ಅಮರಾವತಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀತಿಗಳ ನಡುವೆಯೂ ಗೂಗಲ್ ಭಾರತದಲ್ಲಿ ದೊಡ್ಡ ಮೊತ್ತದ ಯೋಜನೆಯೊಂದಕ್ಕೆ ಹೂಡಿಕೆ ಮಾಡಲಿದೆ. ದಕ್ಷಿಣ ಭಾರತದಲ್ಲಿಯೇ ಈ ಯೋಜನೆ ಜಾರಿಯಾಗಲಿದೆ. 6 ಬಿಲಿಯನ್ ಡಾಲರ್ ಹೂಡಿಕೆಯ ದೊಡ್ಡ ಯೋಜನೆ ಇದಾಗಿದೆ.
ಗೂಗಲ್ ದಕ್ಷಿಣ ಭಾರತದಲ್ಲಿ ಏಷ್ಯಾದಲ್ಲೇ ಅತಿದೊಡ್ಡ ಡಾಟಾಸೆಂಟರ್ ನಿರ್ಮಾಣ ಮಾಡಲಿದೆ. ಆಂಧ್ರದ ವಿಶಾಖಪಟ್ಟಣಂನಲ್ಲಿ ಈ ಬೃಹತ್ ಡಾಟಾಸೆಂಟರ್ ನಿರ್ಮಾಣವಾಗಲಿದೆ. 1-ಗಿಗಾವ್ಯಾಟ್ ಡೇಟಾ ಸೆಂಟರ್ ಮತ್ತು ಅದರ ವಿದ್ಯುತ್ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಇದು.
ಗೂಗಲ್ ಆಲ್ಫಾಬೆಟ್ ಘಟಕ ಭಾರತದಲ್ಲಿ ಮೊದಲ ಬಾರಿಗೆ ಹೂಡಿಕೆಯನ್ನು ಮಾಡುತ್ತಿದೆ. ನವೀಕರಿಸಬಹುದಾದದ ಇಂಧನ ಸಾಮರ್ಥ್ಯವನ್ನು ಇದು ಒಳಗೊಂಡಿರಲಿದೆ. ಡೇಟಾಸೆಂಟರ್‌ಗೆ ವಿದ್ಯುತ್ ಅನ್ನು ಈ ಮೂಲಕವೇ ಪೂರೈಕೆ ಮಾಡಲಾಗುತ್ತದೆ.
ಈಗಾಗಲೇ ಸಿಂಗಾಪುರ, ಮಲೇಷ್ಯಾ ಮತ್ತು ಥೈಲ್ಯಾಂಡ್ ಸೇರಿದಂತೆ ವಿವಿಧ ದೇಶಗಳಲ್ಲಿ ಡೇಟಾಸೆಂಟರ್ ವಿಸ್ತರಣೆ ಮಾಡಲಾಗುತ್ತಿದೆ. ಇದರ ಭಾಗವಾಗಿಯೇ ಏಷ್ಯಾದಲ್ಲಿಯೇ ದೊಡ್ಡ ಡೇಟಾಸೆಂಟರ್ ಆಂಧ್ರ ಪ್ರದೇಶದಲ್ಲಿ ಮುಂದಿನ 5 ವರ್ಷಗಳಲ್ಲಿ ಹಂತ ಹಂತವಾಗಿ ನಿರ್ಮಾಣವಾಗಲಿದೆ.
ಡೊನಾಲ್ಡ್ ಟ್ರಂಪ್ ಜಾಗತಿಕ ಸುಂಕ ಏರಿಕೆ ದಾಳಿಯ ನಡುವೆಯೂ ಈ ವರ್ಷ ಸುಮಾರು 75 ಬಿಲಿಯನ್ ಖರ್ಚು ಮಾಡಲು ಆಲ್ಫಾಬೆಟ್ ಮುಂದಾಗಿದೆ. ಆಂಧ್ರ ಪ್ರದೇಶದ ಘಟಕ ಸುಮಾರು 52,000 ಕೋಟಿ ರೂ. ವೆಚ್ಚದ್ದು ಎಂದು ಅಂದಾಜು ಮಾಡಲಾಗಿದೆ.
ಆಂಧ್ರ ಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ರಾಜ್ಯಕ್ಕೆ ಐಟಿ ಸೇರಿ ಇತರ ಉದ್ಯಮ ಸೆಳೆಯಲು ಬಹಳಷ್ಟು ಶ್ರಮ ಪಡುತ್ತಿದ್ದಾರೆ. ಪ್ರಸ್ತುತ ಅವರು ಉದ್ಯಮಿಗಳ ಜೊತೆ ಚರ್ಚಿಸಲು ಸಿಂಗಾಪುರದಲ್ಲಿದ್ದಾರೆ.
