ಬೈರಾಬಿ ಸೈರಾಂಗ್ ರೈಲು ಯೋಜನೆ: ಮಿಜೋಗಳಿಗೆ ತೆರೆಯಲಿದೆ ಅದೃಷ್ಟದ ಮಹಾದ್ವಾರ

0
37

ನರಸಿಂಹರಾವ್

ಬೈರಾಬಿ ಸೈರಾಂಗ್ ರೈಲು ಯೋಜನೆ. ಈಶಾನ್ಯ ರಾಜ್ಯಗಳ ಪೈಕಿ ತೀರ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿಕಟ್ಟಿಕೊಂಡಿರುವ ಅಂತಾರಾಷ್ಟ್ರೀಯ ಗಡಿಪ್ರದೇಶಕ್ಕೆ ಹೊಂದಿಕೊಂಡಿರುವ ಮಿಜಾರೋಂ ನಲ್ಲಿ ಇದೀಗ ಅಭಿವೃದ್ಧಿ ಪರ್ವ ಆರಂಭವಾಗಿದೆ. ಮಿಜೋರಾಂನ ರಾಜಧಾನಿ ಐಜ್ವಾಲ್ ನಗರ ಮೊದಲ ಬಾರಿಗೆ ಭಾರತೀಯ ರೈಲ್ವೆ ಜಾಲಕ್ಕೆ ಸಂಪರ್ಕ ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಭಾಗದ ಜನರ ದಶಕಗಳ ಕನಸಾಗಿದ್ದ ರೈಲು ಯೋಜನೆ ಸಾಕಾರಗೊಂಡಿದೆ. ಮಿಜೋ ರಾಜ್ಯದ ಅದೃಷ್ಟದ ಮಹಾದ್ವಾರವಾದ ಬೈರಾಬಿ-ಸೈರಾಂಗ್ ರೈಲು ಯೋಜನೆಗೆ ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಈಶಾನ್ಯ ಭಾಗದ ಪ್ರಾದೇಶಿಕ, ಆರ್ಥಿಕ ಪರಿಸ್ಥಿತಿ ಪರಿವರ್ತಿಸಲು, ರಾಷ್ಟ್ರೀಯ ಸಂಪರ್ಕವನ್ನು ವಿಸ್ತರಿಸಲು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ಬೈರಾಬಿ ಸೈರಾಂಗ್ ನೂತನ ರೈಲು ಯೋಜನೆ.

ದುಡಿಯುವ ಕೈಗೆ ಸರಿಯಾದ ಕೆಲಸವಿಲ್ಲ. ಬಡತನ ಎದುರಿಸುವ ದೊಡ್ಡ ಸವಾಲು. ಸುತ್ತಮುತ್ತ ಐಟಿಬಿಟಿ ಇಲ್ಲ. ವ್ಯವಸಾಯವೂ ಹೇಳಿಕೊಳ್ಳುವಂಥ ಲಾಭ ತರುವುದಿಲ್ಲ. ಇನ್ನು ವ್ಯಾಪಾರ, ವಹಿವಾಟುಗಳಿಗೆ ಬೇಕಾಗುವ ಸಂಪರ್ಕವೂ ಇರಲಿಲ್ಲ. ಈಗ ಬೈರಾಬಿ-ಸೈರಾಂಗ್ ನೂತನ ರೈಲು ಆರಂಭವಾದರೆ ಜನರ ಭಾಗ್ಯದ ಬಾಗಿಲು ತೆರೆದಂತಾಗುತ್ತದೆ.

ಒಟ್ಟು 51.38 ಕಿ.ಮೀ. ಮಾರ್ಗ ಕೊಲಸಿಬ್ ಮತ್ತು ಐಜಾಲ್ ಜಿಲ್ಲೆಗಳ ಮೂಲಕ ಸಾಗುತ್ತದೆ. ಹೋರ್ಟೋಕಿ, ಕವನ್‌ಪುವಿ, ಮುಆಲ್ಬಾಂಗ್ ಮತ್ತು ಸೈರಾಂಗ್ ರೈಲ್ವೆ ನಿಲ್ದಾಣಗಳು ನಿರ್ಮಾಣವಾಗಿದೆ. ದಟ್ಟ ಅರಣ್ಯ, ಕಠಿಣ ಗುಡ್ಡಗಾಡು ಮತ್ತು ಆಳವಾದ ಕಣಿವೆಗಳ ಮೂಲಕ ಸಾಗುತ್ತದೆ. ಸುರಂಗಗಳ ಮುಖಭಾಗಗಳಲ್ಲಿ ಮಿಜೋರಾಂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾತ್ಮಕ ಚಿತ್ರಗಳು ಮೂಡಿ ಬಂದಿವೆ.

