ಜನ್ಮಸಿದ್ಧ ಪೌರತ್ವ ರದ್ದು: ಭಾರತೀಯರು ಕಂಗಾಲು

ಅಮೆರಿಕಾದಲ್ಲಿ ೫.೪ ಮಿಲಿಯನ್ ಭಾರತೀಯ ಅಮೆರಿಕನ್ನರಿದ್ದಾರೆ. ಅವರು ಅಮೆರಿಕಾದ ಒಟ್ಟು ಜನಸಂಖ್ಯೆಯ ೧.೪೭% ಪಾಲು ಹೊಂದಿದ್ದಾರೆ. ಈ ಸಮುದಾಯದಲ್ಲಿ, ಮೂರನೇ ಎರಡರಷ್ಟು (೬೬%) ವಲಸಿಗರಾಗಿದ್ದು, ೩೪% ಜನರು ಅಮೆರಿಕಾದಲ್ಲೇ ಜನಿಸಿದ್ದಾರೆ.
ಬಹಳಷ್ಟು ಭಾರತೀಯ ಕುಟುಂಬಗಳಿಗೆ, ಜನ್ಮಸಿದ್ಧ ಪೌರತ್ವ ಜೀವನದಲ್ಲಿ ಸ್ಥಿರತೆಗೆ ಮತ್ತು ಅಮೆರಿಕಾದಲ್ಲಿ ಭವಿಷ್ಯದ ಅವಕಾಶಗಳಿಗೆ ಬಹಳ ಮುಖ್ಯವಾಗಿದೆ. ಆದರೆ ಟ್ರಂಪ್ ಪ್ರಸ್ತಾಪಿಸಿರುವ ನೂತನ ನಿಯಮ ಈ ಆಯಾಮದಲ್ಲಿ ಬಹಳಷ್ಟು ಬದಲಾವಣೆ ತರಲಿದೆ.
ಈ ನಿಯಮ ಎಲ್ಲೆಲ್ಲ ಅನ್ವಯಿಸುತ್ತದೆ ಎಂದರೆ: ತಾಯಿಗೆ ಅಮೆರಿಕಾದಲ್ಲಿ ಕಾನೂನು ಬದ್ಧತೆ ಇಲ್ಲದೆ, ತಂದೆ ಅಮೆರಿಕಾದ ಪೌರನಾಗಲಿ, ಅಥವಾ ಶಾಶ್ವತ ನಿವಾಸಿಯಾಗಲಿ ಅಲ್ಲದಿದ್ದಾಗ.
ತಾಯಿ ವಿದ್ಯಾರ್ಥಿ, ಉದ್ಯೋಗ ಅಥವಾ ಪ್ರವಾಸಿಯಂತಹ ತಾತ್ಕಾಲಿಕ ವೀಸಾ ಹೊಂದಿ ಅಮೆರಿಕಾಗೆ ಬಂದಿರುವಾಗ ಮತ್ತು ತಂದೆ ಪೌರತ್ವ ಹೊಂದಲು ಅಥವಾ ಶಾಶ್ವತ ನಿವಾಸಿಯಾಗಲು ಬೇಕಾದ ಅವಶ್ಯಕತೆಗಳನ್ನು ಪೂರ್ಣಗೊಳಿಸಿಲ್ಲದಾಗ.
