ಹಳ್ಳಿಯ ಸರಪಂಚ ಸ್ಥಾನದಿಂದ ಅಂತಾರಾಷ್ಟ್ರೀಯ ಮಟ್ಟದ ಸಹಕಾರಿ ನಾಯಕರಾಗಿ ಪವಾಡಸದೃಶ ಸಾಧನೆ ಮೆರೆದ ಕೆ.ಎಚ್. ಪಾಟೀಲರು ಕನ್ನಡನಾಡು ಕಂಡ ದೂರದೃಷ್ಟಿಯುಳ್ಳ ಅಪರೂಪದ ಧೀಮಂತ, ಮುತ್ಸದ್ದಿ ನಾಯಕ. ಅವರಿಗೆ ಅವರೇ ಸರಿಸಾಟಿ, ಪರ್ಯಾಯವೇ ಇಲ್ಲ. ಅಪ್ರತಿಮ ಧೀಶಕ್ತಿ, ಕಾರ್ಯತತ್ಪರತೆ ಹಾಗೂ ದೂರದೃಷ್ಟಿಯುಳ್ಳ ನಾಯಕತ್ವದ ಗುಣಗಳಿಂದಾಗಿ ತಮ್ಮ ಜೀವಿತಕಾಲದಲ್ಲಿಯೇ ದಂತಕಥೆಯಾಗಿದ್ದ ಕೆ.ಎಚ್. ಪಾಟೀಲರ ಸಾಧನೆ ವರ್ಣನಾತೀತ. ಅವರು ಸೋಲರಿಯದ ಛಲಗಾರ. ಶೋಷಣೆರಹಿತ ಸಮಾಜ ಕಟ್ಟುವ ಹಂಬಲದ ಸುಂದರ ಕನಸುಗಾರ.
ಗದಗ ನಗರವನ್ನು ಕರ್ಮಭೂಮಿಯನ್ನಾಗಿಸಿಕೊಂಡಿದ್ದ ಕೆ.ಎಚ್. ಪಾಟೀಲರು ಬೆಳೆದಿದ್ದು ಹುಲಕೋಟಿಯಲ್ಲಿ. ಹುಲಕೋಟಿ ಹುಲಿ' ಎಂದೇ ಜನಮಾನಸದಲ್ಲಿ ಪ್ರಸಿದ್ಧರಾಗಿದ್ದ ಅವರ ವರ್ಣರಂಜಿತ ಬದುಕು ನಮ್ಮೆಲ್ಲರಿಗೂ ಪ್ರೇರಣೆ ನೀಡುವಂಥದ್ದು. ಸದಾಕಾಲ ಹಲವಾರು ಏಳುಬೀಳುಗಳ ಮಧ್ಯೆಯೇ ಹೋರಾಟ ನಡೆಸುತ್ತ, ಬಂದೊದಗಿದ ಸವಾಲುಗಳನ್ನು ಮೆಟ್ಟಿನಿಂತು ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿ, ನಾಯಕತ್ವ ಗುಣಗಳಿಗೆ ರಾಜ್ಯಮಟ್ಟದ ಮನ್ನಣೆ ಪಡೆದುಕೊಂಡಿದ್ದ ಪಾಟೀಲರ ಸಾರ್ವಜನಿಕ ಬದುಕಿನ ಯಶೋಗಾಥೆ ಬಹು ರೋಚಕ.
ಅವರ ಮಾರ್ಗದರ್ಶನದಿಂದ ಇಲ್ಲಿವರೆಗೂ ಬಂದಿದ್ದೇನೆ.....
ರಾಜಕಾರಣ ಜೀವನದುದ್ಧಕ್ಕೂ ದಾಷ್ಟ್ರ್ಯ ಮೆರೆದ ಅವರು ಅನೇಕರನ್ನು ಬೆಳೆಸಿದರು. ನನಗೂ ಅವರು ಮೊದಲಿನಿಂದಲೂ ನೀಡಿದ ಸ್ಥೈರ‍್ಯ ಶ್ಲಾಘನೀಯ. ವಿಧಾನ ಪರಿಷತ್ ಚುನಾವಣೆಗೆ ನಾನು ಮೊದಲ ಸಲ ಸ್ಪರ್ಧಿಸುವ ಸಂದರ್ಭದಲ್ಲಿ ೧೯೭೯ರಲ್ಲಿ ನಾನು ಅವರನ್ನು ಭೆಟ್ಟಿಯಾಗಲು ಗದಗ ಕಾಟನ್ ಸೇಲ್ ಸೊಸೈಟಿಗೆ ಹೋಗಿದ್ದೆ.
