ರಾಜ್ಯದಲ್ಲೇ ಅತಿ ದೊಡ್ಡ ಡ್ರಗ್ಸ್ ಬೇಟೆಯಾಡಿದ ಮಂಗಳೂರು ಸಿಸಿಬಿ

0
30

ರಾಜಧಾನಿ ದೆಹಲಿಯಲ್ಲಿ ಎಂಡಿಎಂಎ ಡ್ರಗ್ಸ್ ತಯಾರಿಸಿ ದಕ್ಷಿಣ ಭಾರತಕ್ಕೆ ರವಾನೆ, ಆಫ್ರಿಕಾ ಮೂಲದ ಪ್ರಜೆಗಳಿಬ್ಬರ ಸೆರೆ, 75 ಕೋಟಿ ಮೌಲ್ಯದ 38 ಕೆಜಿ ಡ್ರಗ್ಸ್ ವಶಕ್ಕೆ

ಮಂಗಳೂರು: ಸಿಸಿಬಿ ಪೊಲೀಸರು ರಾಜ್ಯದಲ್ಲೇ ಅತಿದೊಡ್ಡ ಡ್ರಗ್ಸ್ ಬೇಟೆಯಾಡಿದ್ದಾರೆ. ಕರ್ನಾಟಕ ಹಾಗೂ ಇತರ ರಾಜ್ಯಗಳಿಗೆ MDMA ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ದಕ್ಷಿಣ ಆಫ್ರಿಕಾ ಮೂಲದ ವಿದೇಶಿ ಮಹಿಳಾ ಪ್ರಜೆಗಳಿಬ್ಬರನ್ನು ದಸಗಿರಿ ಮಾಡಿದ್ದು ಅವರಿಂದ 75 ಕೋಟಿ ಮೌಲ್ಯದ 37.870 ಕೆಜಿ ನಿಷೇಧಿತ ಮಾದಕ ವಸ್ತು MDMA ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಆರು ತಿಂಗಳ ಹಿಂದೆ ಮಂಗಳೂರಿನ ಪಂಪ್ ವೆಲ್ ಬಳಿಯ ಲಾಡ್ಜ್ ವೊಂದರಲ್ಲಿ ಸಾರ್ವಜನಿಕರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿ ಹೈದರ್ @ ಹೈದರ್ ಅಲಿ ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿ 15 ಗ್ರಾಂ MDMA ಸ್ವಾಧೀನಪಡಿಸಿದ್ದರು. ಈ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಕೈಗೊಂಡು ಪ್ರಕರಣದಲ್ಲಿ ಹೈದರ್ ಆಲಿ ಮತ್ತು ಇನ್ನಿತರ ವ್ಯಕ್ತಿಗಳಿಗೆ ಮಾದಕ ವಸ್ತುವನ್ನು ಪೂರೈಕೆ ಮಾಡುತ್ತಿದ್ದ ಪ್ರಮುಖ ಡ್ರಗ್ ಪೆಡ್ಲರ್ ಬೆಂಗಳೂರಿನಲ್ಲಿ ವಾಸ್ತವ್ಯವಿದ್ದ ನೈಜೇರಿಯಾ ದೇಶದ ವಿದೇಶಿ ಪ್ರಜೆ Peter Ikedi Belonwu ಎಂಬಾತನನ್ನು ದಸ್ತಗಿರಿ ಮಾಡಿದ್ದರು. ಆತನಿಂದ ಆರು ಕೋಟಿ ಮೌಲ್ಯದ 6.248 ಕೆಜಿ MDMA ಡ್ರಗ್ಸ್ ವಶಪಡಿಸಿದ್ದರು.

ಪ್ರಕರಣ ಬೆನ್ನತ್ತಿದ ಪೊಲೀಸರು ಡ್ರಗ್ಸ್ ಪೂರೈಕೆ ಮಾಡುವ ಕಿಂಗ್ ಫಿನ್ ಡ್ರಗ್ಸ್ ಪೆಡ್ಲರ್ ಗಳನ್ನು ಪತ್ತೆ ಹಚ್ಚುವ ಸಲುವಾಗಿ ಕಳೆದ 6 ತಿಂಗಳಿನಿಂದ ಮಂಗಳೂರು ಸಿಸಿಬಿ ಪೊಲೀಸರು ನಿರಂತರವಾದ ತನಿಖೆ ನಡೆಸಿದ್ದರು. ಈ ವೇಳೆ, ದೆಹಲಿಯಿಂದ ಬೆಂಗಳೂರಿಗೆ ಹಾಗೂ ದೇಶದ ಇತರ ಕಡೆಗಳಿಗೆ ಬೃಹತ್ ಪ್ರಮಾಣದಲ್ಲಿ ಡ್ರಗ್ಸ್ ಅನ್ನು ವಿದೇಶಿ ಮಹಿಳಾ ಪ್ರಜೆಗಳು ವಿಮಾನ ಮಾರ್ಗದಲ್ಲಿ ಸಾಗಾಟ ಮಾಡುವ ಮಾಹಿತಿ ದೊರೆತಿತ್ತು. ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಗಳನ್ನು ದಸಗಿರಿ ಮಾಡಲು ಮಂಗಳೂರು ಸಿಸಿಬಿ ಪೊಲೀಸರ ತಂಡ ಬೆಂಗಳೂರಿಗೆ ತೆರಳಿ ಆರೋಪಿಗಳ ಪತ್ತೆಮಾಡಿದೆ.

