ವಿಡಿಯೋ ಹಾಕಿ, ಕಣ್ಣೀರಿಟ್ಟು ಸಹಾಯ ಕೇಳಿದ ಬಾಲಿವುಡ್ ನಟಿ ತನುಶ್ರೀ ದತ್ತಾ

0
132

ಮುಂಬೈ: “ಇಂತಹ ಪರಿಸ್ಥಿತಿಯಲ್ಲಿ ನನಗೆ ಸಹಾಯ ಬೇಕಿದೆ. ತುಂಬಾ ತಡವಾಗುವ ಮೊದಲು ಏನಾದರೂ ಮಾಡಿ” ಎಂದು ಬಾಲಿವುಡ್ ನಟಿ ತನುಶ್ರೀ ದತ್ತಾ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಕಣ್ಣೀರು ಹಾಕುತ್ತಾ ಅವರು ತಾವು ಅನುಭವಿಸುತ್ತಿರುವ ಹಿಂಸೆಯನ್ನು ವಿಡಿಯೋದಲ್ಲಿ ವಿವರಿಸಿದ್ದಾರೆ.

ಸಾಮಾಜಿಕ ಜಾಲತಾಣದ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಾಕಿರುವ ತನುಶ್ರೀ ದತ್ತಾ ತಾನು ಬಹಳ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿ #MeToo ಅಭಿಯಾನವನ್ನು ಆರಂಭಿಸಿದ್ದು ತನುಶ್ರೀ ದತ್ತಾ.

ವಿಡಿಯೋದಲ್ಲಿ ಹೇಳಿದ್ದೇನು?; ಮನೆ ಬಾಗಿಲು ಬಡಿಯುವುದು, ಮನೆಯ ಹೊರಗೆ ಜೋರಾಗಿ ಶಬ್ದ ಮಾಡುವುದು, ಕಳ್ಳತನ ಮಾಡುವುದು ಸೇರಿದಂತೆ ನಾನಾ ರೀತಿಯಲ್ಲಿ ನಾನು ಕಿರುಕುಳ ಅನುಭವಿಸುತ್ತಿದ್ದೇನೆ. 2020ರಿಂದಲೂ ಕಷ್ಟಗಳನ್ನು ಅನುಭವಿಸುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಸಹಾಯಬೇಕಿದೆ. ದಯವಿಟ್ಟು ಸಹಾಯ ಮಾಡಿ ಎಂದು ತನುಶ್ರೀ ದತ್ತಾ ಮನವಿ ಮಾಡಿದ್ದಾರೆ.

ನಾನು ಕಿರುಕುಳದ ನಡುವೆಯೇ ಬದುಕು ನಡೆಸುತ್ತಿದ್ದೇನೆ. ಈ ಕಷ್ಟಗಳಿಂದ ಮನಸ್ಸನ್ನು ಬೇರೆ ಕಡೆ ಸೆಳೆಯಲು ಪ್ರಯತ್ನ ಮಾಡುತ್ತಿದ್ದೇನೆ. ಹೊರಗಿನ ಶಬ್ದ ಕೇಳಬಾರದು ಎಂದು ಹೆಡ್‌ಫೋನ್ ಹಾಕಿಕೊಂಡು ಕುಳಿತುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

“ನಾನು ಕೆಲಸದವರ ಮೇಲೆ ನಂಬಿಕೆ ಕಳೆದುಕೊಂಡಿದ್ದೇನೆ. ಯಾರನ್ನೂ ಸಹ ಕೆಲಸಕ್ಕೆ ನೇಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಸಮಸ್ಯೆಯ ನಡುವೆಯೇ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದೇನೆ. ಜೊತೆಗೆ ಈ ಕಿರುಕುಳದ ಜೊತೆಗೆ ಬದುಕುತ್ತಿದ್ದೇನೆ” ಎಂದು ತನುಶ್ರೀ ದತ್ತಾ ವಿಡಿಯೋದಲ್ಲಿ ಕಣ್ಣೀರು ಹಾಕಿದ್ದಾರೆ.