ರಿ ಕಾಕಾರ ನಾನ್ ಎಲೆಕ್ಷನ್‌ಗೆ ನಿಲ್ಲಬೇಕಂತ ಮಾಡಾಕತ್ತೇನ್ರಿ’ ಅಂತ ಅಂದೆ. ಯಾವ ಎಲೆಕ್ಷನ್ನೋ ಅಂದ್ರು. ಶಿಕ್ಷಕರ ಎಲೆಕ್ಷನ್ ಅಂದೆ. ನೋಡೋ ಸುಮ್ಮ ನೌಕ್ರಿ ಬಿಟ್ಟ ಎದಕ್ ಹೋಕ್ತಿ. ದೊಡ್ಡ ಕ್ಷೇತ್ರ ಬಳ್ಳಾರಿ, ಶಿವಮೊಗ್ಗ, ರಾಯಚೂರ ಎಲ್ಲಾ ಹೆಂಗ್ ಅಡ್ಯಾಡ್ತಿ' ಅಂದ್ರು. ನಿಮ್ಮ ಆಶೀರ್ವಾದ ಬೇಕ ಅಂದೆ.
ನೀ ಗೆಲ್ಲತೇನಿ ಅಂತ ನಿನಗ ನಂಬಿಕಿ ಇದ್ರ ಹೋಗು. ಇನ್ನೂ ಸಣ್ಣಾವದಿ ವಯಸ್ಸೂ ಸಣ್ಣದೈತಿ. ನೋಡು ವಿಚಾರ ಮಾಡು’ ಎಂದು ಹೇಳಿ ಅಜ್ಜಣ್ಣಾ ಅಂತ ಡಿ.ಆರ್. ಪಾಟೀಲರಿ ಕರೆದು ಹನುಮಂತಗೌಡ ನೀವೆಲ್ಲ ಅವನಿಗೆ ಸಹಾಯ ಮಾಡಿ ಅವಾ ಪಕ್ಷಾತೀತ ಅದಾನ ಅಂತ ಹೇಳಿದ್ರು.
ಚುನಾವಣೆ ಗೆದ್ದ ಬಳಿಕ ಅವರಿಗೆ ಭೇಟಿಯಾಗಲು ಹೋಗಿದ್ದೆ, ಆಗ “ಬಾಳ ಗಟ್ಟಿ ಹುಡುಗ ನೀನ ಅಡ್ಡಿಯಿಲ್ಲ ಹೋಗ ನೀ, ನನಗ ನಂಬಿಕೆನ ಇರಲಿಲ್ಲ. ಚಲೋತಂಗ ಮಾಡ ನೀನ, ಮತ್ ನಿ ಇನ್ ಶಾಸಕ ಸಭೆಯೊಳಗ ನಮ್ಮಕೂಡ ಇರತಿ ನೀ. ನಿನಗ ಏನರೇ ಬೇಕಂದ್ರ ಮಾರ್ಗದರ್ಶನ ಮಾಡೋಣ” ಅಂದಿದ್ರು. ಅವರ ಮಾರ್ಗದರ್ಶನದಿಂದ ನಾನು ಇಲ್ಲಿಯವರೆಗೂ ಬಂದಿದ್ದೇನೆ.
೧೯೮೧ರಲ್ಲಿ ಸದನದಲ್ಲಿ ನರಗುಂದ ಬಂಡಾಯದ ಗಲಾಟೆ ಬಗ್ಗೆ ಮಾತನಾಡಿದ್ದೆ. ಆ ಬಳಿಕ ಕೆ.ಎಚ್. ಪಾಟೀಲರು ನನ್ನ ಕರೆದು, “ಏ ದಡ್ಡ ಟೀಚರ್ಸ್ ಮಾತಾಡದಂಗ ಮಾತಾಡ್ತಿ, ರೈತರ ಹೋರಾಟ ಬ್ಯಾರೆ ಇರತೈತಿ ಈ ಥರಾ ಮಾತಾಡಬಾರದು. ರೈತರ ಬಗ್ಗೆ ನೀವೆಲ್ಲಾ ಕಾಳಜಿ ಇರಬೇಕು” ಅಂತ ಹೇಳಿದ್ರು. ದಿನ ಕಳೆದಂತೆ ಅವರೇ ನನಗೆ ಸುಧಾರಣೆ ಆಗಾಕತ್ತಿ ಚಲೋ ಆತ ತೊಗೊ ಅಂತೆಲ್ಲ ಹೇಳಿ ಖುಷಿ ಪಟ್ರು. ಮತ್ ಡಿ.ಆರ್. ಪಾಟೀಲರ ಮುಂದೆ ಏ ಅಜ್ಜಣ್ಣಾ ನೋಡೋ ನಾಲ್ಕ ವರ್ಷದಾಗ ಎಷ್ಟ ಸುಧಾರಣೆ ಆಗ್ಯಾನ ಅವಾ ಅಂತ ಖುಷಿಯಿಂದಲೇ ಹೇಳಿದರು.
ಗದಗ ಜಿಲ್ಲೆ ರೋಣದಲ್ಲಿ ಕಾರ್ಯಕ್ರಮವೊಂದಕ್ಕೆ ನಾನು ಕೆ.ಎಚ್. ಪಾಟೀಲರ ಜತೆಗೆ ಹೋದಾಗ. ಕಾರ್ಯಕ್ರಮದಲ್ಲಿ ಮಾತಾನಾಡಿ “ಶಿಕ್ಷಕರ ಪ್ರತಿನಿಧಿಯಾದಾವ ಹೆಂಗ ಇರಬೇಕು ಅನ್ನೋದನ್ನ ಇವನ್ನ ನೋಡಿ ಕಲಿಬೇಕು. ೨೪ ಗಂಟೆ ಕೆಲಸ ಮಾಡತಾನ ಶಿಕ್ಷಕರದ್ದು, ಹೋರಾಟ ಮಾಡತಾನ, ಶಿಕ್ಷಕರೆಲ್ಲರೂ ಇವ ಏನ್ ಹೇಳತಾನ ಅದನ್ನ ಕೇಳತಾರ, ಇವನ ಬೆನ್ನ ಹಿಂದ ಶಿಕ್ಷಕರು ಇರತಾರ, ಶಿಕ್ಷಕರ ಸಂಘಟನೆದಾಗ ಇಷ್ಟೊಂದು ಬಲಶಾಲಿ, ಗಟ್ಟಿಯಾದಂತವರೂ ಯಾರೂ ಇರಲಿಲ್ಲ. ಬಸವರಾಜ ಹೊರಟ್ಟಿ ಬಾಳ ಒಳ್ಳೆ ಕೆಲಸ ಮಾಡ್ಯಾನ ಎಲ್ಲರದೂ ಸಹಕಾರ ಇವನಿಗೆ ಇರಬೇಕು. ಮುಂದ ಚಲೋ ಲೀಡರ್ ಆಗತಾನ” ಎಂದು ಎಲ್ಲರ ಮುಂದೆ ನನ್ನ ಹೊಗಳಿದ್ದರು.
ಗದಗ ಸಹಕಾರಿ ಪರಿಸರ
ಸಮಾಜದ ಸರ್ವಾಂಗೀಣ ಏಳಿಗೆಗಾಗಿ ಹಾಗೂ ರೈತರ, ಕೂಲಿ ಕಾರ್ಮಿಕರ, ದೀನ ದಲಿತರ, ಶೋಷಣೆಗೆ ಒಳಗಾದ ಧ್ವನಿರಹಿತರ ಏಳಿಗೆಗಾಗಿ ತಾವು ಕಂಡ ಕನಸುಗಳನ್ನು ನನಸಾಗಿಸಲು ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲ ರಾಜ್ಯ ರಾಜಕಾರಣದಲ್ಲಿ ಕ್ರಿಯಾಶೀಲರಾಗಿ ಅವಿರತವಾಗಿ ಶ್ರಮಿಸಿದ ಶ್ರೇಷ್ಠ ಶಿಲ್ಪಿ ಕೆ.ಎಚ್. ಪಾಟೀಲರು ಗದಗ ಪರಿಸರವನ್ನು ಸಹಕಾರಿಮಯ ಮಾಡಿದರು. ಗದಗ-ಬೆಟಗೇರಿ ನಗರಸಭೆ, ಗದಗ ಕೋ-ಆಪರೇಟಿವ್ ಕಾಟನ್ ಸೇಲ್ ಸೊಸೈಟಿ, ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್, ರೈತ ಸೇವಾ ಸಹಕಾರಿ ಸಂಘ, ಹುಲಕೋಟಿ ಸಹಕಾರ ಶಿಕ್ಷಣ ಸಂಸ್ಥೆ ಹೀಗೆ ಹತ್ತು ಹಲವು ಸಂಘ ಸಂಸ್ಥೆಗಳ ಸ್ಥಾಪಕರಾಗಿ ಪಾಟೀಲರು ಸಮಾಜದ ಒಳಿತಿಗೆ ಶ್ರಮಿಸಿದ ಪರಿ ಅನನ್ಯವಾದುದು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ಮಧ್ಯವರ್ತಿಗಳ ಶೋಷಣೆಯಿಂದ ತಪ್ಪಿಸಿ ಎ.ಪಿ.ಎಂ.ಸಿ.ಗಳಿಗೆ ಕಾಯಕಲ್ಪ ನೀಡಿದ ಕೆ.ಎಚ್ ಪಾಟೀಲರು `ಸಹಕಾರ ರಂಗದ ಭೀಷ್ಮ’ ಎಂದೇ ಖ್ಯಾತರು.
