ಬೆಂಗಳೂರು: ದೇಶದಲ್ಲಿ ೧೫೮ ವರ್ಷಗಳ ಇತಿಹಾಸ ಇರುವ ಬಾಲ್ ಬ್ಯಾಡ್ಮಿಂಟನ್ ಕ್ರೀಡೆ, ಈಗ ಮರುಜೀವ ಪಡೆದುಕೊಳ್ಳುತ್ತಿದೆ. ಆಧುನಿಕ ಜಗತ್ತಿನಲ್ಲಿ ಕ್ರಿಕೆಟ್ ಅಲೆಗೆ ಕೊಚ್ಚಿ ಹೋದ ಕ್ರೀಡೆಗಳಲ್ಲಿ ಬಾಲ್ ಬ್ಯಾಡ್ಮಿಂಟನ್‌ಗಳಲ್ಲಿ ಒಂದು. ಆದರೆ, ಸತತ ೪೬ ವರ್ಷಗಳಿಂದ ರಾಜ್ಯದಲ್ಲಿ ಈ ಕ್ರೀಡೆಗೆ ಆಧಾರಸ್ತಂಭವಾಗಿ ನಿಂತು, ಅದರ ಬೆಳವಣಿಗೆಗೆ ಶ್ರಮಿಸುತ್ತಿರುವ ರಾಜ್ಯದ ಬಾಲ್ ಬ್ಯಾಡ್ಮಿಂಟನ್ ಮಾಜಿ ಆಟಗಾರ ಡಾ. ಆರ್. ಸುಂದರ್‌ರಾಜ್ ಈಗ ಈ ಕ್ರೀಡೆಗೆ ಮತ್ತೆ ಮರುಜೀವ ನೀಡಲು ಮುಂದಾಗುತ್ತಿದ್ದಾರೆ.
ಸದ್ಯ ೫೦ ವರ್ಷಗಳಿಂದ ಮೇರಿ ಗೋ ಗ್ರೌಂಡ್ ಕ್ಲಬ್ ಈ ಬಾಲ್ ಬ್ಯಾಡ್ಮಿಂಟನ್ ಅನ್ನು ನಡೆಸಿಕೊಂಡು ಬರುತ್ತಿದ್ದು, ಪ್ರಸಕ್ತ ಸಮಯದವರೆಗೂ ಈ ಕ್ರೀಡೆಯನ್ನು ಕಾಪಾಡಿಕೊಂಡು ಬರಲಾಗಿದೆ. ಆದ್ರೆ, ಆರ್ಥಿಕ ನೆರವಿನ ಅಲಭ್ಯತೆ ಹಾಗೂ ಅನ್ಯ ಕ್ರೀಡೆಗಳ ಜನಪ್ರಿಯತೆ ಈ ಬಾಲ್ ಬ್ಯಾಡ್ಮಿಂಟನ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ರಾಜ್ಯದಲ್ಲಿ ಈ ಕ್ರೀಡೆ ಮತ್ತೆ ಪುಟಿದೇಳಲು ಹರಸಾಹಸ ಪಡುತ್ತಿದೆ. ಹಾಗಾಗಿ, ಈಗ ಮೇರಿ ಗೋ ಗ್ರೌಂಡ್ ಕ್ಲಬ್ ದಿಟ್ಟ ನಿರ್ಧಾರವನ್ನು ತೆಗೆದುಕೊಂಡು, ಅಖಿಲ ಭಾರತ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯನ್ನು ನಡೆಸಲು ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದೆ.
ಸ್ಫೋರ್ಟ್ಸ್ ಸುಂದರ್ ಎಂದೇ ಖ್ಯಾತಿ
ನಗರದ ಜೆ.ಪಿ.ನಗರದಲ್ಲಿ ಸ್ಪೋರ್ಟ್ಸ್ ಸುಂದರ್ ಎಂದೇ ಖ್ಯಾತಿ ಪಡೆದಿರುವ ಸುಂದರ್ ರಾಜ್, ಕ್ರೀಡಾಸಕ್ತರು. ಅದರಲ್ಲೂ ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಕಳೆದ ೪೬ ವರ್ಷಗಳಿಂದಲೂ ಸೇವೆ ಸಲ್ಲಿಸಿರುವ ಈ ಮಾಜಿ ಬಾಲ್ ಬ್ಯಾಡ್ಮಿಂಟನ್ ಆಟಗಾರ, ಕೋಚ್, ಮೆಂಟರ್, ನಿರ್ದೇಶಕ. ಅವಿರತ ಶ್ರಮವಹಿಸಿ, ಆರ್ಥಿಕವಾಗಿಯೂ ಈ ಕ್ರೀಡಾಭಿವೃದ್ಧಿಗೆ ತನ್ನದೇ ಆದ ಪಾತ್ರ ವಹಿಸಿದವರು. ರಾಜ್ಯ ಜಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕಾರ್ಯದರ್ಶಿಯಾಗಿ, ಶಾಲಾ ಮುಖ್ಯಸ್ಥರಾಗಿ, ಅಲ್ಲದೇ ಕ್ರೀಡೆಯಲ್ಲೂ ತೊಡಗಿಸಿಕೊಂಡಿರುವ ಡಾ. ಆರ್. ಸುಂದರ್ ರಾಜ್, ಮೇರಿ ಗೋ ಗ್ರೌಂಡ್ ಕ್ಲಬ್ ೫೦ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಈಗ ಬಾಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಕೂಡ ನಡೆಸುತ್ತಿದ್ದಾರೆ.