“ನನ್ನ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿದೆ. ನನ್ನ ಮನೆಯಲ್ಲೇ ನನಗೆ ಕಿರುಕುಳ ನೀಡಲಾಗುತ್ತಿದೆ. ಪೊಲೀಸರಿಗೆ ಕರೆ ಮಾಡಿದರೆ ಠಾಣೆಗೆ ಬಂದು ದೂರು ಕೊಡಿ ಎಂದು ಹೇಳುತ್ತಿದ್ದಾರೆ. ನನಗೆ ಆರೋಗ್ಯ ಸಮಸ್ಯೆ ಇದ್ದು, ಮನೆಯಿಂದ ಹೊರ ಹೋಗಲು ಆಗುತ್ತಿಲ್ಲ. ದಯವಿಟ್ಟು ನನಗೆ ಸಹಾಯಬೇಕಿದೆ” ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ತನುಶ್ರೀ ದತ್ತಾ ಮೊದಲು ನಟ ನಾನಾ ಪಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಬಳಿಕ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ವಿರುದ್ಧವೂ ಆರೋಪ ಮಾಡಿದ್ದರು. ಭಾರತದಲ್ಲಿ #MeToo ಅಭಿಯಾನವನ್ನು ಆರಂಭಿಸಿದ್ದು ತನುಶ್ರೀ ದತ್ತಾ. ಆದರೆ ಈಗ ಅವರು ವಿಡಿಯೋದಲ್ಲಿ ಕಣ್ಣೀರು ಹಾಕುವ ಮೂಲಕ ಸಂಕಷ್ಟದಲ್ಲಿದ್ದೇನೆ ಎಂದು ಹೇಳಿದ್ದಾರೆ.

2018ರಲ್ಲಿ ತನುಶ್ರೀ ದತ್ತಾ ನಾನಾ ಪಟೇಕರ್ ವಿರುದ್ಧ ಶೂಟಿಂಗ್ ಸೆಟ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಮಾಡಿದ್ದರು. ಈ ಕುರಿತು ಮುಂಬೈನ ಓಹೀಶ್ವರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ವಿಚಾರಣೆ ನಡೆಸಿದ್ದ ಪೊಲೀಸರು ಕೋರ್ಟ್‌ಗೆ ಬಿ-ರಿಪೋರ್ಟ್‌ ಸಲ್ಲಿಕೆ ಮಾಡಿದ್ದರು. ದುರುದ್ದೇಶದಿಂದ, ದ್ವೇಷದಿಂದ ದೂರು ನೀಡಿದ್ದಾರೆ ಎಂದು ಹೇಳಿದ್ದರು.

1984, ಮಾರ್ಚ್ 19ರಂದು ಜನಿಸಿದ ತನುಶ್ರೀ ದತ್ತಾ 2004ರಲ್ಲಿ ಫೆಮಿನಾ ಮಿಸ್ ಇಂಡಿಯಾ ಯೂನಿವರ್ಸ್ ಪ್ರಶಸ್ತಿಯನ್ನು ಗೆದ್ದಿದ್ದರು. 2005 ರಿಂದ 2013ರ ತನಕ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಆಶಿಕ್ ಬನಾಯಾ ಆಪ್ನೆ, 36 ಚೈನಾ ಟೌನ್, ಗುಡ್ ಬಾಯ್ ಬ್ಯಾಡ್ ಬಾಯ್ ಮುಂತಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

Previous articleSigandur Tour: ಸಿಗಂದೂರು, ಜೋಗ ವಿಶೇಷ ಟೂರ್ ಪ್ಯಾಕೇಜ್: ದರ, ವಿವರ
Next articleಸರ್ಕಾರಿ ಶಾಲೆ ಶಿಕ್ಷಕರು ಹೆಚ್ಚಿದ್ದರೂ ವರ್ಗಾವಣೆ ಇಲ್ಲ!

LEAVE A REPLY

Please enter your comment!
Please enter your name here