ಗಮನಾರ್ಹ ಅಂಶವೆಂದರೆ, ಎಕ್ಸಿಕ್ಯುಟಿವ್ ಆದೇಶಗಳನ್ನು ಪೂರ್ವಾನ್ವಯಗೊಳಿಸಿ ಜಾರಿಗೆ ತರಲು ಸಾಧ್ಯವಾಗುವುದಿಲ್ಲ. ಈಗಾಗಲೇ ಜನ್ಮಸಿದ್ಧ ಪೌರತ್ವ ಪಡೆದಿರುವವರು ಅಥವಾ ಕಾನೂನಿನಡಿ ಅಮೆರಿಕಾದ ಪ್ರಜೆಗಳಾಗಿರುವವರಿಗೆ ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆದರೆ, ಈ ನಿಯಮ ಘೋಷಣೆಯಾದ ಮುಂದಿನ ೩೦ ದಿನಗಳ ಬಳಿಕ ಜಾರಿಯಾಗಲಿದ್ದು, ಈಗಾಗಲೇ ಪ್ರಗತಿಯಲ್ಲಿರುವ ಪ್ರಕರಣಗಳನ್ನು ಇದು ಹೊರತುಪಡಿಸಿರಲಿದೆ.
ಐತಿಹಾಸಿಕ ಆಯಾಮ ಮತ್ತು ಪ್ರತಿಕ್ರಿಯೆಗಳು
ಕಳೆದ ೧೫೦ ವರ್ಷಗಳ ಇತಿಹಾಸದಲ್ಲಿ, ಅಮೆರಿಕಾ ತನ್ನ ನೆಲದಲ್ಲಿ ಜನಿಸಿದ ಎಲ್ಲರಿಗೂ ಪೌರತ್ವ ಒದಗಿಸಿದೆ. ಈ ನೀತಿ ಅಮೆರಿಕಾದ ಹೆಗ್ಗುರುತಾಗಿದೆ. ಆದರೆ, ಟ್ರಂಪ್ ಆಡಳಿತದ ನೂತನ ನೀತಿ ಈಗ ಅಮೆರಿಕಾದಾದ್ಯಂತ ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ. ಅಮೆರಿಕನ್ ಸಿವಲ್ ಲಿಬರ್ಟೀಸ್ ಯೂನಿಯನ್ (ಎಸಿಎಲ್‌ಯು) ನಂತಹ ಸಂಘಟನೆಗಳು ಈಗಾಗಲೇ ಪ್ರಕರಣಗಳನ್ನು ದಾಖಲಿಸಿದ್ದು, ಎಕ್ಸಿಕ್ಯುಟಿವ್ ಆದೇಶ ಈಗಾಗಲೇ ಜಾರಿಯಲ್ಲಿರುವ ಕಾನೂನುಗಳಿಗೆ ವಿರುದ್ಧವಿದ್ದು, ಮೂಲಭೂತವಾಗಿ ಅನ್ಯಾಯದ ನಡೆಯಾಗಿದೆ ಎಂದು ವಾದಿಸಿವೆ.
ಟ್ರಂಪ್ ಅವರ ಚುನಾವಣಾ ಪ್ರಚಾರವೂ ಸಹ ದಾಖಲೆ ರಹಿತ ವಲಸಿಗರ ಮಕ್ಕಳಿಗೆ ಜನ್ಮಸಿದ್ಧ ಪೌರತ್ವ ನೀಡುವುದನ್ನು ಕೊನೆಗೊಳಿಸುವತ್ತ ಗಮನ ಹರಿಸಿತ್ತು. ಆದರೆ ಟ್ರಂಪ್‌ರ ಹೊಸ ನೀತಿ ಎಚ್-೧ಬಿ ಉದ್ಯೋಗ ವೀಸಾ ಹೊಂದಿರುವವರು, ಅವರ ಕುಟುಂಬಸ್ತರು ಸೇರಿದಂತೆ, ತಾತ್ಕಾಲಿಕ ವೀಸಾಗಳಡಿ ಕಾನೂನು ಬದ್ಧವಾಗಿರುವ ವಲಸಿಗರನ್ನೂ ಗುರಿಯಾಗಿಸಿದೆ.
