Home Advertisement
Home ನಮ್ಮ ಜಿಲ್ಲೆ ಬಜೆಟ್ ನೋಡಲು ಎರಡು ಕಣ್ಣು ಸಾಲದು

ಬಜೆಟ್ ನೋಡಲು ಎರಡು ಕಣ್ಣು ಸಾಲದು

0
85

ಎಂಥ ಅಂದ ಎಂಥ ಚಂದ ಶಾರದಮ್ಮ
ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್
ನೋಡಲು ಬಿಜೆಪಿ, ಜೆಡಿಎಸ್ ನಾಯಕರಿಗೆ
ಎರಡು ಕಣ್ಣು ಸಾಲದಮ್ಮ…

ಚಿ.ಉದಯಶಂಕರ್ ರಚಿಸಿದ ಗೀತೆಯನ್ನು ವಿಧಾನಪರಿಷತ್ ಕಲಾಪದಲ್ಲಿ ಸದಸ್ಯ ಯು. ಬಿ. ವೆಂಕಟೇಶ್ ಅವರು ಬಜೆಟ್ ಮೇಲೆ ನಡೆದ ಚರ್ಚೆಯಲ್ಲಿ ವಿರೋಧ ಪಕ್ಷಗಳನ್ನು ಕೆಣಕಲು ಬಳಸಿಕೊಂಡರು.
ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನೋಡಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಹೊಟ್ಟೆಕಿಚ್ಚು. ಹೀಗಾಗಿ ಅವರು ವಿರೋಧಿಸುತ್ತಿದ್ದಾರೆ. ಎಲ್ಲ ಗ್ಯಾರಂಟಿಗಳಿಗೆ ಒಂದು ಬಡ ಕುಟುಂಬಕ್ಕೆ ಮಾಸಿಕ ೫೦ ರಿಂದ ೫೫ ಸಾವಿರ ರೂ. ತಲುಪುತ್ತಿದೆ. ನಮ್ಮ ಮಿಲೆಟ್ ಯೋಜನೆ ಎಲ್ಲರಿಗೂ ಸಿರಿಧಾನ್ಯ ಸಿಗುವಂತೆ ಮಾಡಿದೆ. ಮೇಕೆದಾಟು ಯೋಜನೆಗೆ ರಾಜ್ಯ ಸರ್ಕಾರ ಹಣ ಮೀಸಲಿಟ್ಟಿದೆ. ಕೇಂದ್ರ ಸರ್ಕಾರ ಇನ್ನು ಅನುಮತಿ ಕೊಟ್ಟಿಲ್ಲ. ನಮ್ಮ ಬಿಜೆಪಿ ನಾಯಕರು ಈ ಯೋಜನೆಗೆ ಅನುಮತಿಕೊಡಿಸಬೇಕು. ೮೦ ವರ್ಷ ದಾಟಿದವರಿಗೆ ಮನೆ ಬಾಗಿಲಿಗೆ ಆಹಾರ ವಿತರಣೆ ಮಾಡುವ ರೀತಿಯಲ್ಲೇ ಅಂಗವಿಕಲರಿಗೂ ವಿತರಣೆ ಮಾಡುವ ಕೆಲಸವನ್ನು ಸರ್ಕಾರ ಕೈಗೊಳ್ಳಬೇಕು. ಬೆಂಗಳೂರು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಇದಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಟಿದ್ದೆ. ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿ ದಿನದ ೨೪ ತಾಸು ವ್ಯಾಪಾರ ನಡೆಸುವ ನೀತಿಯನ್ನು ಜಾರಿಗೆ ತರಬೇಕು. ಈಗ ಮಧ್ಯರಾತ್ರಿವರೆಗೆ ಅವಕಾಶ ನೀಡಲಾಗಿದೆ. ಮೆಜೆಸ್ಟಿಕ್, ಮಾರ್ಕೆಟ್, ಕಾರ್ಪೋರೇಷನ್, ರೈಲು ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಜನರು ಹೆಚ್ಚು ಸಂಚರಿಸುವ ಸ್ಥಳಗಳಲ್ಲಿ ೨೪ ತಾಸು ವ್ಯಾಪಾರ ನಡೆಸಲು ಅನುಮತಿಕೊಡಬೇಕು. ಇದರಿಂದ ನಾಗರಿಕರಿಗೆ ಅನುಕೂಲವಾಗುತ್ತದೆ ಎಂದರು.
ಸಭಾಪತಿ ಒಂದು ಬಾರಿ ಕಿದ್ವಾಯಿ ಆಸ್ಪತ್ರೆಗೆ ಭೇಟಿ ನೀಡಬೇಕು
ಬೆಂಗಳೂರಿನಲ್ಲಿರುವ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ರೋಗಿಗಳು ಪಡುತ್ತಿರುವ ಕಷ್ಟವನ್ನು ನೋಡಲು ಸಭಾಪತಿಗಳು ಒಮ್ಮೆ ಅಲ್ಲಿಗೆ ಭೇಟಿ ನೀಡಬೇಕು ಎಂದು ಸದಸ್ಯ ಯು. ಬಿ. ವೆಂಕಟೇಶ್ ಮನವಿ ಮಾಡಿದರು. ನಾನು ಹಲವು ಬಾರಿ ಅಲ್ಲಿಗೆ ಭೇಟಿ ನೀಡಿದ್ದೇನೆ. ಕ್ಯಾನ್ಸರ್ ರೋಗಕ್ಕೆ ತುತ್ತಾದ ರೋಗಿಗಳು ಟೋಕನ್ ಪಡೆಯಲು ಮಧ್ಯರಾತ್ರಿಯಿಂದಲೇ ಸಾಲು ನಿಲ್ಲುತ್ತಾರೆ. ಟೋಕನ್ ಪಡೆದವರು ಚಿಕಿತ್ಸೆ ಪಡೆಯಲು ಒಂದೊಂದು ಬ್ಲಾಕ್‌ಗೆ ೨ ರಿಂದ ೩ ಕಿ. ಮೀ. ನಡೆಯಬೇಕು. ಕ್ಯಾನ್ಸರ್ ರೋಗಿಗಳನ್ನು ಎಲ್ಲರೂ ಕೈಬಿಟ್ಟಿರುತ್ತಾರೆ. ಹೀಗಾಗಿ ರೋಗಿಗಳು ಮಾತ್ರ ಅಲ್ಲಿಗೆ ಚಿಕಿತ್ಸೆಗೆ ಬಂದಿರುತ್ತಾರೆ. ಹೊಟ್ಟೆಗೆ ಊಟ ಇಲ್ಲದೆ ಸುಸ್ತಾಗಿರುತ್ತಾರೆ. ಒಂದು ಬ್ಲಾಕ್‌ನಿಂದ ಮತ್ತೊಂದು ಬ್ಲಾಕ್‌ಗೆ ನಡೆದು ಹೋಗಲು ಅವರಿಗೆ ಶಕ್ತಿ ಇರುವುದಿಲ್ಲ. ಹೀಗಾಗಿ ಸರ್ಕಾರ ರೋಗಿಗಳನ್ನು ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಮಾಡಬೇಕು. ಅಲ್ಲದೆ ಆಸ್ಪತ್ರೆ ಆವರಣದಲ್ಲಿ ಅಲ್ಲಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯಬೇಕು ಎಂದರು.

Previous articleಬಾಹುಬಲಿ ಸಂದೇಶದಿಂದ ರಾಷ್ಟ್ರದಲ್ಲಿ ಧರ್ಮಪ್ರಭಾವನೆಯ ಸಂಸ್ಕಾರ ಬೆಳೆಯಲಿ
Next articleಕನ್ನಡಿಗರಿಗೆ ಮೀಸಲಾತಿ ನಿರ್ಣಯ ಮಂಡನೆ