ಟೈಟ್ ಆಗಬೇಕಾಗಿದ್ದು ವ್ಯವಸ್ಥೆಯ ನಟ್ಟು-ಬೋಲ್ಟು !

`ಯಾರಿಗೆ, ಹೇಗೆ ನಟ್ಟು ಬೋಲ್ಟು ಟೈಟ್ ಮಾಡಬೇಕು ಎಂಬುದು ಗೊತ್ತಿದೆ… ಮಾಡುತ್ತೇನೆ…’
ಚಲನಚಿತ್ರ ಉತ್ಸವ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಅಸಮಾಧಾನ ಹಾಗೂ ವೀರಾವೇಶದ ಈ ಮಾತು ಕೇವಲ ಆ ಕ್ಷೇತ್ರ ಮತ್ತು ಕಲಾವಿದರಿಗೆ ಮಾತ್ರ ಸೀಮಿತವಾಗಿದೆಯೇ? ಅಥವಾ ಸೀಮಿತ ಆಗಿರಬೇಕೇ?
ಡಿ.ಕೆ. ಶಿವಕುಮಾರ ಅವರು ಈ ರಾಜ್ಯದ ಉಪ ಮುಖ್ಯಮಂತ್ರಿ. ಕೆಪಿಸಿಸಿ ಅಧ್ಯಕ್ಷರೂ ಕೂಡ. ಮೇಲಾಗಿ ಪ್ರಭಾವಿ ನಾಯಕ. ಕೇವಲ ಚಲನಚಿತ್ರೋದ್ಯಮ ಮತ್ತು ಕಲಾವಿದರ ಬೋಲ್ಟ್ ನಟ್ ಮಾತ್ರ ಸಡಿಲಾಗಿರುವುದು ಅವರಿಗೆ ಕಂಡಿದ್ದರೆ ಅದು ದೃಷ್ಟಿ ದೋಷ ಹಾಗೂ ಸಂಕುಚಿತ ನೋಟ ಎನ್ನುವುದರಲ್ಲಿ ಅನುಮಾನವಿಲ್ಲ.
ಆದರೆ ಉಪ ಮುಖ್ಯಮಂತ್ರಿಯಾಗಿ ಡಿಕೆಶಿ ಅವರು ಸರ್ಕಾರದ ಮತ್ತು ಸಮಾಜದ ಹಲವು ವ್ಯವಸ್ಥೆ ಮತ್ತು ದೋಷದ ಬೋಲ್ಟ್ ನಟ್ ಟೈಟ್ ಮಾಡುವ ಅಗತ್ಯತೆಯನ್ನು ಕೈಗೊಂಡರೆ ಅವರ ವೀರಾವೇಶದ ಮಾತಿಗೆ ಹೆಚ್ಚು ಅರ್ಥ ಬಂದೀತು… ಜನಮೆಚ್ಚುಗೆಯೂ ಕೂಡ… ಹೌದಲ್ಲವೇ?
ರಾಜ್ಯದ ಹಲವು ಸಂಗತಿಗಳನ್ನು ಗಮನಿಸಿ.
ಕಳೆದೊಂದು ತಿಂಗಳಿನಿಂದ ರೇಷನ್(ಪಡಿತರ) ವಿತರಣೆಯಲ್ಲಿ ಸಾಕಷ್ಟು ಲೋಪ ದೋಷಗಳಾಗಿವೆ. ಮೂರು ತಿಂಗಳಿನಿಂದ ಪಡಿತರವೂ ಸಿಕ್ಕಿಲ್ಲ. ಹಣದ ಗ್ಯಾರಂಟಿಯೂ ಇಲ್ಲ. ಅಲ್ಲದೇ ಅಂಗನವಾಡಿ ಮತ್ತು ಅನ್ನಭಾಗ್ಯ ಯೋಜನೆಯ ನೂರಾರು ಟನ್ ಆಹಾರ ಧಾನ್ಯ ಕಾಳಸಂತೆಕೋರರ ಗೋಡೌನ್‌ಗಳಲ್ಲಿ ಜಪ್ತಿಯಾಗುತ್ತಿವೆ.