ನೂತನ ನಿಯಮಗಳಡಿ ಅರ್ಹತೆ
ಹೊಸ ಎಕ್ಸಿಕ್ಯುಟಿವ್ ಆದೇಶದ ಅನುಸಾರ, ಅಮೆರಿಕಾದಲ್ಲಿ ಜನಿಸಿದ ಮಗುವಿನ ಹೆತ್ತವರಲ್ಲಿ ಕನಿಷ್ಠ ಒಬ್ಬರು ಕೆಳಕಂಡ ಮಾನದಂಡಗಳನ್ನು ಹೊಂದಿದ್ದರೆ ಮಾತ್ರವೇ ಅದಕ್ಕೆ ಜನ್ಮಸಿದ್ಧ ಪೌರತ್ವ ನೀಡಲಾಗುತ್ತದೆ. ಅವೆಂದರೆ:
ತಂದೆ ಅಥವಾ ತಾಯಿ ಅಮೆರಿಕಾದ ಪ್ರಜೆಯಾಗಿರಬೇಕು
ಗ್ರೀನ್ ಕಾರ್ಡ್ (ಶಾಶ್ವತ ನಿವಾಸ) ಹೊಂದಿರಬೇಕು
ಅಮೆರಿಕನ್ ಸೇನೆಯಲ್ಲಿ ಸೇವೆ ಸಲ್ಲಿಸಿರಬೇಕು
ಹೆಚ್ಚುವರಿ ನಿಬಂಧನೆಗಳು ಪೋಷಕರ ಕಾನೂನು ಸ್ಥಾನಮಾನ ಮತ್ತು ಅಮೆರಿಕಾದಲ್ಲಿ ಅವರ ವಾಸದ ಅವಧಿಯನ್ನು ಅನುಸರಿಸಿರುತ್ತವೆ.
ಭಾರತೀಯ ಕುಟುಂಬಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ?
ನೂತನ ಪೌರತ್ವ ಕಾನೂನು ಭಾರತೀಯ ಕುಟುಂಬಗಳಿಗೆ, ಅದರಲ್ಲೂ ತಾತ್ಕಾಲಿಕ ವೀಸಾದಡಿ ಅಮೆರಿಕಾದಲ್ಲಿ ನೆಲೆಸಿರುವವರಿಗೆ ಗಂಭೀರ ಪರಿಣಾಮ ಬೀರಲಿದೆ. ಎಚ್-೧ಬಿ ಅಥವಾ ಎಚ್-೪ನಂತಹ ವೀಸಾಗಳನ್ನು ಹೊಂದಿರುವ ಭಾರತೀಯ ಪೋಷಕರಿಗೆ ಅಮೆರಿಕಾದಲ್ಲಿ ಫೆಬ್ರವರಿ ೧೯, ೨೦೨೫ರ ನಂತರ ಜನಿಸುವ ಮಕ್ಕಳಿಗೆ ಸ್ವಯಂಚಾಲಿತವಾಗಿ ಪೌರತ್ವ ಲಭಿಸುವುದಿಲ್ಲ.