ಪಾಟೀಲರು, ಕೇವಲ ರಾಜಕಾರಣಿಯಾಗಿರದೆ, ಉತ್ತಮ ವಾಗ್ಮಿಗಳಾಗಿ ಹಾಗೂ ಅತ್ಯುತ್ತಮ ಲೇಖಕರಾಗಿ, ಗ್ರಾಮೋದ್ಧಾರ ಹಾಗೂ ಸಹಕಾರ ಕುರಿತು ಅನೇಕ ಲೇಖನಗಳನ್ನು ಬರೆದು ಸಾರ್ವಜನಿಕರನ್ನು ರಚನಾತ್ಮಕ ಕೆಲಸಗಳಿಗೆ ಪ್ರೇರೇಪಿಸಿದ್ದಾರೆ.
ಕರ್ನಾಟಕ ನಾಮಕರಣದ ಸಿಹಿನೆನಪು
ಶ್ರೀ ಕೆ.ಜಿ. ಕುಂದಣಗಾರರ ಅಧ್ಯಕ್ಷತೆಯಲ್ಲಿ ಗದುಗಿನಲ್ಲಿ ನಡೆದ ೪೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದ ಕೆ.ಎಚ್. ಪಾಟೀಲರ ಸಮ್ಮುಖದಲ್ಲಿಯೇ ರಾಜ್ಯದ ಹೆಸರನ್ನು ಕರ್ನಾಟಕವೆಂದು ನಾಮಕರಣ ಮಾಡಬೇಕೆಂದು ಒತ್ತಾಯಿಸುವ ನಿರ್ಣಯ ಸ್ವೀಕರಿಸಲಾಯಿತು. ಮುಂದೆ ೧೯೭೩ರಲ್ಲಿ ದೇವರಾಜು ಅರಸು ಅವರ ಸಂಪುಟದಲ್ಲಿ ಸಚಿವರಾಗಿದ್ದ ಕೆ.ಎಚ್. ಪಾಟೀಲರೇ ವಿಧಾನ ಪರಿಷತ್ತಿನಲ್ಲಿ ಕರ್ನಾಟಕ ನಾಮಕರಣ ಮಸೂದೆ ಮಂಡಿಸಿದ್ದರು.
ಧೋತಿ, ಟೊಪ್ಪಿಯ ಧೀಮಂತಿಕೆ….
ಯಾವುದೇ ವಿಷಯದಲ್ಲೂ ಅವರು ಆಳ ಪರಿಣಿತಿ ಹೊಂದಿರುತ್ತಿದ್ದರು. ಒಂದು ದಿನವೂ ಕೂಡ ಸದನದಲ್ಲಿ ಅಧಿಕಾರಿಗಳು ಕೊಡುವ ಚೀಟಿಯನ್ನು ನೋಡಲೇ ಇಲ್ಲ. ಅವರು ಬಟ್ಟೆಯಲ್ಲಿಯೂ ಕೂಡ ಅತ್ಯಂತ ಸರಳವಾಗಿ ಇದ್ದರು. ಧೋತಿ, ಟೊಪ್ಪಿಗೆಯೊಂದಿಗೆ ಸದನಕ್ಕೆ ಬರುತ್ತಿದ್ದರು. ಸದನದಲ್ಲಿಯೇ ಇರಲಿ ಹೊರಗಡನೇ ಇರಲಿ ಎಲ್ಲ ಕಡೆಗೂ ಇದ್ದದ್ದು ಇದ್ದಂಗ ಹೇಳಿಬಿಡುವಂತವರು. ಅಂತಹ ಗಟ್ಟಿ ಮನುಷ್ಯನನ್ನು ಇದುವರೆಗೂ ನಾನು ಬೇರೆ ಯಾರನ್ನು ನೋಡಲಿಲ್ಲ. ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡರ ಜತೆಗೂ ಒಳ್ಳೆಯ ಸಂಬಂಧವನ್ನು ಹೊಂದಿದ್ದ ಅವರು, ಸೋತಾಗಲೂ ಗೆದ್ದಾಗಲೂ ಒಂದೇ ರೀತಿಯಾಗಿ ಇರುತ್ತಿದ್ದರು.
