ಚಾಲಕನಿಲ್ಲದೇ ೮೦ ಕಿ.ಮೀ ದೂರ ಓಡಿದ ರೈಲು !

0
14

ನವದೆಹಲಿ: ಜಮ್ಮು-ಕಾಶ್ಮೀರದ ಕಥುವಾ ನಿಲ್ದಾಣದಲ್ಲಿ ನಿಂತಿದ್ದ ಸರಕುಸಾಗಾಟದ ರೈಲು ಚಾಲಕನಿಲ್ಲದೆ ಹಠಾತ್ ಆಗಿ ಸುಮಾರು ೮೦ ಕಿ.ಮೀ ದೂರದವರೆಗೆ ಚಲಿಸಿದೆ. ಪಂಜಾಬಿನ ಮುಕೇರಿಯನ್ ಜಿಲ್ಲೆಯಲ್ಲಿ ರೈಲುಗಳ ಚಾಲಕರು ಮತ್ತು ಸಿಬ್ಬಂದಿಯ ನೆರವಿನಿಂದ ಅದನ್ನು ಕೊನೆಗೂ ನಿಲ್ಲಿಸಲಾಯಿತು.
ರೇಲ್ವೆ ಕಾಮಗಾರಿಗಳಿಗಾಗಿ ಕಾಂಕ್ರೀಟ್ ಮತ್ತಿತರ ಸಾಮಗ್ರಿಗಳನ್ನು ಹೊತ್ತಿದ್ದ ೫೦ ಬೋಗಿಗಳಿದ್ದ ಈ ರೈಲು ಭಾನುವಾರ ಮುಂಜಾನೆ ೭ ಗಂಟೆ ಸಮಯದಲ್ಲಿ ಪಠಾಣ್‌ಕೋಟ್‌ನ ಇಳಿಜಾರು ಪ್ರದೇಶದಲ್ಲಿ ಚಲಿಸಿದೆ.
ವಿರುದ್ಧ ದಿಕ್ಕಿನಿಂದ ಯಾವುದೇ ರೈಲು ಬಾರದಿರುವುದರಿಂದ ದುರಂತ ತಪ್ಪಿದೆ. ಘಟನೆಯಲ್ಲಿ ಹಾನಿ ಸಂಭವಿಸಿದರೂ ಪ್ರಕರಣ ಕುರಿತು ರೇಲ್ವೆ ಇಲಾಖೆ ತನಿಖೆಗೆ ಆದೇಶಿಸಿದೆ.
ನಡೆದಿದ್ದೇನು?: ಕಥುವಾ ನಿಲ್ದಾಣದಲ್ಲಿ ಚಾಲಕ ಸಿಬ್ಬಂದಿಯ ಬದಲಾವಣೆಗಾಗಿ ಚಾಲಕ ಮತ್ತು ಸಹಚಾಲಕರು ಇಂಜಿನ್ ಚಾಲನೆಯಲ್ಲಿಟ್ಟು ಅದರಿಂದ ಇಳಿದಿದ್ದರು. ಆದರೆ ರೈಲಿನಿಂದ ಇಳಿಯುವ ಮೊದಲು ಚಾಲಕ ಹ್ಯಾಂಡ್ ಬ್ರೇಕ್‌ನ್ನು ಹಿಂದಕ್ಕೆ ಎಳೆದಿಲ್ಲ. ಇದಲ್ಲದೆ, ಅದುವರೆಗೆ ಕಾರ್ಯನಿರ್ವಹಿಸಿದ ಚಾಲಕ ವರ್ಗ ಇಳಿದ ನಂತರ ಚಾಲನೆ ಮುಂದುವರಿಸುವ ಸಿಬ್ಬಂದಿ ರೈಲು ಹತ್ತದಿರುವ ಕಾರಣ ಚಾಲನೆಯ ಕ್ಯಾಬಿನ್‌ನಲ್ಲಿ ಸಿಬ್ಬಂದಿ ವರ್ಗ ಇರಲಿಲ್ಲ ಎಂದೂ ಮೂಲಗಳು ವಿವರಿಸಿವೆ.
ರೈಲು ಇಳಿಜಾರಿನಲ್ಲಿ ಚಲಿಸುವಾಗ ಅದನ್ನು ನಿಲ್ಲಿಸಲು ಅಧಿಕಾರಿಗಳು ಹಲವಾರು ಬಾರಿ ಪ್ರಯತ್ನಿಸಿದರೂ ಸಫಲವಾಗಿರಲಿಲ್ಲ. ಕೊನೆಗೆ ಪ್ರಯಾಣಿಕರ ರೈಲುಗಳ ಚಾಲಕ ಹಾಗೂ ಸಿಬ್ಬಂದಿ ವರ್ಗ ಪಂಜಾಬಿನ ದಸುವಾ ಬಳಿಯಿರುವ ಉಂಚಿ ಬಸ್ಸಿ ಎಂಬಲ್ಲಿ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು.

Previous articleಯುವಕರಿಗೆ ಬಿಜೆಪಿ ಏನು ಮಾಡಿದೆ?
Next article೬ನೇ ಶತಮಾನದ ರಾಮನ ವಿಗ್ರಹ ಪತ್ತೆ