ಒಟ್ಟಾರೆ ಪಡಿತರ ವಿತರಣೆ ದೋಷದ ಬಗ್ಗೆ, ಅವ್ಯವಹಾರದ ಬಗ್ಗೆ ಅಸಮಾಧಾನ ಮೂಡಿದೆ. ಇದಕ್ಕೆ ಮಂತ್ರಿ ಇದ್ದರೂ, ಸರ್ಕಾರ ಒಟ್ಟಾರೆಯಾಗಿ ಈ ಪಡಿತರ ವ್ಯವಸ್ಥೆಯ ನಟ್ ಬೋಲ್ಟ್ ಸಡಿಲಗೊಂಡಿರುವುದು ಕಾಣುತ್ತದೆ ಎನ್ನಬಹುದೇನೋ?
ಬೆಳಗಾವಿ, ಕಲಬುರ್ಗಿ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಸಾಂಸ್ಕೃತಿಕ ನಗರಿ ಮೈಸೂರು, ಚಾಮರಾಜನಗರ, ಸ್ವತಃ ಬೆಂಗಳೂರು ನಗರದಲ್ಲಿಯೇ ಮಹಿಳೆಯರ ಬೆತ್ತಲೆ, ಅವರಿಗೆ ಥಳಿತ, ಅವರ ಮೇಲೆ ಹಲ್ಲೆ, ಅತ್ಯಾಚಾರ ಮತ್ತು ಅಸ್ಪೃಶ್ಯತೆ, ಸವರ್ಣೀಯರ ಮತ್ತು ದಲಿತರ ನಡುವಿನ ಸಂಘರ್ಷ ನಡೆದವು. ಕೋಟ್ಯಂತರ ರೂ ಮೌಲ್ಯದ ಮಾದಕ ದೃವ್ಯ ಬೆಂಗಳೂರು, ಮಂಗಳೂರಲ್ಲಿ ಲಭ್ಯವಾದವು. ಇಡೀರಾಜ್ಯ ಮಾದಕ ಜಾಲದಲ್ಲಿ ಸಿಲುಕಿದಂತಿದೆ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಜೊತೆಗೆ, ಸಾಮಾಜಿಕ ಸಾಮರಸ್ಯ, ಸ್ವಾಸ್ಥ್ಯ ಕಾಪಾಡುವಲ್ಲಿ ಸಡಿಲಗೊಂಡಿರುವ ಬೋಲ್ಟ್ ನಟ್‌ಗಳನ್ನು ಟೈಟ್ ಮಾಡುವ ಅಗತ್ಯತೆ ಯಾಕೋ ಮುಖ್ಯವಾಗಲಿಲ್ಲವೇನೋ…?
ಇಡೀ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ, ನಗರಸಭೆ-ಪುರಸಭೆಗಳ, ನಗರ ಮತ್ತು ಪಟ್ಟಣಗಳ ರಸ್ತೆ, ನೀರು, ಚರಂಡಿ, ಮೂಲಭೂತ ಸೌಕರ್ಯಗಳ ಕುರಿತು ಜನಾಕ್ರೋಶ ಭುಗಿಲೆದ್ದಿದೆ. ವಾಹನಗಳು ಓಡಾಡಲೂ ಆಗದ, ಸ್ವಚ್ಛ ಗಾಳಿಯೂ ಸಿಗದ, ಅಪಘಾತಗಳು ಹೆಚ್ಚಾಗುತ್ತಿರುವ ಈ ಅವ್ಯವಸ್ಥೆಯ ಬಗ್ಗೆ ಸರ್ಕಾರ, ಗೃಹಮಂತ್ರಿ ನಟ್-ಬೊಲ್ಟ್ ಸರಿಪಡಿಸಬೇಕಲ್ಲವೇ?