ಫೆ. ೨೧ರಿಂದ ೨೩ರವರೆಗೆ ಟೂರ್ನಿ
ಸದ್ಯ ಇದೇ ಫೆಬ್ರವರಿ ೨೧ರಿಂದ ೨೩ರವರೆಗೆ ರಾಷ್ಟ್ರೀಯ ಬಾಲ ಬ್ಯಾಡ್ಮಿಂಟನ್ ಟೂರ್ನಿ ನಡೆಸಲಾಗುತ್ತಿದ್ದು, ವಿವಿಧ ರಾಜ್ಯಗಳಿಂದ ಒಟ್ಟು ೨೩ ಪುರುಷರ ತಂಡಗಳು ಹಾಗೂ ೯ ಮಹಿಳಾ ತಂಡಗಳು ಪಾಲ್ಗೊಳ್ಳುತ್ತಿರುವ ಈ ಟೂರ್ನಿಗೆ ಎಲ್ಲಾ ಸಿದ್ಧತೆಗಳನ್ನು ವ್ಯವಸ್ಥಿತವಾಗಿ ಏರ್ಪಾಡು ಮಾಡಿ, ಕ್ರೀಡಾಪಟುಗಳಿಗೆ ಯಾವುದೇ ಕೊರತೆ ಆಗದಂತೆ ಮೇರಿ ಗೋ ಗ್ರೌಂಡ್ ಕ್ಲಬ್ ಮೂಲಕ ವ್ಯವಸ್ಥೆ ಮಾಡಿಸಿದ್ದಾರೆ. ಮೂರು ದಿನಗಳ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ೩೦೦ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ವಸತಿ ಸೌಕರ್ಯವನ್ನೂ ಕೂಡ ಏರ್ಪಡಿಸಿ, ಸಾಕಷ್ಟು ಎಚ್ಚರಿಕೆ ವಹಿಸಿದ್ದಾರೆ.
ತನ್ನ ೧೩ನೇ ವಯಸ್ಸಿನಲ್ಲಿ ಬೆಂಗಳೂರಿನ ರಾಣಿ ಚೆನ್ನಮ್ಮ ಮೈದಾನದಲ್ಲಿ ಬಾಲ್ ಬ್ಯಾಡ್ಮಿಂಟನ್ ಆರಂಭಿಸಿದ ಈ ಮುತ್ಸದ್ಧಿ, ನಂತರ ಇದೇ ಕ್ರೀಡೆಯ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತು ಕೆಲಸ ಮಾಡಿದ್ದಾರೆ. ಇವರ ಸಾಧನೆಯ ಹಾದಿಯಲ್ಲಿ, ಬಾಲ್ ಬ್ಯಾಡ್ಮಿಂಟನ್ ಆಟಗಾರರೇ ಕೈ ಜೋಡಿಸಿ, ಸತತ ೪೫ ವರ್ಷಗಳ ಕಾಲ ದೇಶದ ಹಲವು ರಾಜ್ಯಗಳಲ್ಲಿ ಪ್ರಶಸ್ತಿ ಗೆದ್ದು ರಾಜ್ಯಕ್ಕೆ ಹೆಮ್ಮೆ ತಂದಿದ್ದರು.
