ಸರ್ವರೂ ಒಂದೇ ಎಂಬ ಭಾವನೆಯೇ ಪ್ರಸಿದ್ಧಿಗೆ ಕಾರಣ

0
28

ಹುಬ್ಬಳ್ಳಿ: ಯಾವ ಜಾತಿ, ಪಂಥ, ಭಾಷೆ ಪ್ರಾಂತ್ಯಗಳ ಭೇದವಿಲ್ಲದೇ ಸರ್ವ ಭಕ್ತರನ್ನು ಅನುಗ್ರಹಿಸುವ ಪರಂಪರೆಯೇ ದೇಶಾದ್ಯಂತ ಶ್ರೀ ಸಿದ್ಧಾರೂಢಮಠದ ಪ್ರಸಿದ್ಧಿಗೆ ಕಾರಣ ಎಂದು ರಾಜ್ಯದ ಕಾನೂನು ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.
ಶಿವರಾತ್ರಿ ಮಹೋತ್ಸವ ಅಂಗವಾಗಿ ಏರ್ಪಡಿಸಲಾಗಿರುವ ವಿಶ್ವಶಾಂತಿಗಾಗಿ ವಿಶ್ವವೇದಾಂತ ಪರಿಷತ್ತಿನ ಕಾರ್ಯಕ್ರಮದಲ್ಲಿ ಭಾನುವಾರ ಮಖ್ಯ ಅತಿಥಿಯಾಗಿ ಆಗಮಿಸಿ ಶ್ರೀ ಸಿದ್ಧಾರೂಢ ಭಾರತಿ ಕಲ್ಪದ್ರುಮ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಸರ್ವರೂ ಒಂದೇ ಎಂಬ ಆದರ್ಶವೇ ಮಠವು ಉತ್ತುಂಗಕ್ಕೆ ಏರಲು ಕಾರಣವಾಗಿದೆ ಎಂದ ಅವರು, ನಾವೆಲ್ಲ ಮೈಕ್ ಮುಂದೆ ನಿಂತಾಗ ಮಾತ್ರ ಆದರ್ಶ ಮಾತಾಡುತ್ತೇವೆ. ವೇದಿಕೆ ಬಿಟ್ಟು ಕೆಳಗಿಳಿದಾಕ್ಷಣ ನೀನು ಯಾವ ಪೈಕಿ, ಆತ ಯಾವ ಜನಾಂಗ ಎಂದು ಜಾತಿಗಳ ತೊಳಲಾಟದಲ್ಲಿ ಮುಳುಗುತ್ತೇವೆ ಎಂದು ವಿಷಾದಿಸಿದರು.
ಸರ್ವರೂ ಒಂದೇ ಎಂಬ ಸಿದ್ಧಾರೂಢರ ತತ್ವಗಳನ್ನು ಸಾಧು ಸಂತರು ನಿತ್ಯ ಪ್ರಚಾರ ಮಾಡುತ್ತಾರೆ. ಅದರೂ ಭಾರತೀಯ ಸಮಾಜದಲ್ಲಿ ಇನ್ನೂ ತಾರತಮ್ಯ ಅಳಿದಿಲ್ಲ. ಸಂದೇಹ, ಅನುಮಾನಗಳು ಇನ್ನೂ ಉಳಿದೇ ಇವೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಪಂಚದಲ್ಲಿ ಇಂದು ಅತಿಕ್ರಮಣ, ಯುದ್ಧಗಳಿಂದ ಅಶಾಂತಿ ಅರಾಜಕತೆಯುಂಟಾಗಿದೆ. ಯಾವ ದೇಶ ಉಳಿಯುವುದೋ, ಜಗತ್ತೇ ನಿರ್ನಾಮವಾಗುವುದೋ ಎಂಬ ಅನುಮಾನ ಬಂದಿದೆ. ಅಂಥ ಸಂದರ್ಭದಲ್ಲಿ ವಿಶ್ವಶಾಂತಿಗಾಗಿ ಅಧ್ಯಾತ್ಮ ಚಿಂತನೆ ಮಾಡುವ ವೇದಾಂತ ಪರಿಷತ್ ಸಂಘಟನೆ ಕಾರ್ಯ ಶ್ಲಾಘನೀಯ ಎಂದು ಪಾಟೀಲರು ಹೇಳಿದರು.
ಶ್ರೀ ಸಿದ್ಧಾರೂಠಮಠ ಟ್ರಸ್ ಕಮಿಟಿ ಚೇರಮನ್ ಬಸವರಾಜ ಕಲ್ಯಾಣಶೆಟ್ಟರ್, ವೈಸ್ ಚೇರಮನ್ ಮಂಜುನಾಥ ಮುನವಳ್ಳಿ, ವಿಶ್ವ ವೇದಾಂತ ಪರಿಷತ್ ಸಮಿತಿ ಅಧ್ಯಕ್ಷ ಶ್ಯಾಮಾನಂದ ಪೂಜೇರಿ, ವಿಶ್ವವೇದಾಂತ ಪರಿಷತ್‌ನ ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಿ.ಆರ್.ಪಾಟೀಲ, ಕಾರ್ಯಾಧ್ಯಕ್ಷ ಕೆ.ಎಲ್.ಪಾಟೀಲ, ಟ್ರಸ್ಟ್ ಕಮಿಟಿಯ ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ಬಾಳು ಮಗಜಿಕೊಂಡಿ, ಡಾ.ಗೋವಿಂದ ಮಣ್ಣೂರ, ಚೆನ್ನವೀರ ಮುಂಗರವಾಡಿ, ಉದಯಕುಮಾರ ನಾಯ್ಕ, ರಮೇಶ ಬೆಳಗಾವಿ, ವಿನಾಯಕ ಘೋಡಕೆ, ಗೀತಾ ಕಲಬುರ್ಗಿ ಉಪಸ್ಥಿತರಿದ್ದರು.

Previous articleಅಗ್ನಿ ಅವಘಡ: 5 ಹಸು ಬೆಂಕಿಗಾಹುತಿ
Next articleಕುಂಭಮೇಳಕ್ಕೆ ತೆರಳಿದ್ದ ಗೋಕಾಕನ ೬ ಜನ ಸಾವು