ಕಾಮಗಾರಿ ನಿರ್ವಹಿಸಿದ ಸುಮಾರು 70 ಸಾವಿರ ಕೋಟಿ ರೂ. ಗೂ ಅಧಿಕ ಬಿಲ್ ಪಾವತಿ ಗುತ್ತಿಗೆದಾರರಿಗೆ ಆಗಬೇಕಿದೆ. ಹಲವು ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಥವಾ ದಿವಾಳಿ ಘೋಷಣೆಯಲ್ಲಿದ್ದಾರೆ. ಈ ಸ್ಥಿತಿಯನ್ನು ಸರಿಪಡಿಸುವ ಜವಾಬ್ದಾರಿ ಹೊರಬೇಕಾದದ್ದು ಸರ್ಕಾರವೇ ಅಲ್ಲವೇ? ಎಲ್ಲಿ ಸಡಿಲಗೊಂಡಿದೆ, ಬೋಲ್ಟ್-ನಟ್ ಸಡಿಲಿಸಿದವರು ಯಾರು?
ಬಹುಶಃ ಈ ಬೋಲ್ಟು- ನಟ್ಟು ಸಡಿಲಗೊಂಡಷ್ಟೂ ಲಾಭ, ಕಿಸೆಭರ್ತಿ ಜಾಸ್ತಿಯೇನೋ ಎನ್ನುವ ಕಾರಣಕ್ಕೆ ಟೈಟ್ ಮಾಡಲು ಬಯಸಿಲ್ಲ ಎನಿಸುತ್ತದೆ!
ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದೆ. ಸಮೃದ್ಧ ಮಳೆಯಾದರೂ, ಬೆಳೆಯಾದರೂ ನೇಣಿಗೆ ರೈತ ಕೊರಳೊಡ್ಡುತ್ತಿರುವುದು ಏಕೆ? ಸಾಲ ಸೋಲ ಹೆಚ್ಚಾಗಿರುವುದು ಏಕೆ? ಬೆಳೆ ವಿಮೆ ಕೈಗೆಟುಕದಿರುವುದು ಏಕೆ? ಮೈಕ್ರೋ ಫೈನಾನ್ಸ್‌ನಂತಹ ಕ್ರೂರ ಕೈಗಳಿಗೆ ರೈತ ಸಿಲುಕಿರುವುದೇಕೆ? ಇದರ ಒಟ್ಟಾರೆ ಬೋಲ್ಟ್ ನಟ್ ಎಲ್ಲಿದೆ ಎಂದು ಡಿಕೆ ಆದಿಯಾಗಿ ಎಲ್ಲರಿಗೂ ಗೊತ್ತಲ್ಲದಿಲ್ಲ.
ರೈತರ ಜಮೀನುಗಳಿಗೆ ನೀರಿಲ್ಲ. ಆದರೆ ಆಣೆಕಟ್ಟುಗಳ ಗೇಟ್‌ಗಳ ನಟ್ಟು ಸಡಿಲಾಗಿ ತೆಲಂಗಾಣ, ತಮಿಳುನಾಡಿಗೆ ನೀರು ಹರಿದು ಹೋಯಿತು. ಗೇಟ್ ನಟ್ಟನ್ನು ಸಡಿಲಗೊಳಿಸಿದವರು ಯಾರು?
ಹೈಕೋರ್ಟು, ಸರ್ವೋಚ್ಚ ನ್ಯಾಯಾಲಯ ಛೀಮಾರಿ ಹಾಕಿದೆ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಕುಲಗೆಡಿಸಿದಿರಿ ಎಂದು… ಇಡೀ ವ್ಯವಸ್ಥೆಯ ಬಲ ಪಡಿಸುವ ಬೋಲ್ಟ್ ನಟ್ ಬಿಗಿಗೊಳಿಸಲು ಏಕೆ ಆಗಿಲ್ಲ? ಇದು ಅಗತ್ಯ ಇದೆ ಅಲ್ಲವೇ?
