ಜಮ್ಮು & ಕಾಶ್ಮೀರದ ಕೊನೆಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ನಿಧನ

0
107

ನವದೆಹಲಿ: ಕಣಿವೆ ರಾಜ್ಯವಾದ ಜಮ್ಮು & ಕಾಶ್ಮೀರದ ಕೊನೆಯ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ವಿಧಿವಶರಾದರು. ಮೂರು ಬಾರಿ ಸಂಸದರಾಗಿ, ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದಾಗ ಅವರ ಸಂಪುಟದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದರು.

ನವದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ 79 ವರ್ಷದ ಸತ್ಯಪಾಲ್ ಮಲಿಕ್ ನಿಧನ ಹೊಂದಿದರು. 5 ದಶಕಗಳ ರಾಜಕೀಯ ಜೀವನದಲ್ಲಿ ಸತ್ಯಪಾಲ್ ಮಲಿಕ್ ಕಾಂಗ್ರೆಸ್, ಬಿಜೆಪಿ ಮತ್ತು ಜನತಾದಳ ಪಕ್ಷಗಳಲ್ಲಿದ್ದರು.

ಸತ್ಯಪಾಲ್ ಮಲಿಕ್ 2018ರ ಆಗಸ್ಟ್‌ನಿಂದ ಅಕ್ಟೋಬರ್ 2019ರ ತನಕ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದರು. ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2019ರಲ್ಲಿ ರದ್ದುಗೊಳಿಸಿತ್ತು.

ಹಾಗೆಯೇ, ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಎಂದು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಮಾಡಿತ್ತು. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕೊನೆಯ ರಾಜ್ಯಪಾಲರಾಗಿ ಸತ್ಯಪಾಲ್ ಮಲಿಕ್ ಕಾರ್ಯ ನಿರ್ವಹಣೆ ಮಾಡಿದ್ದರು.

ಸತ್ಯಪಾಲ್ ಮಲಿಕ್ ಪರಿಚಯ: ಸತ್ಯಪಾಲ್ ಮಲಿಕ್ ಉತ್ತರ ಪ್ರದೇಶದ ಬಾಗ್ಬತ್ ಮೂಲದವರು. ಜಾಟ್ ಸಮುದಾಯದ ನಾಯಕರಾಗಿದ್ದ ಅವರು ವಿದ್ಯಾರ್ಥಿ ನಾಯಕರಾಗಿ ರಾಜಕೀಯ ಜೀವವನ್ನು ಆರಂಭಿಸಿದರು. 1974ರಲ್ಲಿ ಅವರು ಭಾರತೀಯ ಕ್ರಾಂತಿದಳದಿಂದ ಶಾಸಕರಾಗಿ ಆಯ್ಕೆಯಾದರು.

ರಾಜ್ಯಸಭಾ ಸದಸ್ಯರಾಗಿದ್ದರು. ಸತ್ಯಪಾಲ್ ಮಲಿಕ್ ಜನತಾದಳದಿಂದ ಅಲಿಗಢ ಕ್ಷೇತ್ರದಿಂದ ಸಂಸದರಾಗಿಯೂ ಆಯ್ಕೆಯಾದರು. ಕಾಂಗ್ರೆಸ್, ಲೋಕದಳ, ಸಮಾಜವಾದಿ ಪಕ್ಷವನ್ನು ಅವರು ಸೇರ್ಪಡೆಗೊಂಡಿದ್ದರು.

2017ರಲ್ಲಿ ಸತ್ಯಪಾಲ್ ಮಲಿಕ್ ಬಿಹಾರ ರಾಜ್ಯಪಾಲರಾಗಿದ್ದರು. ಆಗ ಅವರಿಗೆ ಒಡಿಶಾ ರಾಜ್ಯದ ಹೆಚ್ಚುವರಿ ಹೊಣೆಯನ್ನು ನೀಡಲಾಗಿತ್ತು. 2018ರ ಆಗಸ್ಟ್‌ನಲ್ಲಿ ಅವರು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿ ನೇಮಕಗೊಂಡರು.