ಈ ವೇಳೆ, ದಕ್ಷಿಣ ಅಫ್ರಿಕಾ ಮೂಲದ ಇಬ್ಬರು ಮಹಿಳಾ ಪ್ರಜೆಗಳಾದ ಬಾಂಬಾ ಫಂಟಾ‌ ಅಲಿಯಾಸ್ ಅಡೋನಿಸ್ ಜಬುಲಿಲ್ (31) ಮತ್ತು ಅಬಿಗಾಲ್ ಅಡೋನಿಸ್ (30) ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಬಾಂಬಾ ಫಂಟಾ ಮೆಡಿಕಲ್ ಶಿಕ್ಷಣದ ಹೆಸರಲ್ಲಿ ನಕಲಿ ವೀಸಾ ಪಡೆದು ದೆಹಲಿಯಲ್ಲಿ ನೆಲೆಸಿದ್ದು 2020ರಲ್ಲಿ ಭಾರತಕ್ಕೆ ಬಂದಿದ್ದರು. ಅಬಿಗಾಲ್ ಅಡೋನಿಸ್ 2016ರಲ್ಲಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದರು. ಇವರು ದೇಶದ ರಾಜಧಾನಿ ದೆಹಲಿಯಲ್ಲೇ ಡ್ರಗ್ಸ್ ತಯಾರಿಸುತ್ತಿದ್ದು ಅಲ್ಲಿಂದ ವ್ಯವಸ್ಥಿತ ರೀತಿಯಲ್ಲಿ ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದರು. ‌ಬೆಂಗಳೂರು – ದೆಹಲಿ ಮಧ್ಯೆ 59 ಬಾರಿ ಡ್ರಗ್ಸ್ ಜೊತೆಗೆ ಪ್ರಯಾಣ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಆರೋಪಿಗಳನ್ನು ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯ ಹತ್ತಿರದ ನೀಲಾದ್ರಿ ನಗರ ಎಂಬಲ್ಲಿ ವಶಕ್ಕೆ ಪಡೆದಿದ್ದು ಅವರ ವಶದಲ್ಲಿದ್ದ ಎರಡು ಟ್ರಾಲಿ ಟ್ರಾವೆಲ್ ಬ್ಯಾಗ್ ನಲ್ಲಿ ಸಾಗಾಟ ಮಾಡಿಕೊಂಡಿದ್ದ 75 ಕೋಟಿ ಮೌಲ್ಯದ 37.878 ಕೆಜಿ ಮಾದಕ ವಸ್ತುವಾದ MDMA, 4 ಮೊಬೈಲ್ ಫೋನುಗಳು, ಟ್ರಾಲಿ ಬ್ಯಾಗ್ ಗಳು-2, ನಕಲಿ ಪಾಸ್ ಪೋರ್ಟ್- 2 ನಗದು ಹಣ ರೂ.18,460/- ಹಾಗೂ ಇತರ ಸೊತ್ತುಗಳನ್ನು ವಶಪಡಿಸಲಾಗಿದೆ. ಆರೋಪಿಗಳು ದೆಹಲಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ತಂದು ದಕ್ಷಿಣ ಭಾರತದ ವಿವಿಧ ಕಡೆಗಳಿಗೆ ಸಾಗಾಟ ಮಾಡುತ್ತಿದ್ದರು. ನೈಜೇರಿಯನ್ ಪ್ರಜೆಗಳಿಗೆ ಹಾಗೂ ಇತರ ಡ್ರಗ್‌ ಪೆಡ್ಲರ್ ಗಳಿಗೆ ಬೃಹತ್ ಪ್ರಮಾಣದಲ್ಲಿ ಮಾರಾಟ ಮಾಡಿ ಹಣವನ್ನು ಸಂಪಾದಿಸಿ ಐಷಾರಾಮಿ ಜೀವನ ಸಾಗಿಸುತ್ತಿದ್ದರು.

ಹಿರಿಯ ಅಧಿಕಾರಿಗಳ ನಿರ್ದೇಶನದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ರಫೀಕ್ ಕೆ.ಎಂ. ಪಿಎಸ್‌ಐ ಗಳಾದ ಸುದೀಪ್ ಎಂ.ವಿ, ಶರಣಪ್ಪ ಭಂಡಾರಿ, ನರೇಂದ್ರ, ಎಎಸ್‌ಐ ಯವರಾದ ಮೋಹನ್ ಕೆ ವಿ., ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಘಟಕದ ಸಿಬ್ಬಂದಿ ಪಾಲ್ಗೊಂಡಿದ್ದರು.

Previous articleಗಿರಿನಾಡಿನಲ್ಲಿ ಜೋಡಿ ಕೊಲೆ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ
Next articleತಲೆ ಮೇಲೆ ಕಲ್ಲು ಹಾಕಿ ಯುವಕನ ಬರ್ಬರ ಹತ್ಯೆ