ಯುವ ನಿರುದ್ಯೋಗಿಗಳ ಬದುಕಿನ ಮೇಲೆ ಕಲ್ಲುಚಪ್ಪಡಿ ಎಳೆದ ಬ್ರಹ್ಮಾಂಡ ಭ್ರಷ್ಟಾಚಾರದ ಅಪಖ್ಯಾತಿ ಪಡೆದ ಕೆಪಿಎಸ್‌ಸಿ ಬೋಲ್ಟ್ ನಟ್ ಸಡಿಲಗೊಂಡಿಲ್ಲವೇ? ರಾಜ್ಯ ಹೈಕೋರ್ಟ್ ಕ್ಯಾಕರಿಸಿ ಉಗಿದರೂ ಕೆ.ಪಿ.ಎಸ್.ಸಿ ಗೆ ಹೊಸ ನಟ್ ಬೊಲ್ಟ್ ಬಡಿಯುವ ಅನಿವಾರ್ಯತೆ ಮಹಾನಾಯಕರಿಗೆ ಅನ್ನಿಸಬೇಕಿತ್ತಲ್ಲವೇ? ವಿಶ್ವ ವಿದ್ಯಾಲಯಗಳ ಬೋಲ್ಟ್ ನಟ್ ಸಡಿಲಾಗಿ ಬಹುಶಃ ದಶಕಗಳೇ ಸಂದವೇನೋ? ತುಕ್ಕು ಹಿಡಿದು ಬಿಟ್ಟಿವೆ ಇವು. ಈಗಂತೂ ಕೇವಲ ಗೆಸ್ಟ್ ಲೆಕ್ಟರರ್‌ಗಳಿಂದಲೇ(ಅತಿಥಿ ಉಪನ್ಯಾಸಕರು) ವಿಶ್ವವಿದ್ಯಾಲಯ, ಕಾಲೇಜುಗಳು ನಡೆಯುತ್ತಿವೆ. ಖಾಸಗಿ ವಿಶ್ವವಿದ್ಯಾಲಯಗಳು ಶ್ರೀಮಂತ ಮಕ್ಕಳ ಪಾಲಾಗಿವೆ. ಮತ್ತೆ ವಿಶ್ವವಿದ್ಯಾಲಯಗಳ ವಿಲೀನ, ಬೇರ್ಪಡಿಸುವಿಕೆ ಈ ವಿವಾದ. ಅರೆ ಕಾಸಿನ ಮಜ್ಜಿಗೆ ಪಡೆಯುವ ಸ್ಥಿತಿ ಉನ್ನತ ಶಿಕ್ಷಣ ಇಲಾಖೆಗೆ ಉಂಟಾಗಿದೆ.
ವಿಶ್ವವಿದ್ಯಾಲಯಗಳಿಗೆ ಇಲ್ಲವೇ ಇಲ್ಲ ಬೋಲ್ಟ್ ನಟ್.
ತನ್ನ ಜಮೀನಿನ ಭೂ ದಾಖಲೆ (ಇ-ಸ್ವತ್ತು) ಪಡೆಯಲು, ತನ್ನ ವಾರಸಾ (ಉತ್ತರಾಧಿಕಾರತ್ವ ಪ್ರಮಾಣ ಪತ್ರ) ಪಡೆಯಲು ಸಾವಿರಾರು ರೂಪಾಯಿ ಲಂಚ ತೆತ್ತರೂ ಅಲೆದಾಡಬೇಕಾದ ದುಸ್ಥಿತಿ ಇರುವ ಕಂದಾಯ ಇಲಾಖೆಯ ಬೋಲ್ಟ್ ನಟ್ ಟೈಟ್ ಮಾಡಿದರೆ ಬಹುಶಃ ರಾಜ್ಯದ ಅರ್ಧದಷ್ಟು ಜನತೆ ಸಮಾಧಾನಗೊಂಡಾರು. ಆದರೆ ಭ್ರಷ್ಟಾಚಾರದ, ಲಂಚ ರುಷುವತ್ತಿನಿಂದ ತುಕ್ಕು ಹಿಡಿದು ಹೋಗಿರುವ ಕಂದಾಯ ವ್ಯವಸ್ಥೆಗೆ ಹೊಸ ಬೋಲ್ಟ್ ನಟ್‌ಗಳೇ ಬೇಕಾಗಿವೆಯೋ ಏನೋ?
ಜಮೀನು ಕೊಟ್ಟು ನೀರಿಗಾಗಿ ಕಾತರದಿಂದ ಕಾಯುತ್ತಿರುವ ಜನತೆಗೆ ಜಲಸಂಪನ್ಮೂಲ ಸಚಿವರೇ ಇಲಾಖೆಯ ಬೋಲ್ಟ್ ನಟ್ ಟೈಟ್ ಮಾಡುತ್ತಿಲ್ಲ. ಇನ್ನು ಚಿತ್ರೋದ್ಯಮದ ಬೋಲ್ಟ್ ನಟ್ ಬಗ್ಗೆ ಮಾತನಾಡುತ್ತಾರೆ !!
ಇವಿಷ್ಟೇ ಅಲ್ಲ. ಯಾವ ಕ್ಷೇತ್ರದ ಅಥವಾ ಯಾವ ವ್ಯವಸ್ಥೆಯ ಬೋಲ್ಟ್ ನಟ್ ಸಡಿಲಾಗಿಲ್ಲ? ಅಥವಾ ಕಳಚಿ ಬಿದ್ದಿಲ್ಲ? ಎಲ್ಲಕ್ಕೂ ಹೆಚ್ಚಾಗಿ ಜನಪ್ರತಿನಿಧಿಗಳ ಜವಾಬ್ದಾರಿ ಮತ್ತು ನೈತಿಕತೆ ಸಡಿಲಗೊಂಡಿದೆಯಲ್ಲ, ಇದನ್ನು ಯಾರು ಟೈಟ್ ಮಾಡಬೇಕು? ಮತ ಪಡೆದ ಜನಪ್ರತಿನಿಧಿ ನಂತರ ಮತದಾರನಿಗೆ ಬಾಧ್ಯಸ್ಥನಾಗೇ ಇಲ್ಲ. ಜನಪ್ರತಿನಿಧಿಗಳು ಹೇಗೆ ವರ್ತಿಸಿಯಾರು ಎನ್ನುವುದಕ್ಕೆ ಮೊನ್ನೆ ನಡೆದ ಬಜೆಟ್ ಅಧಿವೇಶನ ಸಾಕ್ಷಿ. ಒಂದು ಮೌಲಿಕ ಚರ್ಚೆಯಿಲ್ಲ. ಪರಿಹಾರವಿಲ್ಲ. ಘನತೆ ಗೌರವವಿಲ್ಲ. ಹಿರಿಯರ ಮನೆ ವಿಧಾನ ಪರಿಷತ್ತಿನ ಸಭಾಪತಿಗಳೇ ಖೇದದಿಂದ ರಾಜೀನಾಮೆಗೆ ಮುಂದಾದರು. ದಾಖಲೆ ಪತ್ರಗಳನ್ನು ಹರಿದು ತೂರಾಡಿದ ಹದಿನೆಂಟು ಶಾಸಕರನ್ನು ವಿಧಾನಸಭಾಧ್ಯಕ್ಷರು ಅಮಾನತುಗೊಳಿಸಿದರು. ಈ ಶಾಸಕರ ಬೋಲ್ಟ್ ನಟ್ ಟೈಟ್ ಮಾಡಲು ಇನ್ನಾರು ಬರಬೇಕು?
