ರಾಜ್ಯದ ರೈತರ ಹಾಲಿನ ₹606.69 ಕೋಟಿಗೂ ಹೆಚ್ಚು ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡು ಇದಕ್ಕೆ ಹಣಕಾಸಿನ ಕೊರತೆಯೇ ನೇರ ಕಾರಣ
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರೈತರಿಗೆ ನೀಡಬೇಕಿರುವ ಕ್ಷೀರಧಾರೆಗೆ ಹಣವಿಲ್ಲ. ಇತ್ತ ಬಡವರಿಗೂ ಉಪಕಾರಿಯಾಗಲಿಲ್ಲ, ಹೈನುಗಾರಿಕೆ ಹಾಗೂ ಪಶುಸಂಗೋಪನೆ ಅವಲಂಬಿಸಿರುವ ರೈತರ ಬದುಕನ್ನೂ ಹಸನಾಗಿಸಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಇದುವರೆಗೂ ರಾಜ್ಯದ ರೈತರ ಹಾಲಿನ ₹606.69 ಕೋಟಿಗೂ ಹೆಚ್ಚು ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡು ಇದಕ್ಕೆ ಹಣಕಾಸಿನ ಕೊರತೆಯೇ ನೇರ ಕಾರಣ ಎಂದು ಸ್ವತಃ ಪಶುಸಂಗೋಪನಾ ಸಚಿವರೇ ಸದನದಲ್ಲಿ ತಿಳಿಸಿರುವುದು ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬೊಕ್ಕಸ ಬರಿದಾಗಿಸಿಕೊಂಡು ದಿವಾಳಿ ಅಂಚಿಗೆ ತಲುಪಿರುವುದನ್ನು ಸಾಕ್ಷೀಕರಿಸುತ್ತಿದೆ.
ಓಲೈಕೆ ರಾಜಕಾರಣಕ್ಕಾಗಿ ಶೋಷಿತರು ಹಾಗೂ ಹಿಂದುಳಿದವರಿಗೆ ಮೀಸಲಿಟ್ಟ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಂಡಿದ್ದ ಈ ಸರ್ಕಾರದಲ್ಲಿ, ರೈತರ ಪ್ರೋತ್ಸಾಹ ಧನ ಮತ್ಯಾವ ಓಲೈಕೆಗೆ ಬಳಕೆಯಾಗಿದೆಯೋ ತಿಳಿಯದು. ಅಭಿವೃದ್ಧಿ ಶೂನ್ಯ ಆಡಳಿತದ ಮೂಲಕ ರೈತರ ಶ್ರೇಯೋಭಿವೃದ್ಧಿಯೆಡೆಗೆ ಒಂದೇ ಒಂದು ಹೆಜ್ಜೆ ಇಡದ ಜನವಿರೋಧಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದೆ. ಈ ಕೂಡಲೇ ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದಾರೆ.






