1.6 ಗಿಗಾವ್ಯಾಟ್‌ಗಳ ಡಾಟಾ ಸೆಂಟರ್ ಸ್ಥಾಪನೆಗೆ ಈಗಾಗಲೇ ಹೂಡಿಕೆಗಳನ್ನು ಅಂತಿಮಗೊಳಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ರಾಜ್ಯದಲ್ಲಿ 6 ಗಿಗಾವ್ಯಾಟ್‌ನ ಕೇಂದ್ರ ಸ್ಥಾಪಿಸುವ ಗುರಿ ಇದೆ ಎಂದು ಸಚಿವರು ಹೇಳಿದ್ದಾರೆ.
ರಾಜ್ಯದಲ್ಲಿ ಡಿಜಿಟಲ್ ಮೂಲ ಸೌಕರ್ಯಗಳನ್ನು ಹೆಚ್ಚಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ವಿಶಾಖಪಟ್ಟಣಂನಲ್ಲಿ ಮೂರು ಹೊಸ ಕೇಬಲ್ ಲ್ಯಾಂಡಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ ಎಂದು ಸಚಿವ ನಾರಾ ಲೋಕೇಶ್ ತಿಳಿಸಿದ್ದಾರೆ.
ಮುಂಬೈನಲ್ಲಿ ಪ್ರಸ್ತುತ ಇರುವುದಕ್ಕಿಂತ ದೊಡ್ಡ ಕೇಬಲ್ ನೆಟ್‌ವರ್ಕ್ ಸ್ಥಾಪನೆ ಮಾಡಲಾಗುತ್ತಿದೆ. ಇದು ಜಾಗತಿಕ ನೆಟ್‌ವರ್ಕ್‌ಗಳಿಗೆ ಬಹಳ ವೇಗದ, ಸಮರ್ಪಕ ಕನೆಕ್ಷನ್‌ಗಳನ್ನು ನೀಡಲು ಉಪಯುಕ್ತವಾಗಿದೆ.
ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಜಾರಿಗೊಳಿಸಿದ ಹೊಸ ಹೊಸ ನೀತಿಗಳ ನಂತರವೂ ಆಲ್ಫಾಬೆಟ್ ಈ ವರ್ಷದ ಏಪ್ರಿಲ್‌ನಲ್ಲಿ ಹಲವು ಹೊಸ ಹೂಡಿಕೆಗಳ ಘೋಷಣೆ ಮಾಡಿತ್ತು. ಆದರೆ ಆಂಧ್ರ ಪ್ರದೇಶದಲ್ಲಿ ಹೂಡಿಕೆ ಮಾಡುವ ಕುರಿತು ಅಧಿಕೃತವಾಗಿ ಆಲ್ಫಾಬೆಟ್ ಇನ್ನೂ ಹೇಳಿಕೆ ಬಿಡುಗಡೆ ಮಾಡಿಲ್ಲ.
“ನಾವು ಉದ್ಯಮಿಗಳ ಜೊತೆ ಹಲವು ಮಾತುತಕೆ ನಡೆಸುತ್ತಿದ್ದೇವೆ. ಕೆಲವು ಹೂಡಿಕೆಗಳ ಕುರಿತು ನಾವು ಈಗ ಏನೂ ಹೇಳಲು ಸಾಧ್ಯವಿಲ್ಲ. ಕೆಲವು ಘೋಷಣೆಗಳನ್ನು ನಾವು ಅಕ್ಟೋಬರ್‌ನಲ್ಲಿ ಮಾಡಲಿದ್ದೇವೆ” ಎಂದು ಸಚಿವ ನಾರಾ ಲೋಕೇಶ್ ಸ್ಪಷ್ಟಪಡಿಸಿದ್ದಾರೆ.
ಆಂಧ್ರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಟಿಡಿಪಿ ಪಕ್ಷ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಚನೆಗೆ ಬೆಂಬಲ ನೀಡಿದೆ. 2014ರಲ್ಲಿ ಎರಡು ಭಾಗವಾಗಿ ರಾಜ್ಯ ವಿಭಜನೆಗೊಂಡಿತು. ಈ ವರ್ಷ ಹೈದರಾಬಾದ್ ನಗರವನ್ನು ಅದು ಬಿಟ್ಟುಕೊಟ್ಟಿದೆ. ಆದ್ದರಿಂದ ಹೊಸ ಹೊಸ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಗಮನಹರಿಸಿದೆ.