ಕುಂಭ ಮೇಳದಲ್ಲಿ ರಾಜಕೀಯ: ಶಿರಸಿಯ ತಾಯಿ ನೋಡಿ ಬುದ್ದಿ ಬೆಳೆಸಿಕೊಳ್ಳಲಿ

0
27

ಧಾರ್ಮಿಕ ಆಚರಣೆಗೆ, ಸಂಸ್ಕೃತಿಗೆ ಇರುವ ಶಕ್ತಿಯನ್ನು ಈ ತಾಯಿ ಅನಾವರಣ ಮಾಡಿದ್ದಾರೆ.

ಬೆಂಗಳೂರು: ಕುಂಭ ಮೇಳದ ಬಗ್ಗೆ ಇಲ್ಲ ಸಲ್ಲದ ಮಾತು, ರಾಜಕೀಯ ಮಾಡುವವರು, ಅವಹೇಳನ, ತಿರಸ್ಕಾರ ಮಾಡುವವರು ಶಿರಸಿಯ ಈ ತಾಯಿಯನ್ನು ನೋಡಿ ಸ್ವಲ್ಪ ಬುದ್ದಿ ಬೆಳೆಸಿಕೊಳ್ಳಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸಂಯುಕ್ತ ಕರ್ನಾಟಕದಲ್ಲಿ ಬಂದ ಕುಂಭಮೇಳದ ನೆನಪಿಗೆ 4ನೇ ಬಾವಿ ತೋಡಿದ ಗೌರಿ ಎಂವ ವರದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪೋಸ್ಟ್‌ ಮಾಡಿ ಧಾರ್ಮಿಕ ಆಚರಣೆಗೆ, ಸಂಸ್ಕೃತಿಗೆ ಇರುವ ಶಕ್ತಿಯನ್ನು ಈ ತಾಯಿ ಅನಾವರಣ ಮಾಡಿದ್ದಾರೆ.
ಆಡಳಿತಾತ್ಮಕ ತೊಡಕಿನ ನಡುವೆಯೂ ಬಾವಿ ತೋಡಿದಲ್ಲದೆ ಅದನ್ನು ಕುಂಭ ಮೇಳದ ನೆನಪಿಗಾಗಿ ತೋಡಿದ್ದೀನಿ ಎಂದು ಹೇಳಿರುವ ಗೌರಮ್ಮನವರ ಸಾಹಸ ಅಭಿನಂದನೀಯ ಎಂದಿದ್ದಾರೆ.

ಕುಂಭಮೇಳದ ನೆನಪಿಗೆ 4ನೇ ಬಾವಿ ತೋಡಿದ ಗೌರಿ: ಶಿರಸಿಯ ಗೌರಿ ಕರೆದಲ್ಲಿಗೆ ಗಂಗೆ ಉದ್ಭವವಾಗಿ ಬರುತ್ತಿದ್ದಾಳೆ. ಶಿರಸಿ ಗಣೇಶ ನಗರದ ಸಾಹಸಿ ಮಹಿಳೆ ಗೌರಿ ನಾಯ್ಕ, ಈಗ ಒಬ್ಬಂಟಿಯಾಗಿ ಮತ್ತೊಂದು ಬಾವಿ ತೋಡಿ ಗಂಗೆಯನ್ನು ಬರಮಾಡಿಕೊಂಡಿದ್ದಾಳೆ. ಮಹಾಕುಂಭಮೇಳದ ಪವಿತ್ರ ಗಂಗೆಯೆಂದು ಭಾವಿಸಿ ಫೆ. 26ರಂದು ಇದೇ ಬಾವಿಯ ನೀರಿನಲ್ಲಿ ಪುಣ್ಯಸ್ನಾನ ಮಾಡುವುದಾಗಿ ಗೌರಿ ಹೆಮ್ಮೆಯಿಂದ ಹೇಳುತ್ತಾರೆ.

