ವಿಶ್ವ ದಾಖಲೆಗೆ ಸಜ್ಜಾದ ಅಯೋಧ್ಯೆಯ ದಿವ್ಯ ದೀಪಾವಳಿ

1
26

ಅಯೋಧ್ಯೆ: ದೇಶಾದ್ಯಂತ ಮೂರು ದಿನಗಳ ದೀಪಾವಳಿ ಸಂಭ್ರಮ ಆರಂಭಗೊಂಡಿದೆ. ಬೆಳಕಿನ ಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ಅಯೋಧ್ಯೆಯ ಲಕ್ಷ ದೀಪೋತ್ಸವ ಈ ಬಾರಿ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಶ್ರೀರಾಮಜನ್ಮಭೂಮಿ ನಗರದಲ್ಲಿ 26 ಲಕ್ಷ 11 ಸಾವಿರದ 101 ದೀಪಗಳನ್ನು ಏಕಕಾಲದಲ್ಲಿ ಬೆಳಗಿಸುವ ಮಹಾ ಉತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ಸರಯು ನದಿಯ ದಡದಲ್ಲಿರುವ 56 ಘಾಟ್‌ಗಳು, ರಾಮ್ ಕೀ ಪುಂಡಿ, ಮತ್ತು ನಗರದ ಪ್ರಮುಖ ರಸ್ತೆಗಳಲ್ಲಿ ಅಣತೆಗಳನ್ನು ಬೆಳಗಿಸಲು ಸಾವಿರಾರು ಸ್ವಯಂಸೇವಕರು, ಸಾಂಸ್ಕೃತಿಕ ಸಂಘಟನೆಗಳು ಹಾಗೂ ಡಾ. ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯದ ಸಿಬ್ಬಂದಿ ಒಟ್ಟಾಗಿ ಕೈಜೋಡಿಸಿದ್ದಾರೆ.

ಈ ಬಾರಿ ಹೊಸ ದಾಖಲೆ ನಿರ್ಮಾಣದ ಗುರಿಯೊಂದಿಗೆ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರತಿನಿಧಿ ರಿಚರ್ಡ್ ಸ್ಟೆನ್ನಿಂಗ್ ಸ್ಥಳದಲ್ಲಿದ್ದು, ಕಾರ್ಯಕ್ರಮದ ರಚನಾತ್ಮಕ ಪ್ರಕ್ರಿಯೆ ಮತ್ತು ಸಂಖ್ಯಾ ಎಣಿಕೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಭಾಗವಹಿಸುವ ಪ್ರತಿಯೊಬ್ಬರಿಗೂ QR ಕೋಡ್ ಸ್ಕ್ಯಾನ್ ವ್ಯವಸ್ಥೆ ಮೂಲಕ ಪ್ರವೇಶ ನೀಡಲಾಗುತ್ತಿದೆ.

ಇಂದು ಸಂಜೆ ಸುಮಾರು 7 ಗಂಟೆ ಸುಮಾರಿಗೆ, ಅಯೋಧ್ಯೆ ಸಂಪೂರ್ಣವಾಗಿ ಬೆಳಕಿನ ಸಮುದ್ರವಾಗಿ ಮಾರ್ಪಡಲಿದೆ. ಜಿಲ್ಲಾಡಳಿತ ಸರಯು ಗಂಗಾ ಆರತಿಯನ್ನು ಸಹ ಆಯೋಜಿಸಿದ್ದು, ದೀಪಗಳ ಬೆಳಕು ಹಾಗೂ ಆರತಿಯ ನಾದದ ಸೊಬಗು ಅಯೋಧ್ಯೆಯನ್ನು ಮತ್ತೊಮ್ಮೆ ದೇವನಗರಿಯಾಗಿ ಮೆರಗುಗೊಳಿಸಲಿದೆ.

ಅಯೋಧ್ಯೆಯ ಈ ದೀಪೋತ್ಸವವು ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ರಾವಣ ಸಂಹಾರದ ನಂತರ ಪ್ರಭು ಶ್ರೀರಾಮಚಂದ್ರ ಅಯೋಧ್ಯೆಗೆ ವಾಪಸಾದಾಗ, ಜನತೆ ಅವರ ಸ್ವಾಗತಕ್ಕಾಗಿ ಲಕ್ಷಾಂತರ ದೀಪಗಳನ್ನು ಬೆಳಗಿದರು ಎನ್ನುವ ಐತಿಹ್ಯವಿದೆ. ಈ ಪಾರಂಪರಿಕ ಸಂಪ್ರದಾಯವನ್ನು ಇಂದು ಲಕ್ಷಾಂತರ ಜನರ ಸಹಭಾಗಿತ್ವದಲ್ಲಿ ಮುಂದುವರಿಸಲಾಗುತ್ತಿದೆ.

ರಾಮಮಂದಿರ, ಹನುಮಾನ್ ಗಡಿ ಮಂದಿರ ಮತ್ತು ಇತರೆ ದೇವಾಲಯಗಳು ಈಗಾಗಲೇ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಅಯೋಧ್ಯೆ ನಿಜಕ್ಕೂ ಸ್ವರ್ಗದಂತೆಯೇ ಬೆಳಗುತ್ತಿದೆ.

Previous articleನಮ್ಮ ಮೆಟ್ರೋಗೆ 14ರ ಸಂಭ್ರಮ
Next articleಬೆಳಕಿನ ಹಬ್ಬಕ್ಕೆ ಬಂದ ಪರಿಸರಸ್ನೇಹಿ ಹಣತೆಗಳು

1 COMMENT

  1. ಇದೇ ಹಣವನ್ನು ದೇಶದ ಯಾವುದಾದರೊಂದು ಸರ್ಕಾರಿ ಶಾಲೆಯ ಉನ್ನತೀಕರಣಕ್ಕೆ ವಿನಿಯೋಗಿಸಿ, ಅಲ್ಲಿನ ಪ್ರತಿಶತ ಒಂದು ವಿದ್ಯಾರ್ಥಿಯಾದರೂ ತನ್ನ ಸಾಧನೆ ಮೂಲಕ ವಿಶ್ವದಾಖಲೆ ಖಂಡಿತಾ ಮಾಡುತ್ತಾನೆ. ತೆರಿಗೆ ಹಣ ಹೆಸರು ಮಾಡುವ ತೆವಲಿಗೆ ದುರ್ಬಳಕೆ ಮಾಡದಿರಿ

LEAVE A REPLY

Please enter your comment!
Please enter your name here