ವಿರೋಧ ಪಕ್ಷದವರೂ ಸರ್ಕಾರದಾಗ ಇದ್ದಂಗ….
ಕೆ.ಎಚ್. ಪಾಟೀಲರು ಮಂತ್ರಿ ಆದಾಗಲೂ ಹೊರಗಡೆ ಹೇಗೆ ಮಾತನಾಡುತ್ತಿದ್ದರೋ ಸದನದಲ್ಲೂ ಹಾಗೇ ಮಾತನಾಡುತ್ತಿದ್ದರು. ಪ್ರಶ್ನೆ ಕೇಳುವವರಿಗೆ “ಬರೀ ಪ್ರಶ್ನೆ ಕೇಳಾಕ ಅಲ್ಲ ವಿರೋಧ ಪಕ್ಷದವರೂ ಸರಕಾರದಾಗ ಇದ್ದಂಗ. ಬರೀ ಪ್ರಶ್ನೆ ಕೇಳಿ ಗಲಾಟೆ ಮಾಡೋದಲ್ಲ. ಸಮಸ್ಯೆಗೆ ಪರಿಹಾರ ಮಾಡಬೇಕು” ಅಂತ ನೇರವಾಗಿ ಹೇಳುತ್ತಿದ್ದರು.
ಗುಂಡೂರಾವ್ ಅವರು ಮುಖ್ಯಮಂತ್ರಿ ಇದ್ದಾಗ ಹುಲಕೋಟಿಗೆ ಕರೆಸಿದ್ದರು. ಆಗ ಅವರ ಮುಂದೆ ಇಲ್ಲಿ ಎಂಜಿನೀಯರಿಂಗ್ ಕಾಲೇಜ್ ಕೊಡು ಎಂದು ಹೇಳಿದಾಗ. ಗುಂಡೂರಾವ್ ಅವರು ಇಂಥಾ ಹಳ್ಯಾಗ ಹೆಂಗ್ ಎಂಜಿನಿಯರಿಂಗ್ ಕಾಲೇಜ್ ಮಾಡೋದು ಅಂತ ಪ್ರಶ್ನೆ ಮಾಡಿದ್ರು, ಆಗ ಕೆ.ಎಚ್. ಪಾಟೀಲರು ನೀನ್ ಕೊಟ್ಟ ನೋಡು ನಾವ್ ಮಾಡತೇವಿ ಅಂದ್ರು. ಆಗ ಗುಂಡೂರಾವ ನಿಂತ ಜಾಗದಲ್ಲೇ ಎಂಜಿನಿಯರಿಂಗ್ ಕಾಲೇಜ್ ಘೋಷಣೆ ಮಾಡಿದ್ದರು.
ಯುವಪೀಳಿಗೆಗೆ ಅನುಕರಣೀಯ…..
ಸರ್ವರ ಹಿತಕ್ಕಾಗಿ ದುಡಿದ ಮಾನ್ಯ ಕೆ.ಎಚ್. ಪಾಟೀಲರ ಸರಳ ಜೀವನ, ಆದರ್ಶವಾದ, ಅಂತಕರಣ, ವಿಶ್ವಾಸ, ಸ್ನೇಹ ಮತ್ತಿತರ ಗುಣಗಳು ಇಂದಿನ ಯುವಪೀಳಿಗೆಗೆ ಅನುಕರಣೀಯವಾಗಿವೆ. ಸಮಾಜಮುಖಿಯಾದ ಮೌಲ್ಯಯುತ ಉದಾತ್ತ ಗುಣಗಳನ್ನು ಹೊಂದಿರುವ ವ್ಯಕ್ತಿಗಳು ಇಂದಿನ ಸಮಾಜದಲ್ಲಿ ವಿರಳವಾಗಿದ್ದು, ಅಂತಹ ವಿರಳತೆಯಲ್ಲಿ ಎದ್ದು ಕಾಣುವ ವ್ಯಕ್ತಿ ಇವರು. ಸಮಾಜಕ್ಕಾಗಿಯೇ ತಮ್ಮ ಇಡೀ ಬದುಕನ್ನು ಮೀಸಲಿಟ್ಟಿದ್ದ ಪ್ರಾತಃಸ್ಮರಣೀಯರಾದ ಕೆ.ಎಚ್. ಪಾಟೀಲರು ಎಂದೆಂದಿಗೂ ಚಿರಸ್ಮರಣೀಯರಾಗಿದ್ದಾರೆ.