟಬಂಧನದಲ್ಲಿ ಕನಿಷ್ಠ 78 ಸ್ಥಾನ ಬೇಕು ‘ಕೈ’ ಬೇಡಿಕೆ
- ಕಾಂಗ್ರೆಸ್‌ಗೆ ಕೇವಲ 48 ಸ್ಥಾನಗಳನ್ನು ನೀಡುವುದಾಗಿ ಹೇಳುತ್ತಿದೆ ಆರ್‌ಜೆಡಿ
- ಬಿಜೆಪಿಯಷ್ಟೇ ಸೀಟು ಬೇಕೆನ್ನುತ್ತಿದೆ ಜೆಡಿಯು