ಪ್ರಮುಖ ವೀಸಾ ವಿಭಾಗಗಳು ಮತ್ತು ಅವುಗಳ ವಿವರ
ಎಚ್-೧ಬಿ ವೀಸಾ: ಅಮೆರಿಕಾದಲ್ಲಿ ಉದ್ಯೋಗ ನಡೆಸಲು ಕೌಶಲಯುತ ಉದ್ಯೋಗಿಗಳಿಗೆ ನೀಡುವ ವೀಸಾ
ಎಚ್-೪ ವೀಸಾ: ಎಚ್-೧ಬಿ ವೀಸಾ ಹೊಂದಿರುವವರ ಪತಿ/ಪತ್ನಿ ಮತ್ತು ಮಕ್ಕಳಿಗೆ ಅಮೆರಿಕಾದಲ್ಲಿ ವಾಸಿಸಲು ನೀಡುವ ವೀಸಾ
ಎಫ್-೧ ವೀಸಾ: ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ನೀಡುವ ವೀಸಾ
ಎಫ್-೨ ವೀಸಾ: ಎಫ್-೧ ವೀಸಾ ಹೊಂದಿರುವ ವಿದ್ಯಾರ್ಥಿಗಳ ಅವಲಂಬಿತರಿಗೆ ನೀಡುವ ವೀಸಾ
ಎಂ-೧ ವೀಸಾ: ವೃತ್ತಿಪರ ಅಥವಾ ಶೈಕ್ಷಣಿಕವಲ್ಲದ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ನೀಡುವ ವೀಸಾ
ಬಿ-೨ ವೀಸಾ: ಪ್ರವಾಸದಂತಹ ಸಣ್ಣ ಅವಧಿಯ ಅಮೆರಿಕಾ ಭೇಟಿಗೆ ನೀಡುವ ವೀಸಾ
ಎಲ್ ವೀಸಾ: ಅಮೆರಿಕಾದ ಕಚೇರಿಗೆ ವರ್ಗಾವಣೆ ಹೊಂದುತ್ತಿರುವ ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಿಗಳಿಗೆ ನೀಡುವ ವೀಸಾ
ಎಲ್-೧ಎ: ಎಕ್ಸಿಕ್ಯುಟಿವ್‌ಗಳಿಗೆ ಅಥವಾ ಮ್ಯಾನೇಜರ್‌ಗಳಿಗೆ ನೀಡುವ ವೀಸಾ
ಎಲ್-೧ಬಿ: ವಿಶೇಷ ಜ್ಞಾನ ಹೊಂದಿರುವವರಿಗೆ ನೀಡುವ ವೀಸಾ
ಈ ವೀಸಾ ವಿಭಾಗಗಳು ಕುಶಲ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಮತ್ತು ಅವರ ಅವಲಂಬಿತರಿಗೆ ಅಮೆರಿಕಾದಲ್ಲಿ ವಾಸಿಸಲು, ಉದ್ಯೋಗ ನಡೆಸಲು, ಅಥವಾ ಅಧ್ಯಯನ ನಡೆಸಲು ಮುಖ್ಯವಾಗಿವೆ. ಇಂತಹ ಜನರಿಗೆ ಜನಿಸುವ ಮಕ್ಕಳಿಗೆ ಜನ್ಮಸಿದ್ಧ ಪೌರತ್ವ ನಿರಾಕರಣೆಯಾದರೆ, ಅವರು ಸುದೀರ್ಘ ಪೌರತ್ವ ಪ್ರಕ್ರಿಯೆ, ಅಥವಾ ಅವಲಂಬಿತರೆಂದು ಸಾಬೀತಾಗಲು ವಿಫಲವಾದರೆ ಅಮೆರಿಕಾದಿಂದ ತೆರಳಬೇಕಾದಂತಹ ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಗಬಹುದು.
ಗ್ರೀನ್ ಕಾರ್ಡ್ ಎದುರು ನೋಡುತ್ತಿರುವ ಕುಟುಂಬಗಳು
ನೂತನ ನೀತಿ ಭಾರತೀಯ ಕುಟುಂಬಗಳು ಎದುರಿಸುತ್ತಿರುವ ಸವಾಲುಗಳನ್ನು ಇನ್ನಷ್ಟು ಉಲ್ಬಣಗೊಳಿಸಬಲ್ಲದು. ಬಹಳಷ್ಟು ಜನರು ಈಗಾಗಲೇ ದಶಕಗಳಷ್ಟು ಸುದೀರ್ಘವಾದ, ಉದ್ಯೋಗಾಧಾರಿತ ಗ್ರೀನ್ ಕಾರ್ಡ್ ವಿಳಂಬಕ್ಕೆ ತುತ್ತಾಗಿದ್ದಾರೆ. ವರದಿಗಳ ಪ್ರಕಾರ, ಹತ್ತು ಲಕ್ಷಕ್ಕೂ ಹೆಚ್ಚು ಭಾರತೀಯರು ಈ ಗ್ರೀನ್ ಕಾರ್ಡ್‌ಗಳನ್ನು ಪಡೆಯಲು ಇನ್ನೂ ಕಾಯುತ್ತಿದ್ದಾರೆ.
