“ಯಾ ಅಲಿ” ಖ್ಯಾತಿಯ ಗಾಯಕ ಝುಬೀನ್ ಗರ್ಗ್ ಹಠಾತ್‌ ನಿಧನ

0
85

ಸಿಂಗಾಪುರ: ಅಸ್ಸಾಂನ ಪ್ರಖ್ಯಾತ ಗಾಯಕ, ಸಂಗೀತ ನಿರ್ದೇಶಕ ಹಾಗೂ ನಟ ಝುಬೀನ್ ಗರ್ಗ್ (52) ಅವರು ಹಠಾತ್ ನಿಧನರಾದ ಸುದ್ದಿ ದೇಶದಾದ್ಯಂತ ಆಘಾತ ಮೂಡಿಸಿದೆ. ಸಿಂಗಾಪುರದಲ್ಲಿ ನಡೆದ ಸ್ಕೂಬಾ ಡೈವಿಂಗ್ ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ಮತ್ತು ವರದಿಗಳು ತಿಳಿಸಿವೆ.

ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ, ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಜುಬೀನ್ ಅವರು ಈಶಾನ್ಯ ಉತ್ಸವದಲ್ಲಿ (North East Festival) ವಿಶೇಷ ಪ್ರದರ್ಶನ ನೀಡಲು ಸಿಂಗಾಪುರಕ್ಕೆ ತೆರಳಿದ್ದರು.

ಸಂಗೀತ ಲೋಕದಲ್ಲಿ ಝುಬೀನ್ ಗರ್ಗ್ ಅವರ ಹಾದಿ: ಝುಬೀನ್ ಗರ್ಗ್ ಅಸ್ಸಾಂನ ಅತ್ಯಂತ ಜನಪ್ರಿಯ ಗಾಯಕನಾಗಿದ್ದಷ್ಟೇ ಅಲ್ಲ, ಭಾರತದ ವಿಭಿನ್ನ ಭಾಷೆಗಳ ಸಂಗೀತ ಪ್ರೇಮಿಗಳ ಮನಸೂ ಗೆದ್ದಿದ್ದರು.

ಹಿಂದಿ ಸಿನಿರಂಗ ಪ್ರವೇಶ: 2006ರಲ್ಲಿ ಬಿಡುಗಡೆಯಾದ ಗ್ಯಾಂಗ್‌ಸ್ಟರ್ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಮೇಲೆ ಚಿತ್ರಿತಗೊಂಡ “ಯಾ ಅಲಿ” ಹಾಡು ಅವರ ಹೆಸರನ್ನು ದೇಶವ್ಯಾಪಕವಾಗಿ ಪ್ರಸಿದ್ಧಗೊಳಿಸಿತು. ಈ ಹಾಡು ಇನ್ನೂ ಅಭಿಮಾನಿಗಳ ಮೆಚ್ಚಿನ ಗೀತೆಯಾಗಿದೆ.

ಬಹುಭಾಷಾ ಗಾಯನ: ಜುಬೀನ್ ಅವರು ಅಸ್ಸಾಮಿ, ಬಂಗಾಳಿ ಮತ್ತು ಹಿಂದಿ ಸೇರಿದಂತೆ 40 ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದ್ದಾರೆ. ಕನ್ನಡ, ನೇಪಾಳಿ, ಒಡಿಯಾ, ಸಿಂಧಿ, ಸಂಸ್ಕೃತ, ಖಾಸಿ, ಮಣಿಪುರಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿಯೂ ಅವರು ತಮ್ಮ ಗಾಯನ ಕೌಶಲ್ಯ ಪ್ರದರ್ಶಿಸಿದ್ದಾರೆ.

ವೈವಿಧ್ಯಮಯ ಕಲೆ: ಗಾಯಕನಷ್ಟೇ ಅಲ್ಲದೆ, ಸಂಗೀತ ನಿರ್ದೇಶಕ, ಸಾಹಿತ್ಯಕಾರ ಮತ್ತು ನಟರಾಗಿ ಸಹ ತಮ್ಮ ಪಾದಾರ್ಪಣೆ ಮಾಡಿದ್ದರು.

ಅಭಿಮಾನಿಗಳಲ್ಲಿ ದುಃಖದ ಅಲೆ: ಅವರ ಆಕಸ್ಮಿಕ ನಿಧನದ ಸುದ್ದಿ ಹರಿದಂತೆ, ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಮತ್ತು ಬಾಲಿವುಡ್ ವಲಯದಲ್ಲಿ ಶೋಕದ ವಾತಾವರಣ ಆವರಿಸಿತು. ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ಅಭಿಮಾನಿಗಳು ತಮ್ಮ ಸಂತಾಪ ಸೂಚಿಸಿದ್ದಾರೆ.

ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರೇ ಟ್ವೀಟ್ ಮಾಡಿ, “ಜುಬೀನ್ ದಾ ನಮ್ಮ ಹೆಮ್ಮೆ. ಅವರ ನಿಧನದಿಂದ ಅಸ್ಸಾಂ ಮಾತ್ರವಲ್ಲ, ಇಡೀ ಭಾರತದ ಸಂಗೀತ ಲೋಕವೇ ಅನಾಥವಾಗಿದೆ” ಎಂದು ಶ್ರದ್ಧಾಂಜಲಿ ಸಲ್ಲಿಸಿದರು. ಬಾಲಿವುಡ್‌ನ ಅನೇಕ ಕಲಾವಿದರು ಸಹಾ ಅವರನ್ನು ನೆನೆದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಸಂಗೀತ ಲೋಕಕ್ಕೆ ಅಪ್ರತಿಮ ನಷ್ಟ: 36 ವರ್ಷಗಳಷ್ಟು ದೀರ್ಘವಾದ ಸಂಗೀತ ಪ್ರಯಾಣದಲ್ಲಿ, ಝುಬೀನ್ ಗರ್ಗ್ ಭಾರತೀಯ ಸಂಗೀತಕ್ಕೆ ಅನೇಕ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಅವರ ಹಾಡುಗಳು ಯುವ ಮನಸ್ಸಿಗೆ ಉತ್ಸಾಹ ತುಂಬಿದ್ದು, ಹಿರಿಯರಲ್ಲಿ ನೆನಪುಗಳನ್ನು ಜೀವಂತಗೊಳಿಸಿವೆ. ಅವರ ಧ್ವನಿ, ಕಲೆ ಹಾಗೂ ಪರಂಪರೆ ಮುಂದಿನ ಪೀಳಿಗೆಗೂ ಸ್ಫೂರ್ತಿಯಾಗಿಯೇ ಉಳಿಯಲಿದೆ.

Previous articleAI ಸೀರೆ ಟ್ರೆಂಡ್: ಹೆಣ್ಣುಮಕ್ಕಳಿಗೆ ರತನ್ ಟಾಟಾ ಆಪ್ತ ಶಾಂತನು ಸಲಹೆ!
Next articleಹಿಂದೂ ಎನ್ನದ ಸ್ವಾಮೀಜಿಗಳು ಕೇಸರಿ ಬಟ್ಟೆ ತ್ಯಾಗ ಮಾಡಲಿ: ಯತ್ನಾಳ

LEAVE A REPLY

Please enter your comment!
Please enter your name here