ಸಾಹಸ ಹೇಗೆ?: ಮೂರು ತಿಂಗಳ ಹಿಂದಿನ ಮಾತು. ಮಹಾಕುಂಭ ಮೇಳದ ಮಾಹಿತಿ ಪಡೆದ ಗೌರಿ ನಾಯ್ಕ, ಪ್ರಯಾಗರಾಜ್‌ಗೆ ತೆರಳಲು ತಮ್ಮಿಂದ ಅಸಾಧ್ಯ ಎಂದು ಅರಿತು ತಾವಿದ್ದಲ್ಲಿಯೇ ಗಂಗೆಯನ್ನು ತರುವ ಸಂಕಲ್ಪ ಮಾಡಿದರು. ತಮ್ಮದೇ ಮನೆಯ ಹಿತ್ತಲಿನಲ್ಲಿ ಡಿಸೆಂಬರ್ 15ರಿಂದ ಬಾವಿ ತೋಡುವ ಕಾರ್ಯ ಆರಂಭಿಸಿದರು. ಫೆ. 15ರಂದು 40 ಅಡಿ ತಲುಪಿದಾಗ ಬಾವಿಯಲ್ಲಿ ನೀರು ಕಾಣಿಸಿಕೊಂಡಿದೆ. ಬಾವಿಯನ್ನು ಪೂರ್ಣಗೊಳಿಸಿ ಪೂಜಿಸಿ, ಫೆ.26 ಮಹಾಶಿವರಾತ್ರಿಯ ದಿನ ಅದನ್ನೇ ಕುಂಭಮೇಳದ ಗಂಗೆ ಸ್ನಾನವೆಂದು ಮಾಡುವುದಾಗಿ ಹೇಳಿದ್ದಾರೆ. ಗೌರಿ ನಾಯ್ಕ ಏಕಾಂಗಿಯಾಗಿ ತೋಡಿದ 4ನೇ ಬಾವಿ ಇದಾಗಿದೆ.
ಯೋಚನೆಯಿಂದ ಸ್ವಯಂಪ್ರೇರಿತವಾಗಿ ಗಣೇಶನಗರದ ಅಂಗನವಾಡಿಯ ಬಳಿ ಬಾವಿ ತೋಡಲು ತೊಡಗಿದಾಗ ವಿವಾದವಾಗಿತ್ತು. ರಾಜಕೀಯ ಸ್ವಹಿತಾಸಕ್ತಿಯ ಕಾಣದ ಕೈಗಳ ಆಟದಿಂದಾಗಿ ಹಲವಾರು ಆಡಳಿತಾತ್ಮಕ ತೊಡಕುಗಳ ಮಧ್ಯೆ ಸಿಲುಕಿ ಕೊನೆಗೂ ಛಲಬಿಡದೆ ಬಾವಿ ತೋಡಿ ಪೂರ್ಣಗೊಳಿಸಿ ಗಂಗೆಯನ್ನು ಸಾಕಾರಗೊಳಿಸಿದ್ದರು. ಆ ಬಾವಿಯು ಅಂಗನವಾಡಿ ಮಕ್ಕಳು ಹಾಗೂ ಆ ಭಾಗದ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಉಪಯುಕ್ತವಾಗಿದೆ. ಈಗ 60ರ ಇಳಿವಯಸ್ಸಿನಲ್ಲೂ ಮತ್ತೆ ಏಕಾಂಗಿಯಾಗಿ 60 ದಿನಗಳಲ್ಲಿ 40 ಅಡಿ ಆಳದ ಮತ್ತೊಂದು ಬಾವಿ ತೋಡಿ ಗಂಗೆ ಪಡೆದು ಸಂತಸದ ನಗೆ ಬೀರಿದ್ದಾರೆ.

Previous article‘ಮಹಾ ಕುಂಭಕ್ಕೆ’ ಕಪ್ಪು ಚುಕ್ಕೆ ತರಲು ಹವಣಿಸುತ್ತಿರುವ ವಿಚಾರವ್ಯಾಧಿಗಳು
Next articleಕಾಂಗ್ರೆಸ್ ಕೋಳಿ ಕೂಗಿದರೆ ಕರ್ನಾಟಕದಲ್ಲಿ ಬೆಳಕು…