Home Advertisement
Home ಸುದ್ದಿ ದೇಶ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಮಧ್ಯೆ ಇಂದು ಸರ್ವಪಕ್ಷ ಸಭೆ; ಕೋವಿಡ್ ಕಾಲದ ಉದಾಹರಣೆಗೆ ವಿಪಕ್ಷ ಕೆಂಡಾಮಂಡಲ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಮಧ್ಯೆ ಇಂದು ಸರ್ವಪಕ್ಷ ಸಭೆ; ಕೋವಿಡ್ ಕಾಲದ ಉದಾಹರಣೆಗೆ ವಿಪಕ್ಷ ಕೆಂಡಾಮಂಡಲ

0
133

ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಬಿಕ್ಕಟ್ಟಿನ ನಡುವೆ ದೇಶದ ವಿದೇಶಾಂಗ ನೀತಿಯನ್ನು ಕುರಿತಂತೆ ರಾಜಕೀಯ ವಾಗ್ವಾದವೂ ತೀವ್ರಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗಳನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೋವಿಡ್ ಮಹಾಮಾರಿ ಸಂದರ್ಭದ ವಿಚಾರವನ್ನು ಉದಾಹರಿಸಿರುವುದನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ದೇಶದಲ್ಲಿ ಏನಾಯಿತು ಎಂಬುದನ್ನು ಪ್ರಧಾನಿ ಮರೆತಿದ್ದಾರೆ. ಆ ಸಂದರ್ಭದಲ್ಲಿ ಲಕ್ಷಾಂತರ ಜನರು ಸಂಕಷ್ಟ ಅನುಭವಿಸಿದರು, ಅನೇಕರು ಪ್ರಾಣ ಕಳೆದುಕೊಂಡರು. ಆ ದುರಂತವನ್ನು ಇಷ್ಟು ಸುಲಭವಾಗಿ ಮರೆಯುವುದು ಸರಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಶ್ಚಿಮ ಏಷ್ಯಾ ಬಿಕ್ಕಟ್ಟಿನಂತಹ ಗಂಭೀರ ವಿಷಯವನ್ನು ವಿವರಿಸುವಾಗ, ಕೋವಿಡ್ ಉದಾಹರಣೆ ನೀಡಿರುವುದು ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ, ದೇಶದ ವಿದೇಶಾಂಗ ನೀತಿಯನ್ನು ಕುರಿತು ಮಾತನಾಡಿದ ಅವರು, “ಇದು ದೇಶದ ಸಮಗ್ರ ನೀತಿಯಾಗಿರಬೇಕು. ಆದರೆ ಈಗ ಇದು ಪ್ರಧಾನಿ ಮೋದಿಯವರ ವೈಯಕ್ತಿಕ ವಿದೇಶಾಂಗ ನೀತಿಯಂತೆ ಕಾಣುತ್ತಿದೆ” ಎಂದು ಟೀಕಿಸಿದರು. ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಸಮನ್ವಯ ಹಾಗೂ ಪಾರದರ್ಶಕತೆ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

ಈ ನಡುವೆ, ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಸರ್ವಪಕ್ಷ ಸಭೆಯನ್ನು ಕರೆದಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಬಿಕ್ಕಟ್ಟಿನ ಪ್ರಸ್ತುತ ಸ್ಥಿತಿ, ಭಾರತಕ್ಕೆ ಆಗಬಹುದಾದ ಪರಿಣಾಮಗಳು ಹಾಗೂ ಮುಂದಿನ ಕ್ರಮಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆಯಿದೆ.

ಆದರೆ, ತಾವು ಈಗಾಗಲೇ ಕೇರಳ ಪ್ರವಾಸಕ್ಕೆ ತೆರಳಬೇಕಿರುವುದರಿಂದ ಈ ಮಹತ್ವದ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. ಇದರ ನಡುವೆಯೇ, ದೇಶದ ವಿದೇಶಾಂಗ ನೀತಿ ಹಾಗೂ ಪಶ್ಚಿಮ ಏಷ್ಯಾ ಪರಿಸ್ಥಿಯನ್ನು ಕುರಿತ ರಾಜಕೀಯ ಚರ್ಚೆಗಳು ಮುಂದುವರುಯುತ್ತಿವೆ.

ಒಟ್ಟಾರೆಯಾಗಿ, ಪಶ್ಚಿಮ ಏಷ್ಯಾ ಬಿಕ್ಕಟ್ಟು ಕೇವಲ ಅಂತರಾಷ್ಟ್ರೀಯ ವಿಷಯವಲ್ಲ, ದೇಶೀಯ ರಾಜಕೀಯದಲ್ಲಿಯೂ ಪ್ರಭಾವ ಬೀರುತ್ತಿದ್ದು, ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ವಾಗ್ವಾದ ಇನ್ನಷ್ಟು ತೀವ್ರಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.