ಜೇವರ್ಗಿ(ಕಲಬುರಗಿ): ಕೃಷಿಗಾಗಿ ಮಾಡಿದ ಸಾಲಕ್ಕೆ ಹೆದರಿ ಮನನೊಂದ ರೈತನೊಬ್ಬ ಸಾಲದ ಶೂಲಕ್ಕೆ ಬಲಿಯಾಗಿದ್ದು ಹೊಲದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸೊನ್ನ ಗ್ರಾಮದಲ್ಲಿ ನಡೆದಿದೆ. ಸೊನ್ನ ಗ್ರಾಮದ ನಿವಾಸಿ ಕರೆಪ್ಪ ಪೂಜಾರಿ ಮೀಣಜಗಿ (60) ಆತ್ಮಹತ್ಯೆ ಮಾಡಿಕೊಂಡ ರೈತ. ಕೃಷಿಗಾಗಿ ಕೆಜಿಬಿ ಬ್ಯಾಂಕ್‌ನಿಂದ 1 ಲಕ್ಷ, ಸಹಕಾರ ಬ್ಯಾಂಕ್‌ನಿಂದ 50 ಸಾವಿರ ಹಣ ಹಾಗೂ ಖಾಸಗಿ ಕೈಗಡವಾಗಿ 4ರಿಂದ 5 ಲಕ್ಷ ಹಣವನ್ನು ಸಾಲವಾಗಿ ಪಡೆದಿದ್ದರು. ಕರೆಪ್ಪ ಗುರುವಾರ ಬೆಳಗ್ಗೆ ಮನೆಯಿಂದ ತಮ್ಮ ಹೊಲಕ್ಕೆ ಹೋಗಿ, ಹೊಲದಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.