ಮಿಜೋರಾಂ ಜನರ ಉಡುಪು, ಹಬ್ಬ, ಸಂಪ್ರದಾಯಗಳು, ಹಳ್ಳಿಗಳ ಜೀವನ ಶೈಲಿ, ಹಾಗೆಯೇ ರಾಜ್ಯದ ಸಸ್ಯಜೀವಿ ಮತ್ತು ವನ್ಯ ಜೀವಿಗಳ ಚಿತ್ರಗಳನ್ನು ರಚಿಸಲಾಗಿದೆ. ಮಳೆಯಿಂದಾಗಿ ಭೂಕುಸಿತ ತಡೆಯಲು ಗುಡ್ಡಗಳನ್ನು ಸೂಕ್ತ ರಕ್ಷಣಾ ಯೋಜನೆಗಳೊಂದಿಗೆ ಬಲಪಡಿಸಲಾಗಿದೆ.

ಯೋಜನೆಯ ಪ್ರಮುಖ ಅಂಶ

  • ಯೋಜನೆಯ ಒಟ್ಟು ವೆಚ್ಚ ರೂ 8071 ಕೋಟಿ
  • ಒಟ್ಟು ಯೋಜನೆ ಉದ್ದ 51.38 ಕಿ.ಮೀ.
  • ಮಾರ್ಗ ಕೊಲಸಿಬ್ ಮತ್ತು ಐಜಾಲ್ ಜಿಲ್ಲೆಗಳ ಮೂಲಕ
  • ವೇಗ ಸಾಮರ್ಥ್ಯ 100 ಕಿ.ಮೀ/ಗಂಟೆ
  • ಒಟ್ಟು ನಿಲ್ದಾಣಗಳು 4 (ಹೋರ್ಟೋಕಿ, ಕವನ್‌ಪುವಿ, ಮುಆಲ್ಖಾಂಗ್ ಮತ್ತು ಸೈರಾಂಗ್)

ಇಲ್ಲಿನ ಜನರ ಜೀವನವೇ ರೋಚಕ. ಇಂತಹದೊಂದು ದಟ್ಟಾರಣ್ಯದ ನಡುವೆ ತಲೆಯೆತ್ತಿರುವ ಪ್ರದೇಶಕ್ಕೆ ಈಗ ಹೊಸ ಜೀವ ಕಳೆ ಬಂದಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ದಾಟಿ ಬಂದಿರುವ ಮಿಜೋಗಳಿಗೆ ಇದೀಗ ಅಮೃತ ಕಾಲದ ಅಮೃತ ಘಳಿಗೆ ಆರಂಭವಾಗಿದೆ.

2014ರ ನವೆಂಬರ್ 29ರಂದು ಪ್ರಧಾನಿ ನರೇಂದ್ರ ಮೋದಿ ಮಿಜೋರಾಂನಲ್ಲಿ ಬೈರಾಬಿ – ಸೈರಾಂಗ್ ಹೊಸ ರೈಲು ಮಾರ್ಗದ ಶಿಲಾನ್ಯಾಸ ಮಾಡಿದ್ದರು. 2016ರ ಮಾರ್ಚ್ 21ರಂದು ಅಸ್ಸಾಂನಿಂದ ಬೈರಾಬಿವರೆಗೆ ರೈಲು ಮಾರ್ಗವನ್ನು ಬ್ರಾಡ್ ಗೇಜ್‌ಗೆ ಪರಿವರ್ತನೆ ಮಾಡಲಾಗಿತ್ತು.

ಈ ಮಾರ್ಗದಿಂದ ಸ್ಥಳೀಯ ಅರಣ್ಯ ಉತ್ಪನ್ನಗಳು, ಕರಕುಶಲ ವಸ್ತುಗಳು, ಶುಂಠಿ, ಅನಾನಸ್ ಮುಂತಾದ ವಸ್ತುಗಳನ್ನು ಆನ್ನೇಯ ಏಷ್ಯಾ ಭಾಗಗಳಿಗೆ ರಫ್ತು ಮಾಡಲು ಹಾದಿ ಸುಗಮವಾಗಿದೆ. ಇಲ್ಲಿನ ಸಣ್ಣ ಮೆಣಸಿನ ಕಾಯಿಗೆ ವಿಶೇಷತೆ ಇದ್ದು, ಇದು ಜಿಯೋ ಟ್ಯಾಗ್ ಮಾನ್ಯತೆ ಪಡೆದಿದೆ. ಅರಸಿನ ಪುಡಿಗೆ ವಿಶ್ವಮಾನ್ಯತೆ ಇದೆ.