ಜಮ್ಮು ಮತ್ತು ಕಾಶ್ಮೀರದ ಪುಲ್ವಮಾದಲ್ಲಿ ಉಗ್ರರ ದಾಳಿ ನಡೆದಾಗ ಸತ್ಯಪಾಲ್ ಮಲಿಕ್ ರಾಜ್ಯದ ರಾಜ್ಯಪಾಲರಾಗಿದ್ದರು. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ಬಳಿಕ ಸತ್ಯಪಾಲ್ ಮಲಿಕ್ ಗೋವಾ ರಾಜ್ಯಪಾಲರಾಗಿ ನೇಮಕಗೊಂಡರು. ಈ ಅವಧಿಯಲ್ಲಿಯೇ ಅವರಿಗೆ ಮೇಘಾಲಯ ರಾಜ್ಯದ ಹೆಚ್ಚುವರಿ ಹೊಣೆ ನೀಡಲಾಗಿತ್ತು.

ಸತ್ಯಪಾಲ್ ಮಲಿಕ್ ಬಿಎಸ್‌ಸಿ, ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ. 1974-77ರ ತನಕ ಉತ್ತರ ಪ್ರದೇಶ ವಿಧಾನಸಭೆಯ ಶಾಸಕರಾಗಿದ್ದರು. 1980-89ರ ತನಕ ರಾಜ್ಯಸಭೆ ಸದಸ್ಯರಾಗಿದ್ದರು. 1989-91ರ ಅವಧಿಯಲ್ಲಿ ಅಲಿಗಢ ಕ್ಷೇತ್ರದ ಸಂಸತ್ ಸದಸ್ಯರಾಗಿದ್ದರು.

ಸತ್ಯಪಾಲ್ ಮಲಿಕ್ ಚೌಧರಿ ಚರಣ್ ಸಿಂಗ್‌ಗೆ ಆಪ್ತರಾಗಿದ್ದರು. ಅವರ ಮೂಲಕವೇ ರಾಜಕೀಯಕ್ಕೆ ಬಂದರು. ಚರಣ್ ಸಿಂಗ್ ಲೋಕದಳಕ್ಕೆ ಹೋದಾಗ ಮಲಿಕ್ ಸಹ ಪಕ್ಷ ಸೇರ್ಪಡೆಗೊಂಡರು. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು.

1980ರಲ್ಲಿ ಲೋಕದಳದ ಮೂಲಕವೇ ಮಲಿಕ್ ರಾಜ್ಯಸಭೆ ಸದಸ್ಯರಾದರು. ಆದರೆ ಅವರು ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿದರು. 1986ರಲ್ಲಿ ರಾಜ್ಯಸಭೆಗೆ ವಾಪಸ್ ಆದರು. 1987ರಲ್ಲಿ ಮಲಿಕ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು.

ವಿ.ಪಿ.ಸಿಂಗ್ ನೇತೃತ್ವದ ಜನತಾದಳ ಸೇರಿದರು. ಅಲಿಗಢ ಕ್ಷೇತ್ರದಲ್ಲಿ ಜನತಾದಳದಿಂದ ಗೆದ್ದರು. ವಿ.ಪಿ.ಸಿಂಗ್ ಸಂಪುಟದಲ್ಲಿ ಕಾನೂನು ವ್ಯವಹಾರ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವರಾದರು.

2004ರಲ್ಲಿ ಮಲಿಕ್ ಬಿಜೆಪಿ ಸೇರಿದರು. ಆದರೆ ಲೋಕಸಭೆ ಚುನಾವಣೆಯಲ್ಲಿ ಸೋತರು. ಕೇಂದ್ರ ಸರ್ಕಾರ ರೈತರ ಹೋರಾಟದ ಕುರಿತು ಪ್ರತಿಕ್ರಿಯೆ ನೀಡಿಲ್ಲ ಎಂದು ಮಲಿಕ್ ಅಸಮಾಧಾನ ವ್ಯಕ್ತಪಡಿಸಿದ್ದರು.

Previous articleSanthosh Balaraj: ಕನ್ನಡ ನಾಯಕ ನಟ ಸಂತೋಷ್ ಬಾಲರಾಜ್‌ ವಿಧಿವಶ
Next articleKSRTC: ಹೈಕೋರ್ಟ್‌ ತರಾಟೆ; ಸಾರಿಗೆ ನೌಕರರ ಮುಷ್ಕರ ವಾಪಸ್

LEAVE A REPLY

Please enter your comment!
Please enter your name here