ವಿಜಯಪುರ: ಬಿಜೆಪಿ ಆತಂರಿಕ ಒಳಜಗಳದಿಂದಾಗಿ ವಕ್ಫ್ ಹೋರಾಟದ ನಾಟಕವನ್ನು ಬಿಜೆಪಿಯ ನಾಟ್ಯ ಮಂಡಳಿ ಮಾಡುತ್ತಿದೆ. ಧರಣಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ ಏಕೆ ಭಾಗಿಯಾಗಿಲ್ಲ ಎಂದು ಸಚಿವ ಡಾ. ಎಂ.ಬಿ. ಪಾಟೀಲ ಕುಟುಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಕಾಯ್ದೆ ರದ್ದಾಗುವವರೆಗೂ ಸಹ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದ್ದ ಧರಣಿ ನಿರತರು ಧರಣಿ ಕೈ ಬಿಟ್ಟಿದ್ದೇಕೆ? ಎಂದು ಖಾರವಾಗಿ ಪ್ರಶ್ನಿಸಿದ ಡಾ.ಪಾಟೀಲ, ಈ ಹೋರಾಟ ಇನ್ನೂ ೩೬೫ ದಿನ ಮುಂದುವರೆಯಲಿದೆ. ಯತ್ನಾಳ ಏಳುವುದಿಲ್ಲ ಎಂದು ಭಾವಿಸಿದ್ದೇ, ಜೆಪಿಸಿ ಅಧ್ಯಕ್ಷರನ್ನು ಕರೆಯಿಸಿ ಅವರನ್ನು ಸಹ ನಗೆಪಾಟಲೀಗೀಡಾಗುವಂತೆ ಮಾಡಿದೆ, ಜೆಪಿಸಿ ಅಧ್ಯಕ್ಷರು ಸಹ ನಿಯಮ ಉಲ್ಲಂಘಿಸಿದ್ದು, ಜೆಪಿಸಿ ಉಳಿದ ಸದಸ್ಯರು ಅವರ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡುವ ಚಿಂತನೆಯಲ್ಲಿದ್ದಾರೆ ಎಂದರು.
ಧರಣಿ ಸ್ಥಳದಲ್ಲಿ ಸೊಳ್ಳೆಗಳ ಕಾಟ ಅಧಿಕವಾಗಿತ್ತು. ಹೀಗಾಗಿ ಧರಣಿಯಿಂದ ಎದ್ದರೇ ಎಂದು ಎಂಬಿಪಿ ಲೇವಡಿ ಮಾಡಿದರು.
ಮಠಾಧೀಶರಿಗೂ ಮನವರಿಕೆ
ಹೋರಾಟದಲ್ಲಿ ಭಾಗಿಯಾದ ಮಠಾಧೀಶರು ಮುಗ್ದರು, ಕನ್ಹೇರಿ ಶ್ರೀಗಳಿಗೆ ಬಿಜೆಪಿ ರಾದ್ಧಾಂತ ಗೊತ್ತಿಲ್ಲ, ಅವರಿಗೆ ಬಿಜೆಪಿ ನೈಜತೆ ಗೊತ್ತಾದರೆ ಅವರೇ ಟೀಕೆ ಮಾಡುತ್ತಾರೆ. ಹೀಗಾಗಿ ಎಲ್ಲ ದಾಖಲೆಗಳನ್ನು ಶ್ರೀಗಳಿಗೆ ಕಳುಹಿಸುವೆ ಎಂದರು.
