ತೋಟಗಾರಿಕೆ ಉತ್ಪನ್ನಗಳ ಸಾಗಾಟ ಸುಲಭವಾಗಿದ್ದು, ಮಿಜೋರಾಂ ರಾಜ್ಯದ ಜನರಿಗೆ ಸರಕು ಮತ್ತು ಪ್ರಯಾಣದ ವೆಚ್ಚದಲ್ಲಿ ಇಳಿಕೆಯಾಗಲಿದೆ. ಐಆರ್‌ಸಿಟಿಸಿ ಮಿಜೋರಾಂ ಸರ್ಕಾರದೊಂದಿಗೆ 2 ವರ್ಷಗಳ ಅವಧಿಗೆ ಪ್ರವಾಸೋದ್ಯಮ ಪ್ರೋತ್ಸಾಹಕ್ಕಾಗಿ ಒಪ್ಪಂದ ಮಾಡಿಕೊಂಡಿರುವುದು ಅಭಿವೃದ್ಧಿಗೆ ಪೂರಕವಾಗಲಿದೆ.

ಕಠಿಣ ಸವಾಲುಗಳ 9 ವರ್ಷ : ಈ ಯೋಜನೆಗೆ ನೂರೆಂಟು ಸವಾಲುಗಳು ಎದುರಾದವು. ವರ್ಷದಲ್ಲಿ ಕೇವಲ ನಾಲ್ಕೇ ತಿಂಗಳು ಕೆಲಸ ಉಳಿದಂತೆ ಮಳೆಗಾಲ. ಭೂ ಕುಸಿತ. ಇಂತಹ ಸಂದರ್ಭದಲ್ಲಿ ಹರಸಹಾಸದಿಂದ ರೈಲುಮಾರ್ಗ, ನಿರ್ಮಿಸಿದ್ದೇ ಸಹಾಸ. ಕಡಿದಾದ ಬೆಟ್ಟ..ಹೆಜ್ಜೆ ಹೆಜ್ಜೆಗೂ ಹರಿಯುವ ದೊಡ್ಡ ಝರಿಗಳು. ಕಲ್ಲುಗಳು ದಟ್ಟಾರಣ್ಯ, ಅಲ್ಲಿರುವ ಮರಗಳ ಮಧ್ಯೆ ರೇಲ್ವೆ ಮಾರ್ಗ ನಿರ್ಮಿಸಲು ಬರೋಬ್ಬರಿ ಒಂಭತ್ತು ವರ್ಷಗಳು ಬೇಕಾದವು.

ಒಟ್ಟು ಸೇತುವೆಗಳ ಉದ್ದ (ಕಿ.ಮೀ) 11.78, ಒಟ್ಟು ಸೇತುವೆಗಳು 153, ಸಣ್ಣ ಸೇತುವೆಗಳು 88, ದೊಡ್ಡ ಸೇತುವೆಗಳು 55. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಕೈಗೊಂಡ ಅತ್ಯಂತ ವ್ಯವಸ್ಥಿತ ಯೋಜನೆ ಇದಾಗಿದೆ. ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳ ಮಾರ್ಗದರ್ಶನ, ಮೇಲ್ವಚಾರಣೆಯಲ್ಲಿ ಈ ಯೋಜನೆ ಯಶಸ್ವಿಯಾಗಿದೆ ಎಂದು ನೈಋತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ, ಬಿ. ರಾಧಾರಾಣಿ ಹೇಳಿದ್ದಾರೆ.

ದಶಕದ ಕನಸು ಇದೀಗ ಪೂರ್ಣವಾಗಿದ್ದು, ಇಲ್ಲಿ ನಿರ್ಮಿಸಿರುವ ಸೇತುವೆಗಳು ಇಡೀ ದೇಶದಲ್ಲಿಯೇ ಅತಿ ಎತ್ತರದಲ್ಲಿದ್ದು, ವಿನೂತನ ತಂತ್ರಜ್ಞಾನವನ್ನು ಹೊಂದಿವೆ. ಸರ್ವಋತುವಿಗೂ ಸೂಕ್ತ ಸುಸಜ್ಜಿತ ರೈಲ್ವೆ ಮಾರ್ಗವಾಗಿ ಇದು ರೂಪುಗೊಂಡಿದೆ ಎಂದು ಈಶಾನ್ಯ ರಾಜ್ಯಗಳು ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಕೆ. ಮಿಶ್ರಾ ಹೇಳಿದ್ದಾರೆ.

Previous articleಹುಬ್ಬಳ್ಳಿ-ರಾಮೇಶ್ವರಂ ವಿಶೇಷ ರೈಲು ರಾಮನಾಥಪುರಂವರೆಗೆ ಸಂಚಾರ ಅವಧಿ ವಿಸ್ತರಣೆ
Next articleಕೇರಳ: ಕಾಂತಾರ ಚಾಪ್ಟರ್-1 ಬಿಡುಗಡೆ ನಿರ್ಬಂಧ, ಏನಿದು ವಿವಾದ?

LEAVE A REPLY

Please enter your comment!
Please enter your name here