ಬೆಂಗಳೂರು: ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಸದ್ಯ ‘ಕೆಡಿ: ದಿ ಡೆವಿಲ್’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಈ ಮಧ್ಯೆ ನಟ ಧ್ರುವ ಸರ್ಜಾ ವಿರುದ್ಧ ಕೋಟ್ಯಂತರ ರೂಪಾಯಿ ವಂಚನೆ ಆರೋಪದ ಮೇಲೆ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಟ ಧ್ರುವ ಸರ್ಜಾ ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ. ‘ಜಗ್ಗು ದಾದ’ ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕ ರಾಘವೇಂದ್ರ ಹೆಗ್ಡೆ ದೂರು ನೀಡಿದ್ದಾರೆ ಎನ್ನಲಾಗಿದೆ. ರಾಘವೇಂದ್ರ ಹೆಗಡೆಯವರಿಂದ 3.15 ಕೋಟಿ ಹಣ ಪಡೆದಿರುವ ಧ್ರುವ ಸರ್ಜಾ ವಂಚಿಸಿದಾರೆ ಎಂದು ಆರೋಪಿಸಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 3 ಕೋಟಿ ರೂಪಾಯಿ ವಂಚನೆ ಕೇಸ್ ಇದಾಗಿದೆ.
ನಿರ್ದೇಶಕ ರಾಘವೇಂದ್ರ ಹೆಗಡೆ ಅವರು ನೀಡಿದ ದೂರಿನ ಪ್ರಕಾರ, 2016ರಲ್ಲಿ ಧ್ರುವ ಸರ್ಜಾ ಅವರೇ ತಮ್ಮನ್ನು ಸಂಪರ್ಕಿಸಿ, ಒಟ್ಟಿಗೆ ಸಿನಿಮಾ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರು. ಹಲವು ಬಾರಿ ಒತ್ತಾಯಿಸಿದ ನಂತರ, 2018ರಲ್ಲಿ ‘ದಿ ಸೋಲ್ಜರ್’ ಚಿತ್ರ ಮಾಡಲು ತಾವು ಒಪ್ಪಿಕೊಂಡಿದ್ದಾಗಿ ಹೆಗಡೆ ತಿಳಿಸಿದ್ದಾರೆ.
ರಾಘವೇಂದ್ರ ಹೆಗಡೆ ನೀಡಿದ ಮಾಹಿತಿಯ ಪ್ರಕಾರ, 2016ರಲ್ಲಿ ತಮ್ಮ ಮೊದಲ ಚಿತ್ರದ ಯಶಸ್ಸಿನ ಬಳಿಕ ಧ್ರುವ ಸರ್ಜಾ ಅವರೊಂದಿಗೆ ಕೆಲಸ ಮಾಡಲು ಬಯಸಿದರು. ಅವರ ನಿರಂತರ ವಿನಂತಿ ಹಾಗೂ ಒತ್ತಾಯದ ಹಿನ್ನೆಲೆಯಲ್ಲಿ ಸಹಕರಿಸಲು ಒಪ್ಪಿಕೊಂಡ ಹೆಗಡೆ, ಸರ್ಜಾ ಅವರ ಬೇಡಿಕೆಯಂತೆ ಒಪ್ಪಂದಕ್ಕೆ ಸಹಿ ಮಾಡುವ ಮುನ್ನ 3 ಕೋಟಿ ರೂಪಾಯಿ ನೀಡಿದರು. ಈ ಹಣವನ್ನು ಅವರು ಒಂದು ಫ್ಲ್ಯಾಟ್ ಖರೀದಿಸಲು ಬಳಸಿಕೊಳ್ಳುವುದಾಗಿ ಸರ್ಜಾ ಭರವಸೆ ನೀಡಿದ್ದರು.
ಸಿನಿಮಾ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ, ಫ್ಲಾಟ್ ಒಂದನ್ನು ಖರೀದಿಸಬೇಕಾಗಿದ್ದು, ಅದಕ್ಕಾಗಿ 3 ಕೋಟಿ ರೂ. ನೀಡುವಂತೆ ಧ್ರುವ ಕೇಳಿಕೊಂಡರು. ಶೀಘ್ರದಲ್ಲೇ ನಮ್ಮ ಸಿನಿಮಾದಲ್ಲಿ ನಟಿಸುವುದಾಗಿ ಭರವಸೆ ನೀಡಿದ್ದರಿಂದ, ಅವರನ್ನು ನಂಬಿ ನಾನು ಹೆಚ್ಚಿನ ಬಡ್ಡಿದರದಲ್ಲಿ ಸಾಲ ಮಾಡಿ ಹಣ ಹೊಂದಿಸಿದೆ. ನನ್ನ ನಿರ್ಮಾಣ ಸಂಸ್ಥೆಗಳು ಹಾಗೂ ವೈಯಕ್ತಿಕ ಖಾತೆಯಿಂದ 2018-2021ರ ಅವಧಿಯಲ್ಲಿ ಒಟ್ಟು 3.15 ಕೋಟಿ ರೂಪಾಯಿ ವರ್ಗಾಯಿಸಿದ್ದೇನೆ,” ಎಂದು ಹೆಗಡೆ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
2019ರ ಫೆಬ್ರವರಿ 21 ರಂದು ಇಬ್ಬರ ನಡುವೆ ಔಪಚಾರಿಕ ಒಪ್ಪಂದವಾಗಿದ್ದು, ಅದರ ಪ್ರಕಾರ ಚಿತ್ರೀಕರಣವು ಜನವರಿ 2020 ರಲ್ಲಿ ಪ್ರಾರಂಭವಾಗಿ ಜೂನ್ 2020 ರೊಳಗೆ ಪೂರ್ಣಗೊಳ್ಳಬೇಕಿತ್ತು. ಆದರೆ, ಹಣ ಪಡೆದ ನಂತರ ಧ್ರುವ ಸರ್ಜಾ ಅವರು ಚಿತ್ರೀಕರಣಕ್ಕೆ ಹಾಜರಾಗದೆ ಸತಾಯಿಸಿದರು. ಕೋವಿಡ್ ಲಾಕ್ಡೌನ್ ನಂತರವೂ ಅವರು ಸ್ಪಂದಿಸಲಿಲ್ಲ, ಕೊವಿಡ್ ಲಾಕ್ಡೌನ್ ಪೂರ್ಣಗೊಂಡರೂ, ಅವರು ಪ್ರತಿಕ್ರಿಯಿಸಲಿಲ್ಲ ಎಂದು ರಾಘವೇಂದ್ರ ಆರೋಪಿಸಿದ್ದಾರೆ.
ಸ್ಕ್ರಿಪ್ಟ್ ರೈಟರ್‌ಗಳಿಗೂ ಧ್ರುವ ಹಣ ಕೊಡಿಸಿದ್ದರಂತೆ. ಇದನ್ನು ಸೇರಿದರೆ ರಾಘವೇಂದ್ರ ಅವರ ಕೈಯಿಂದ 3.43 ಕೋಟಿ ರೂಪಾಯಿ ನೀಡಿದ್ದರು. ಧ್ರುವ ಯೋಜನೆಯಿಂದ ಹಿಂದೆ ಸರಿದಿದ್ದು ಮಾತ್ರವಲ್ಲ, ಕರೆಗಳನ್ನು ಸ್ವೀಕರಿಸಿಲ್ಲ ಎಂದು ರಾಘವೇಂದ್ರ ಹೇಳಿದ್ದಾರೆ. ದೂರಿನ ಆಧಾರದ ಮೇಲೆ ಅಂಬೋಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.