ಕೇವಲ ಚಲನಚಿತ್ರ ಕಲಾವಿದರು, ನಿರ್ದೇಶಕರು, ಉದ್ಯಮಿಗಳ ಬೋಲ್ಟ್ ನಟ್ ಟೈಟ್ ಮಾಡುವುದಲ್ಲ. ಇದನ್ನು ಟೈಟ್ ಮಾಡುವ ಮೊದಲು ಈ ವ್ಯವಸ್ಥೆಯ ಬೋಲ್ಟ್ ನಟ್ ಬಿಗಿ ಮಾಡಿ. ಬೋಲ್ಟ್ ನಟ್ ಮಾಡುವ ಪ್ರಕ್ರಿಯೆಯಲ್ಲಿ ಡಿಕೆಶಿ ಎಷ್ಟರ ಮಟ್ಟಿಗೆ ಪ್ರಯತ್ನಿಸಿದರೋ ಅಥವಾ ವೀರಾವೇಶದ ಮಾತಿಗೆ ಸೀಮಿತವೋ ಗೊತ್ತಿಲ್ಲ. ಆದರೆ ಸರ್ಕಾರದ, ಜನಪ್ರತಿನಿಧಿಗಳ, ಸಚಿವರ ಸೊಂಟದ ಮೂಳೆಗೆ ಬೋಲ್ಟ್ ನಟ್ ಹಾಕುವ ಅಗತ್ಯತೆಯಂತೂ ಇದೆ!.
ಚಲನಚಿತ್ರ ಕಲಾವಿದರು ಮತ್ತು ಚಿತ್ರೋದ್ಯಮಿಗಳು ಸಾಂಸ್ಕೃತಿಕ ರಾಯಭಾರಿಗಳು. ಜನಪರ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಬೆಂಬಲಿಸಬೇಕು. ಜಲ- ನೆಲ ರಕ್ಷಣೆಗೆ ನಿಲ್ಲಬೇಕು ಎನ್ನುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಬೋಲ್ಟ್ ನಟ್ ಟೈಟ್ ಅಗತ್ಯತೆಯ ಬಗ್ಗೆ ಪ್ರತಿಪಾದಿಸಿರಬಹುದು. ಡಿ.ಕೆ.ಶಿವಕುಮಾರ ಅವರ ಕಾಳಜಿ, ಕಳಕಳಿ ತಪ್ಪು ಎನ್ನಲಾಗದು. ಜನ, ಜನಪ್ರತಿನಿಧಿಗಳು, ವಿಚಾರವಂತರು, ಜನಪರ ಯೋಜನೆಗಳ ಬಗ್ಗೆ, ಈ ನೆಲ-ಜಲದ ಸಂರಕ್ಷಣೆ ಬಗ್ಗೆ ಕಾಳಜಿ ಹೊಂದಿರಬೇಕು ಎನ್ನುವುದು ನಿಜ. ಆದರೆ ಜನರ ಕಾಳಜಿ, ಒತ್ತಾಸೆ, ಅವರ ಬೇಡಿಕೆ ಯಾರಿಗೋ ಮೃಷ್ಟಾನ್ನ ಭೋಜನವಾಗಿ ಈ ವ್ಯವಸ್ಥೆ ಹದಗೆಟ್ಟಿರುವಾಗ ಜನರೇಕೆ ಬರುತ್ತಾರೆ ಅಲ್ಲವೇ? ಆದರೆ ಸರ್ಕಾರ, ವ್ಯವಸ್ಥೆ, ಜನಪ್ರತಿನಿಧಿಗಳ ಆಟಾಟೋಪ, ಅಧಿಕಾರಿಗಳ ಭ್ರಷ್ಟತನ, ಜನರ ಶೋಷಣೆ ಈ ಎಲ್ಲ ದುರವಸ್ಥೆಗಳನ್ನು ಸರಿಪಡಿಸಲು ಯಾವ ನಟ್ಟು-ಬೋಲ್ಟು ಪ್ಲೇಟು ಅಗತ್ಯವಿದೆ? ಯಾರು ಕೊಡಬೇಕು? ಮೊದಲು ಇವು ಸರಿಯಾಗಬೇಕಲ್ಲವೇ?