ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಆರ್‌ಎಸ್‌ಎಸ್ ಸಂಸ್ಥೆ ಮೇಲೆ ಮಾಡಿರುವ ಆರೋಪದ ಬಗ್ಗೆ ತನಿಖೆ ನಡೆಯಬೇಕು. ಕಾನೂನು ಮೀರಿ ವರ್ತಿಸಿದವರಿಗೆ ಶಿಕ್ಷೆ ಆಗಬೇಕು. ಘಟನೆ ನಡೆದಿಲ್ಲ ಎಂದರೆ ಆರೋಪ ಮಾಡಿದವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು.
ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಆರ್‌ಎಸ್‌ಎಸ್ ಸಂಸ್ಥೆಯ ಮೇಲೆ ಮಾಡಿರುವ ಆರೋಪದ ಸತ್ಯಾಸತ್ಯತೆ ಕುರಿತು ತನಿಖೆ ನಡೆಯಬೇಕು. ನಾವು ಅಸ್ಪೃಶ್ಯತೆಯನ್ನು ಕಾನೂನುಬದ್ಧವಾಗಿ ನಿಷೇಧಿಸಿದ್ದೇವೆ. ಒಂದು ವೇಳೆ ಇನ್ನೂ ಜೀವಂತವಾಗಿದ್ದರೆ ಅದಕ್ಕೆ ಶಿಕ್ಷೆ ವಿಧಿಸಬೇಕು. ಮುಖ್ಯಮಂತ್ರಿ ಗೂಳಿಹಟ್ಟಿ ಶೇಖರ್ ಪರವಾಗಿ ಹೇಳಿಕೆ ನೀಡಿರುವುದರಿಂದ ಸಾರ್ವಜನಿಕರಿಗೆ ಅನುಮಾನ ಬರುವುದು ಸಹಜ. ಆದರೆ ಗೂಳಿಹಟ್ಟಿಯವರು ೧೦ ತಿಂಗಳ ನಂತರ ಏಕೆ ಇದನ್ನು ಪ್ರಸ್ತಾಪಿಸಿದ್ದಾರೆ. ಅವರೊಂದಿಗೆ ಇಬ್ಬರು ಇದ್ದರು. ಅವರು ಮಾತ್ರ ಒಳಗೆ ಹೋದರು ಎಂದು ಹೇಳಲಾಗಿದೆ. ಅವರ ಹೇಳಿಕೆಯನ್ನೂ ಪಡೆಯುವುದು ಅಗತ್ಯ. ಅದೇ ರೀತಿ ಆರ್‌ಎಸ್‌ಎಸ್ ಪದಾಧಿಕಾರಿಗಳು ನಿರಾಕರಿಸಿದ್ದರೂ ತನಿಖೆ ಮೂಲಕ ಸ್ಪಷ್ಟಗೊಳ್ಳಬೇಕು.
ಆರ್‌ಎಸ್‌ಎಸ್ ಹಳೆಯ ಸಂಸ್ಥೆ. ಅದು ಭಾರತೀಯ ಪರಂಪರೆಯನ್ನು ಎತ್ತಿ ಹಿಡಿಯುತ್ತ ಬಂದಿರುವುದರಿಂದ ಅಸ್ಪೃಶ್ಯತೆಯನ್ನೂ ತಾತ್ವಿಕವಾಗಿ ವಿರೋಧಿಸುತ್ತ ಬಂದಿದೆ. ಒಂದು ವೇಳೆ ಅಲ್ಲಿ ಅಂತರಂಗದಲ್ಲಿ ಇದು ಜಾರಿಯಲ್ಲಿದ್ದರೂ ಅದು ತಪ್ಪು. ಇದನ್ನು ಸಮಗ್ರ ತನಿಖೆಗೆ ಒಳಪಡಿಸಿ ಜನರಲ್ಲಿ ಮೂಡಿರುವ ಅನುಮಾನಗಳನ್ನು ನಿವಾರಿಸಬೇಕು. .ರಾಜಕಾರಣಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಹೇಳಿಕೆ ನೀಡುತ್ತಾರೆ. ಇತ್ತೀಚೆಗೆ ರಾಜಕಾರಣಿಗಳು ಪ್ರಚಾರದ ಉದ್ದೇಶದಿಂದ ಹೇಳಿಕೆ ನೀಡುವುದು ಪರಿಪಾಠವಾಗಿ ಹೋಗಿದೆ. ಇವುಗಳಿಗೆ ಕಡಿವಾಣ ಹಾಕಬೇಕು ಎಂದರೆ ತನಿಖೆ ನಡೆಸಬೇಕು. ಆರ್‌ಎಸ್‌ಎಸ್ ಸಂಘಟನೆಯವರೂ ಸ್ವಯಂ ಪ್ರೇರಣೆಯಿಂದ ತನಿಖೆ ಎದುರಿಸಲು ಮುಂದಾಗಬೇಕು. ಆ ಸಂಸ್ಥೆಯಲ್ಲಿ ರಾಜಕೀಯಕ್ಕೆ ಸೇರದವರು ಸಮಾಜ ಸೇವೆಯನ್ನೇ ಜೀವನದ ಪ್ರಮುಖ ಗುರಿಯನ್ನಾಗಿ ಮಾಡಿಕೊಂಡು ಯಾವುದೇ ಕೀರ್ತಿಯನ್ನೂ ಬಯಸದೇ ದುಡಿಯುವ ಸಾವಿರಾರು ಸಾಮಾನ್ಯ ಕಾರ್ಯಕರ್ತರಿದ್ದಾರೆ. ಅವರ ಮನಸ್ಸಿಗೆ ಬೇಸರ ತರುವುದು ಸರಿಯಲ್ಲ. ಯಾವುದೇ ಸಾರ್ವಜನಿಕ ಸೇವೆ ಸಂಸ್ಥೆಗೆ ಹಣೆಪಟ್ಟಿ ಹಚ್ಚುವ ಪ್ರವೃತ್ತಿ ನಿಲ್ಲಬೇಕು. ಜಾತಿ, ಧರ್ಮದ ಲೇಪ ಇಲ್ಲದೆ ಸಮಾಜಕ್ಕಾಗಿ ದುಡಿಯುವ ನೂರಾರು ಕಾರ್ಯಕರ್ತರು ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಎಲ್ಲೇ ಭೂಕಂಪ, ಪ್ರವಾಹ, ಕೊರೋನಾ ಸೋಂಕು ಬರಲಿ ಅಲ್ಲಿ ಮೊದಲು ಕಾಣಿಸುವವರು ಈ ಸಂಸ್ಥೆಯ ಕಾರ್ಯಕರ್ತರು. ಅವರು ತಮ್ಮ ಹೆಸರು ಹೇಳಿಕೊಳ್ಳದೆ ಕೆಲಸ ಮಾಡುವವರು. ಇಲ್ಲಿ ತರಬೇತಿ ಪಡೆದವರು ಮುಂದಿನ ದಿನಗಳಲ್ಲಿ ರಾಜಕಾರಣಕ್ಕೆ ಕಾಲಿಟ್ಟಾಗ ಬೇರೆ ಬೇರೆಪಕ್ಷಗಳಿಗೆ ಹೋಗುತ್ತಾರೆ. ಆಗ ಅವರಿಗೆ ಸಂಘಟನೆ ವಿರೋಧ ವ್ಯಕ್ತಪಡಿಸಿಲ್ಲ. ಇತ್ತೀಚೆಗೆ ಈ ಸಂಸ್ಥೆಯ ಮೇಲೆ ಗೂಬೆ ಕೂರಿಸುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ. ಒಂದುವೇಳೆ ಸಂಸ್ಥೆ ತಪ್ಪು ಮಾಡಿದ್ದರೆ ಅದನ್ನು ಶಿಕ್ಷಿಸಲು ಕಾಯ್ದೆಯಲ್ಲೇ ಅವಕಾಶವಿದೆ. ಆದರೂ ಇವೆಲ್ಲ ಸ್ಪಷ್ಟಗೊಳ್ಳಬೇಕು ಎಂದರೆ ತನಿಖೆ ನಡೆಸಬೇಕು. ಪ್ರಜಾಪ್ರಭುತ್ವದಲ್ಲಿ ಸಮಾಜ ಸೇವೆ ಸಲ್ಲಿಸಲು ಯಾರು ಬೇಕಾದರೂ ಸಂಘ, ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳಬಹುದು. ಈ ರೀತಿ ರಚನೆಯಾದ ಸಂಸ್ಥೆಗಳು ಲಕ್ಷಾಂತರ ಇವೆ. ಕೆಲವು ನೋಂದಣಿಯಾಗಿವೆ. ಮತ್ತೆ ಕೆಲವು ನೋಂದಣಿಯಾಗಿಲ್ಲ. ಆದರೂ ಸಮಾಜ ಸೇವೆಗೆ ಯಾವ ಅಡ್ಡಿಯೂ ಇಲ್ಲ. ಇಂಥ ಸಂಸ್ಥೆಗಳು ಸರ್ಕಾರದ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾತ್ರವಹಿಸುತ್ತಿವೆ. ಇದು ತಪ್ಪೇನೂ ಅಲ್ಲ. ಯಾವುದೇ ಸಂಸ್ಥೆಯಾಗಲಿ ಕಾನೂನು ಮೀರಿ ಕೆಲಸ ಮಾಡಲು ಬರುವುದಿಲ್ಲ. ಈಗ ಕಾನೂನು ಉಲ್ಲಂಘನೆಯಾಗಿದ್ದಲ್ಲಿ ಅದನ್ನು ಪತ್ತೆಹಚ್ಚಲು ತನಿಖೆ ಅನಿವಾರ್ಯ. ತನಿಖೆಯಿಂದ ಸತ್ಯಾಂಶ ಹೊರಬರಬೇಕು. ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಇಂಥ ಘಟನೆಗಳು ಮರುಕಳಿಸಬಾರದು. ಸಾರ್ವಜನಿಕವಾಗಿ ಆರೋಪ ಮಾಡುವವರು ಎಚ್ಚರಿಕೆವಹಿಸುವುದು ಅಗತ್ಯ. ಎಲ್ಲವನ್ನೂ ಬಣ್ಣದ ಗಾಜಿನಲ್ಲಿ ನೋಡುವುದು ಸರಿಯಲ್ಲ. ಅದರಿಂದ ಸಮಾಜದ ನೆಮ್ಮದಿ ಕೆಡುತ್ತದೆ. ಸರ್ಕಾರದ ಕರ್ತವ್ಯ ಇರುವ ಹಾಗೆ ಸಮಾಜ ಸೇವೆ ಮಾಡುವ ಸಂಘಸಂಸ್ಥೆಗಳಿಗೂ ಹೊಣೆಗಾರಿಕೆ ಇರುತ್ತದೆ.


























