ಶಿವಮೊಗ್ಗ: ಭದ್ರಾವತಿ ನಗರದ ಭದ್ರಾ ನದಿ ತಟದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಮುಂದಾದ ಮಹಿಳಾ ಅಧಿಕಾರಿಗೆ, ದಂಧೆಕೋರರು ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು.
ಈ ಪ್ರಕರಣ ಇನ್ನೂ ಜನಮಾನಸದಲ್ಲಿ ಹಚ್ಚ ಹಸಿರಾಗಿದೆ. ಈ ನಡುವೆ ಭದ್ರಾವತಿ ನಗರದ ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಯುವಕರ ಎರಡು ಗುಂಪುಗಳು, ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ ಹೊಡೆದಾಡಿಕೊಂಡಿರುವ ವೀಡಿಯೋವೊಂದು ವೈರಲ್ ಆಗಿದೆ! ಆದರೆ ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ!
ಕಳೆದ ಫೆಬ್ರವರಿ ೯ರಂದು ಈ ಮಾರಾಮಾರಿ ಘಟನೆ ನಡೆದಿದೆ ಎನ್ನಲಾಗಿದೆ. ಭದ್ರಾವತಿ ಪಟ್ಟಣದ ಉಜ್ಜನಿಪುರ ಸರ್ಕಲ್‌ನಲ್ಲಿ ಘಟನೆ ನಡೆದಿದೆ. ಲಾಂಗ್, ಮಚ್ಚು, ದೊಣ್ಣೆಗಳಿಂದ ಎರಡು ಗುಂಪುಗಳು ಹೊಡೆದಾಡಿಕೊಂಡಿವೆ. ಕಲ್ಲು ತೂರಾಟ ಕೂಡ ಮಾಡಿಕೊಂಡಿವೆ ಎಂದು ತಿಳಿದುಬಂದಿದೆ.
ಓಸಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾರಾಮಾರಿ ಘಟನೆ ನಡೆದಿದ್ದು, ಈ ದೃಶ್ಯಗಳು ಸಮೀಪದ ಕಟ್ಟಡಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿವೆ. ಘಟನೆ ನಡೆದ ಹಲವು ದಿನಗಳ ನಂತರ ವಿಡಿಯೋ ವೈರಲ್ ಆಗಿದೆ.
ಸಾರ್ವಜನಿಕ ಸ್ಥಳದಲ್ಲಿಯೇ ಇಷ್ಟೆಲ್ಲ ರಾದ್ಧಾಂತ ನಡೆದರೂ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಪೊಲೀಸರು ಯಾರ ವಿರುದ್ಧವೂ ಕ್ರಮ ಕೈಗೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ.