ಶ್ರೀಮಂತ ಮತ್ತು ಬಡ ಮುಖ್ಯಮಂತ್ರಿಗಳ ಪಟ್ಟಿಯನ್ನು ದಿ ಅಸೋಸಿಯೇಶನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ಪ್ರಕಟಿಸಿದೆ. ಮುಖ್ಯಮಂತ್ರಿಗಳ ಆಸ್ತಿ, ಕೇಸುಗಳ ಮಾಹಿತಿಯನ್ನು ಈ ವರದಿ ಒಳಗೊಂಡಿದೆ. ಭಾರತದ ಅತಿ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮೊದಲ ಸ್ಥಾನದಲ್ಲಿದ್ದಾರೆ.
ಆಗಸ್ಟ್ 22ರಂದು ಬಿಡುಗಡೆಯಾದ ವರದಿ ದೇಶದ 30 ಮುಖ್ಯಮಂತ್ರಿಗಳು ಒಟ್ಟು 1,632 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂದು ಹೇಳಿದೆ. ಮಣಿಪುರ ಹೊರತುಪಡಿಸಿ ಭಾರತದ ಎಲ್ಲಾ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಸರಾಸರಿ ಆಸ್ತಿ 54.42 ಕೋಟಿ ರೂ.ಗಳು.
ದೇಶದ ಶ್ರೀಮಂತ ಮುಖ್ಯಮಂತ್ರಿ ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು. ಟಿಡಿಪಿ ಪಕ್ಷದ ನಾಯಕನ ಒಟ್ಟು ಆಸ್ತಿ ಮೌಲ್ಯ 931 ಕೋಟಿಗಳು. ದೇಶದ ಇಬ್ಬರು ಮುಖ್ಯಮಂತ್ರಿಗಳು ತಮ್ಮ ಬಳಿ ಶತಕೋಟಿ ಆಸ್ತಿ ಇದೆ ಎಂದು ಘೋಷಣೆ ಮಾಡಿದ್ದಾರೆ.
ಟಾಪ್ 3 ಶ್ರೀಮಂತ ಮುಖ್ಯಮಂತ್ರಿಗಳು
1.ಚಂದ್ರಬಾಬು ನಾಯ್ಡು. ಟಿಡಿಪಿ ಪಕ್ಷ. ಆಂಧ್ರ ಪ್ರದೇಶ. ಆಸ್ತಿ 931 ಕೋಟಿ
2. ಪೇಮಾ ಖಂಡು. ಬಿಜೆಪಿ. ಅರುಣಾಚಲ ಪ್ರದೇಶ. 332 ಕೋಟಿ
3. ಸಿದ್ದರಾಮಯ್ಯ. ಕಾಂಗ್ರೆಸ್. ಕರ್ನಾಟಕ. 51 ಕೋಟಿ
ಟಾಪ್ 3 ಬಡ ಮುಖ್ಯಮಂತ್ರಿಗಳು
- ಮಮತಾ ಬ್ಯಾನರ್ಜಿ. ಟಿಎಂಸಿ. ಪಶ್ಚಿಮ ಬಂಗಾಳ. 15 ಲಕ್ಷ
- ಒಮರ್ ಅಬ್ದುಲಾ. ನ್ಯಾಷನಲ್ ಕಾನ್ಸರೆನ್ಸ್. ಜಮ್ಮು & ಕಾಶ್ಮೀರ. 55 ಲಕ್ಷ
- ಪಿಣರಾಯಿ ವಿಜಯನ್. ಸಿಪಿಐ(ಎಮ್). ಕೇರಳ. 1 ಕೋಟಿ.
ಮುಖ್ಯಮಂತ್ರಿಗಳ ಕೇಸುಗಳು: ಎಡಿಆರ್ ಕೇವಲ ಆಸ್ತಿ ಮಾತ್ರವಲ್ಲ ಮುಖ್ಯಮಂತ್ರಿಗಳ ಮೇಲೆ ಎಷ್ಟು ಕೇಸುಗಳಿವೆ? ಎಂದು ಸಹ ವರದಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ನಾಯಕ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮೇಲೆ 89 ಕೇಸುಗಳಿವೆ.
ತಮಿಳುನಾಡು ಮುಖ್ಯಮಂತ್ರಿ, ಡಿಎಂಕೆ ಪಕ್ಷದ ಎಂ.ಕೆ.ಸ್ಟಾಲಿನ್ ಮೇಲೆ 47 ಕೇಸುಗಳಿವೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಟಿಡಿಪಿಯ ನಾಯಕನ ಮೇಲೆ 19 ಕೇಸುಗಳಿವೆ. 12 ಮುಖ್ಯಮಂತ್ರಿಗಳ ಮೇಲೆ ಕ್ರಿಮಿನಲ್ ಕೇಸುಗಳಿವೆ. 10 ಸಿಎಂಗಳ ಮೇಲೆ ಗಂಭೀರ ಕ್ರಿಮಿನಲ್ ಕೇಸುಗಳಿವೆ.
ಮುಖ್ಯಮಂತ್ರಿಗಳ ವಿದ್ಯಾರ್ಹತೆ ನೋಡುವುದಾದದರೆ 10ನೇ ತರಗತಿ ಓದಿರುವ ಸಿಎಂ ಒಬ್ಬರು. 3 ಜನ 12ನೇ ತರಗತಿ ಓದಿದ್ದಾರೆ. ಪದವೀಧರರು 9, ವೃತ್ತಿಪರ ಪದವೀಧರರು 6, ಸ್ನಾತಕೋತ್ತರ ಪದವೀಧರರು 8, ಪಿಎಚ್‌ಡಿ ಪಡೆದವರು 2, ಡಿಪ್ಲೊಮಾ 1.