ಚಿತ್ರದುರ್ಗ: ‘ಹೊಟ್ಟೆ ಹಸಿವು’ ಎಂದು ಊಟಕ್ಕೆ ಹಠ ಮಾಡಿದ ಮಗನನ್ನು ತಂದೆ ಥಳಿಸಿದ್ದು, ಪಕ್ಕೆಗೆ ಏಟು ಬಿದ್ದ ಪರಿಣಾಮ ಬಾಲಕ ಮೃತಪಟ್ಟ ದಾರುಣ ಘಟನೆ ತಾಲೂಕಿನ ಹಳೇ ರಂಗಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಮಂಜುನಾಥ್(೫) ಮೃತಪಟ್ಟ ಬಾಲಕ. ತಿಪ್ಪೇಶ್ ಹತ್ಯೆ ಆರೋಪಿ.
ಸಂಜೆ ಆಟವಾಡಿ ಸುಸ್ತಾಗಿದ್ದ ಪುಟ್ಟ ಬಾಲಕ ಮನೆಗೆ ಬಂದು ಹೊಟ್ಟೆ ಹಸಿವು ಎಂದು ಹೇಳಿದ್ದಾನೆ. ಮನೆಯಲ್ಲಿ ಬಡತನ ಕಾರಣ ಹಾಗೂ ಕುಡಿತದ ಚಟಕ್ಕೆ ತಿಪ್ಪೇಶ್ ಒಳಗಾಗಿದ್ದ ಕಾರಣ ಊಟಕ್ಕೆ ಸಮಸ್ಯೆ ಇತ್ತು. ತಕ್ಷಣ ಮಗನ ಹಸಿವು ನೀಗಿಸಲು ತಾಯಿ ಪಕ್ಕದ ಮನೆಗೆ ಹೋಗಿ ಊಟ ಪಡೆದುಕೊಂಡು ಬರಲು ತೆರಳಿದ್ದಾಳೆ. ಅಷ್ಟರಲ್ಲಿ ಪುಟ್ಟ ಬಾಲಕ ಅಪ್ಪನ ಬಳಿ ಹೋಗಿ ಹಸಿವು ಎಂದು ಹಠ ಮಾಡಿದ್ದಾನೆ. ಇದರಿಂದ ಕುಪಿತನಾದ ತಂದೆ ಮಗನನ್ನು ಥಳಿಸಿದ್ದು, ಏಟು ಪಕ್ಕೆಗೆ ಬಿದ್ದಿದ್ದು ಉಸಿರು ಕಟ್ಟಿಕೊಂಡು ಮಗು ಪ್ರಜ್ಞೆ ತಪ್ಪಿದೆ. ತಕ್ಷಣ ಊಟದೊಂದಿಗೆ ಧಾವಿಸಿದ ತಾಯಿ ಗೌರಮ್ಮ, ಮಗುವನ್ನು ಎತ್ತಿಕೊಂಡು ಉಸಿರಾಡಿಸಲು ಪ್ರಯತ್ನಿಸಿದ್ದಾರೆ. ಸಾಧ್ಯವಾಗದಿದ್ದಾಗ ಚಿತ್ರದುರ್ಗ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಿ ಮಗು ಮೃತಪಟ್ಟಿದ್ದನ್ನು ವೈದ್ಯರು ಖಚಿತಪಡಿಸಿದ್ದಾರೆ.
ದೂರು ದಾಖಲು: ನಮ್ಮದು ಪ್ರೇಮ ವಿವಾಹ. ಆದರೆ, ನನಗೆ ಪತಿ ಹಾಗೂ ಆತನ ಕುಟುಂಬದಿಂದ ಕಿರುಕುಳ ಇತ್ತು. ತನ್ನ ಅತ್ತೆ ಶೆಟ್ಟಮ್ಮನ ಮಾತು ಕೇಳಿ ನನ್ನ ಮಗುವನ್ನು ಕೊಲ್ಲಲಾಗಿದೆ. ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳುವಂತೆ ಭರಮ ಸಾಗರ ಪೊಲೀಸ್ ಠಾಣೆಗೆ ಗೌರಮ್ಮ ದೂರು ದಾಖಲಿಸಿದ್ದಾರೆ.


