ಕರ್ನಾಟಕ ರಾಜ್ಯ ಸಬ್ ಜೂನಿಯರ್, ಜೂನಿಯರ್ ಮಟ್ಟದಲ್ಲದೇ ರಾಷ್ಟ್ರೀಯ ಮಟ್ಟದಲ್ಲೂ ಆಡಿರುವ ಸುಂದರ್‌ರಾಜ್, ಈಗ ಈ ಕ್ರೀಡೆಯ ಅಭಿವೃದ್ಧಿಯನ್ನಷ್ಟೇ ಆಶಿಸುತ್ತಿದ್ದಾರೆ. ಅಚ್ಚರಿಯೆಂದರೆ, ಬ್ಯಾಡ್ಮಿಂಟನ್ ಆಡಲು ತಳಮಟ್ಟದಲ್ಲಿ ಕೆಲಸ ಮಾಡಿರುವ ಸುಂದರ್‌ರಾಜ್, ಮಹಿಳೆಯರ ತಂಡಕ್ಕೂ ಕೋಚಿಂಗ್ ಮಾಡಿ ತಂಡವನ್ನು ಗೆಲ್ಲಿಸಿಕೊಟ್ಟಿದ್ದರು.
೩೫ ವರ್ಷ ಕರ್ನಾಟಕವೇ ಚಾಂಪಿಯನ್
೭೦ರ ದಶಕದಲ್ಲಿ ಬಾಲ್ ಬ್ಯಾಡ್ಮಿಂಟನ್ ಕ್ರೀಡೆ ಸಾಕಷ್ಟು ಜನಪ್ರಿಯತೆ ಪಡೆದಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ತಂಡ ಸತತ ೩೫ ವರ್ಷಗಳ ಕಾಲ ಚಾಂಪಿಯನ್ ಆಗಿ ಮೆರೆದಾಟಿತ್ತು. ವಿದ್ಯಾಭ್ಯಾಸದೊಂದಿಗೆ ಬಾಲ್ ಬ್ಯಾಡ್ಮಿಂಟನ್ ಆಟವನ್ನೂ ಮೈಗೂಡಿಸಿಕೊಂಡಿರುವ ಈ ಕನ್ನಡಿಗ, ಮಹಿಳಾ ತಂಡವನ್ನು ೬ ಬಾರಿ ಚಾಂಪಿಯನ್ ಆಗಿಸಿದ ಕೀರ್ತಿ ಹೊಂದಿದ್ದಾರೆ.
ಕ್ರೀಡಾಭಿವೃದ್ಧಿಗಾಗಿ ಕೊನೆ ಪ್ರಯತ್ನ
ಈಗ ಫೆಬ್ರವರಿ ೨೧ರಿಂದ ಆರಂಭಗೊಳ್ಳಲಿರುವ ಬಾಲ್ ಬ್ಯಾಡ್ಮಿಂಟನ್ ಟೂರ್ನಿ, ಸುಂದರ್‌ರಾಜ್ ಅವರ ಕನಸಿನ ಕೂಸಾಗಿದೆ. ಹಾಗಾಗಿ, ವಯಸ್ಸು ಸಹಕರಿಸದ ಸಮಯದಲ್ಲೂ ಬಾಲ್ ಬ್ಯಾಡ್ಮಿಂಟನ್‌ನತ್ತ ಕ್ರೀಡಾಭಿಮಾನಿಗಳನ್ನು ಸೆಳೆಯುವ ಸಲುವಾಗಿ ಈಗ ಟೂರ್ನಿ ಮಾಡುತ್ತಿದ್ದಾರೆ. ಸಿನಿರಂಗದಲ್ಲೂ ಭಾರಿ ಜನಪ್ರಿಯರಾಗಿರುವ ಸುಂದರ್‌ರಾಜ್ ಕೂಗಿಗೆ, ಟೂರ್ನಿಗಾಗಿ ಸಿನಿತಾರೆಯರೂ ಕೂಡ ಪಾಲ್ಗೊಳ್ಳುತ್ತಿದ್ದಾರೆ. ಇಷ್ಟೆಲ್ಲಾ, ಬಾಲ್ ಬ್ಯಾಡ್ಮಿಂಟನ್ ವೃದ್ಧಿಗಾಗಿಯೇ ಹೊರತು, ಮತ್ಯಾವುದೇ ಹಣ ಗಳಿಸುವ ಉದ್ದೇಶವಲ್ಲ. ಹಾಗಾಗಿ, ಸುಂದರ್‌ರಾಜ್ ಅವರ ಕನಸಿನಂತೆ ಬಾಲ್ ಬ್ಯಾಡ್ಮಿಂಟನ್ ಮತ್ತಷ್ಟು ಬೆಳೆದರೆ, ನಿಜಕ್ಕೂ ಇವರ ಶ್ರಮಕ್ಕೆ ಒಂದು ನ್ಯಾಯ ಸಿಗಲಿದೆ.