ಅಮೆರಿಕಾದಲ್ಲಿ ಜನಿಸುವ ಮಕ್ಕಳಿಗೆ ಜನ್ಮಸಿದ್ಧ ಪೌರತ್ವ ಲಭಿಸುವುದು ಇಂತಹ ಕುಟುಂಬಗಳಿಗೆ ಒಂದಷ್ಟು ಸ್ಥಿರತೆಯನ್ನು ನೀಡುತ್ತಿತ್ತು. ಒಂದು ಬಾರಿ ಇಂತಹ ಮಕ್ಕಳಿಗೆ ೨೧ ವರ್ಗವಾದಾಗ, ಅವರು ತಮ್ಮ ಪೋಷಕರ ಪೌರತ್ವಕ್ಕೆ ಪ್ರಾಯೋಜಕರಾಗಬಹುದಿತ್ತು. ಆದರೆ ನೂತನ ನೀತಿ ಜಾರಿಗೆ ಬಂದರೆ, ಈ ಆಯ್ಕೆಯೂ ಲಭ್ಯವಿರುವುದಿಲ್ಲ.
ಹೆರಿಗೆ ಪ್ರವಾಸೋದ್ಯಮದ ಮೇಲೂ ಪರಿಣಾಮ
ಟ್ರಂಪ್‌ರ ಎಕ್ಸಿಕ್ಯುಟಿವ್ ಆದೇಶ ‘ಹೆರಿಗೆ ಪ್ರವಾಸೋದ್ಯಮ’ವನ್ನೂ (ಬರ್ತ್ ಟೂರಿಸಂ) ಗುರಿಯಾಗಿಸಿದೆ. ಇದರಡಿ, ವಿದೇಶೀ ಗರ್ಭಿಣಿ ಮಹಿಳೆಯರು ಅಮೆರಿಕಾಗೆ ಪ್ರವಾಸ ತೆರಳಿ, ಅಲ್ಲಿ ಮಗುವಿಗೆ ಜನ್ಮ ನೀಡಿ, ಅದಕ್ಕೆ ಅಮೆರಿಕಾ ಪೌರತ್ವ ಲಭಿಸುವಂತೆ ಮಾಡುತ್ತಾರೆ. ಇಂತಹ ಕೆಲಸ ಮಾಡುವವರಲ್ಲಿ ಭಾರತೀಯರು ಮತ್ತು ಮೆಕ್ಸಿಕನ್ನರು ಬಹುದೊಡ್ಡ ಸಂಖ್ಯೆಯಲ್ಲಿದ್ದಾರೆ. ಟ್ರಂಪ್ ನೀತಿ ಇಂತಹ ಲೋಪದೋಷಗಳನ್ನು ಸರಿಪಡಿಸಿ, ಜನ್ಮಸಿದ್ಧ ಪೌರತ್ವ ಸುಲಭವಾಗಿ ಲಭಿಸದಂತೆ ಮಾಡಲಿದೆ.
ಸುಪ್ರೀಂ ಕೋರ್ಟಿನ ಸಂಭಾವ್ಯ ನಿರ್ಧಾರ
ಎಕ್ಸಿಕ್ಯುಟಿವ್ ಆದೇಶಕ್ಕೆ ಈಗಾಗಲೇ ಹಲವಾರು ಸವಾಲುಗಳು ಎದುರಾಗಿವೆ. ವಲಸೆಯ ಬೆಂಬಲಿಗರು ಇಂತಹ ನೀತಿ ಮಕ್ಕಳಿಗೆ ಮತ್ತು ಕುಟುಂಬಗಳಿಗೆ ಜೀವನಪರ್ಯಂತ ಅನಿಶ್ಚಿತತೆ ಉಂಟುಮಾಡಲಿದೆ ಎಂದು ವಾದಿಸಿದ್ದು, ತಮಗೆ ತಿಳಿದಿರುವ ಒಂದೇ ದೇಶವಾದ ಅಮೆರಿಕಾದಿಂದ ಹೊರದೂಡುವ ಭೀತಿಗೆ ಸಿಲುಕಲಿದ್ದಾರೆ ಎಂದಿದ್ದಾರೆ.
ಅಮೆರಿಕನ್ ಸಮಾಜದ ಪ್ರಜೆ ಯಾರಾಗಬೇಕು ಎನ್ನುವುದನ್ನು ಸಂವಿಧಾನ ಮತ್ತು ಕಾಂಗ್ರೆಸ್ ನಿರ್ಧರಿಸಬೇಕೇ ಹೊರತು ಅಧ್ಯಕ್ಷರಲ್ಲ ಎಂದು ಅವರು ವಾದಿಸಿದ್ದಾರೆ. ಆದರೆ, ಟ್ರಂಪ್ ಆಡಳಿತ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ಗೆ ಕಳುಹಿಸಿ, ಅಲ್ಲಿನ ಸಂಪ್ರದಾಯವಾದಿ ಬಹುಮತ ಜನ್ಮಸಿದ್ಧ ಪೌರತ್ವದ ಕುರಿತ ಹೊಸ ನಿಯಮವನ್ನು ಒಪ್ಪಬಹುದು ಎಂದು ನಿರೀಕ್ಷಿಸಲಿದೆ.
ವಲಸಿಗರ ಮೇಲಿನ ಪರಿಣಾಮ
ನೂತನ ನೀತಿ ಲಕ್ಷಾಂತರ ಮಕ್ಕಳು ಮತ್ತು ಅವರ ಕುಟುಂಬಗಳ ಜೀವನದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಜನ್ಮಸಿದ್ಧ ಪೌರತ್ವ ವಲಸಿಗ ಸಮುದಾಯಗಳಿಗೆ ಒಳಗೊಳ್ಳುವಿಕೆ, ಸ್ಥಿರತೆ ಮತ್ತು ಅವಕಾಶಗಳಿಗೆ ಒಂದು ಸೂಕ್ತ ಆಯ್ಕೆಯಾಗಿತ್ತು. ಅದಿಲ್ಲದೆ, ಮಕ್ಕಳ ಭವಿಷ್ಯ ಅನಿಶ್ಚಿತವಾಗಿ, ಅವಕಾಶಗಳು ಸೀಮಿತವಾಗಿ, ಅಮೆರಿಕಾದಲ್ಲಿ ಅಭಿವೃದ್ಧಿ ಹೊಂದಲು ಕಾನೂನು ಅಡೆತಡೆಗಳು ಎದುರಾಗಬಹುದು.
ಈ ಮೂಲಭೂತ ಹಕ್ಕನ್ನು ತೆಗೆದುಹಾಕುವುದರಿಂದ, ಹಲವು ತಲೆಮಾರುಗಳಿಂದ ಅಮೆರಿಕಾವನ್ನು ರೂಪಿಸಿದ್ದ ಸಮಾನತೆ ಮತ್ತು ಅವಕಾಶಗಳ ಮೌಲ್ಯಗಳನ್ನೇ ಇಲ್ಲವಾಗಿಸಿದಂತಾಗಲಿದೆ. ಭಾರತೀಯ ಮತ್ತು ಇತರ ಸಮುದಾಯಗಳಿಗೆ ಇದರ ದೀರ್ಘಾವಧಿಯ ಪರಿಣಾಮ ಗಂಭೀರವಾಗಿರಲಿದ್ದು, ಅಮೆರಿಕಾದಲ್ಲಿ ಅವರ ಜೀವನ ಮತ್ತು ವಲಸೆ ಪ್ರಕ್ರಿಯೆಯನ್ನೇ ಬದಲಾಯಿಸಲಿದೆ.