Home Advertisement
Home ಸುದ್ದಿ ದೇಶ ತಮಿಳುನಾಡು ಅಖಾಡದಲ್ಲಿ TVK ವಿಜಯ್‌ಗೆ ಬಿಗ್ ಶಾಕ್: ಮತದಾನಕ್ಕೂ ಮೊದಲೇ ‘ಟಿಕೆಟ್’ ವಿಕೆಟ್ ಪತನ!

ತಮಿಳುನಾಡು ಅಖಾಡದಲ್ಲಿ TVK ವಿಜಯ್‌ಗೆ ಬಿಗ್ ಶಾಕ್: ಮತದಾನಕ್ಕೂ ಮೊದಲೇ ‘ಟಿಕೆಟ್’ ವಿಕೆಟ್ ಪತನ!

0
80

ದಕ್ಷಿಣ ಭಾರತದ ರಾಜಕೀಯ ಅಖಾಡವೀಗ ರಂಗೇರಿದೆ. ಪಂಚ ರಾಜ್ಯಗಳ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ನಾಳೆ ಅಂದರೆ ಏಪ್ರಿಲ್ 9 ರಂದು ಕರ್ನಾಟಕದ ಎರಡು ಕ್ಷೇತ್ರಗಳ ಉಪಚುನಾವಣೆ ಹಾಗೂ ತಮಿಳುನಾಡು ಸೇರಿದಂತೆ ಮೂರು ರಾಜ್ಯಗಳಲ್ಲಿ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಆದರೆ, ತಮಿಳುನಾಡು ವಿಧಾನಸಭಾ ಚುನಾವಣೆಯ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆಯಲು ಹೊರಟಿದ್ದ ನಟ ವಿಜಯ್ ಜೋಸೆಫ್ ನೇತೃತ್ವದ ‘ಟಿವಿಕೆ’ (ತಮಿಳಗ ವೆಟ್ರಿ ಕಳಗಂ) ಪಕ್ಷಕ್ಕೆ ಮತದಾನಕ್ಕೂ ಮೊದಲೇ ಭಾರಿ ಹಿನ್ನಡೆಯಾಗಿದೆ.

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಡಿಎಂಕೆ ಮತ್ತು ಎಐಡಿಎಂಕೆ ನಡುವಿನ ಸಾಂಪ್ರದಾಯಿಕ ಹೋರಾಟಕ್ಕೆ ಈ ಬಾರಿ ದಳಪತಿ ವಿಜಯ್ ಅವರ ಎಂಟ್ರಿ ಹೊಸ ತಿರುವು ನೀಡಿತ್ತು. ಬಿಜೆಪಿ ಕೂಡ ತನ್ನ ಮತ ಹಂಚಿಕೆಯನ್ನು ಹೆಚ್ಚಿಸಿಕೊಳ್ಳುವ ತಂತ್ರ ರೂಪಿಸಿತ್ತು. ಇವೆಲ್ಲದರ ನಡುವೆ ಭಾರಿ ನಿರೀಕ್ಷೆ ಮೂಡಿಸಿದ್ದ ಟಿವಿಕೆ ಪಕ್ಷಕ್ಕೆ ಇದೀಗ ಆಘಾತಕಾರಿ ಸುದ್ಧಿಯೊಂದು ಎದುರಾಗಿದೆ. ರಾಜ್ಯದ ಪ್ರತಿಷ್ಠಿತ ಕ್ಷೇತ್ರ ಎನ್ನಲಾದ ‘ಎಡಪ್ಪಾಡಿ’ಯಲ್ಲಿ ಚುನಾವಣೆ ನಡೆಯುವ ಮೊದಲೇ ಟಿವಿಕೆ ತನ್ನ ಅಸ್ತಿತ್ವ ಕಳೆದುಕೊಂಡಿದೆ.

ನಾಮಪತ್ರ ತಿರಸ್ಕಾರದ ಹೈಡ್ರಾಮಾ
ಎಡಪ್ಪಾಡಿ ವಿಧಾನಸಭಾ ಕ್ಷೇತ್ರ ಎಂದರೆ ಅದು ಮಾಜಿ ಮುಖ್ಯಮಂತ್ರಿ ಹಾಗೂ ಎಐಡಿಎಂಕೆ ಪ್ರಬಲ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಭದ್ರಕೋಟೆ. ಇಂತಹ ಮಹತ್ವದ ಕ್ಷೇತ್ರದಲ್ಲಿ ಟಿವಿಕೆ ಪಕ್ಷದಿಂದ ಅರುಣ್ ಕುಮಾರ್ ಎಂ. ಎಂಬುವವರು ಕಣಕ್ಕಿಳಿದಿದ್ದರು. ಆದರೆ, ಚುನಾವಣಾ ಆಯೋಗದ ಸ್ಕ್ರುಟಿನಿ ವೇಳೆ ಅರುಣ್ ಕುಮಾರ್ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಕೇವಲ ಅಷ್ಟೇ ಅಲ್ಲ, ಮುಖ್ಯ ಅಭ್ಯರ್ಥಿಯ ನಾಮಪತ್ರದಲ್ಲಿ ತಾಂತ್ರಿಕ ತೊಂದರೆ ಎದುರಾಗಬಹುದು ಎಂದು ಮುನ್ನೆಚ್ಚರಿಕೆಯಾಗಿ ಟಿವಿಕೆ ಪಕ್ಷದಿಂದ ಎರಡನೇ ಅಭ್ಯರ್ಥಿಯಾಗಿ ನಿತ್ಯಾ ಎಂಬುವವರನ್ನು ಕಳುಹಿಸಲಾಗಿತ್ತು. ದುರಾದೃಷ್ಟವಶಾತ್ ನಿತ್ಯಾ ಅವರ ನಾಮಪತ್ರವೂ ಕೂಡ ತಿರಸ್ಕೃತಗೊಂಡಿದೆ.

ಇನ್ನು ಕಾರಣವೇನು ಅಂತ ನೋಡೋದಾದರೆ ಚುನಾವಣಾ ನಿಯಮಗಳ ಪ್ರಕಾರ, ಪ್ರತಿಯೊಂದು ನಾಮಪತ್ರದಲ್ಲಿ ಕನಿಷ್ಠ 10 ಮಂದಿ ಸೂಚಕರು ಸಹಿ ಮಾಡಿರಬೇಕು. ಆದರೆ ಟಿವಿಕೆ ಅಭ್ಯರ್ಥಿಗಳಾದ ಅರುಣ್ ಕುಮಾರ್ ಮತ್ತು ನಿತ್ಯಾ ಇಬ್ಬರ ನಾಮಪತ್ರಗಳಲ್ಲೂ ಕೇವಲ 7 ಮಂದಿಯಷ್ಟೇ ಸಹಿ ಮಾಡಿದ್ದರು. ಜೊತೆಗೆ ಕೆಲವು ಪ್ರಮುಖ ಮಾಹಿತಿಗಳನ್ನು ಭರ್ತಿ ಮಾಡದ ಕಾರಣ ಚುನಾವಣಾ ಆಯೋಗವು ಇಬ್ಬರ ಅರ್ಜಿಯನ್ನು ತಳ್ಳಿಹಾಕಿದೆ. ಇದರಿಂದಾಗಿ ಎಡಪ್ಪಾಡಿ ಕ್ಷೇತ್ರದಲ್ಲಿ ಟಿವಿಕೆ ಪಕ್ಷಕ್ಕೆ ಅಭ್ಯರ್ಥಿಯೇ ಇಲ್ಲದಂತಾಗಿದ್ದು, ಮತದಾನಕ್ಕೂ ಮೊದಲೇ ಸೋಲು ಒಪ್ಪಿಕೊಂಡಂತಾಗಿದೆ.

ಅಭ್ಯರ್ಥಿಗಳು ನಾಪತ್ತೆ
ನಾಮಪತ್ರ ತಿರಸ್ಕೃತಗೊಂಡು ಪಕ್ಷಕ್ಕೆ ಮುಖಭಂಗವಾದ ಬೆನ್ನಲ್ಲೇ ಮತ್ತೊಂದು ಆತಂಕಕಾರಿ ಬೆಳವಣಿಗೆ ನಡೆದಿದೆ. ಟಿವಿಕೆ ಅಭ್ಯರ್ಥಿಗಳಾದ ಅರುಣ್ ಕುಮಾರ್ ಹಾಗೂ ನಿತ್ಯಾ ಇಬ್ಬರೂ ಸದ್ಯ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರವು ಟಿವಿಕೆ ಕಾರ್ಯಕರ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಕ್ಷೇತ್ರದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ. ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ವಿರುದ್ಧ ತ್ರಿಕೋನ ಸ್ಪರ್ಧೆ ನೀಡುವ ಕನಸು ಕಾಣುತ್ತಿದ್ದ ವಿಜಯ್ ಬೆಂಬಲಿಗರಿಗೆ ಇದು ಅರಗಿಸಿಕೊಳ್ಳಲಾಗದ ತುತ್ತಾಗಿ ಪರಿಣಮಿಸಿದೆ.

ಒಟ್ಟಿನಲ್ಲಿ, ರಾಜಕೀಯಕ್ಕೆ ಅದ್ಧೂರಿ ಪ್ರವೇಶ ಪಡೆದಿದ್ದ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಮೊದಲ ಹೆಜ್ಜೆಯಲ್ಲೇ ವಿಘ್ನ ಎದುರಾಗಿದೆ. ತಮಿಳುನಾಡಿನ ಈ ಪ್ರತಿಷ್ಠಿತ ಕದನದಲ್ಲಿ ಟಿವಿಕೆ ಒಂದು ವಿಕೆಟ್ ಕಳೆದುಕೊಂಡಿರುವುದು ಮುಂದಿನ ಫಲಿತಾಂಶದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.