ಕನ್ನಡತಿಗೆ ಒಲಿದ “ಶಿಕ್ಷಾ ರತ್ನ”

0
22

ಜೈಪುರ(ರಾಜಸ್ಥಾನ): ಇಲ್ಲಿನ ತಕ್ಷಿಲಾ ಬ್ಯುಸಿನೆಸ್ ಸ್ಕೂಲ್ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ‘ಶಿಕ್ಷಾ ರತ್ನ’ಯು ಕನ್ನಡತಿ ಡಾ.ಶಾಂತಾದೇವಿ ಎಲ್ ಸಣ್ಣೆಲ್ಲಪ್ಪನವರ ಅವರಿಗೆ ಒಲಿದು ಬಂದಿದೆ.
ಶಿಕ್ಷಣ, ನಾಯಕತ್ವ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ತಮ್ಮ ಅತ್ಯುತ್ತಮ ಸೇವೆ ಸಲ್ಲಿಸಿದ ಸಾಧಕರಿಗೆ ಸಂಸ್ಥೆ ವತಿಯಿಂದ ಈ ಪ್ರಶಸ್ತಿ ನೀಡಲಾಗುತ್ತದೆ.
ಒಟ್ಟು ೭೦೦ ನಾಮನಿರ್ದೇಶನಗಳಲ್ಲಿ, ೬೫ ಸಾಧಕರ ಅನನ್ಯ ಸಾಧನೆಗಳು ಮತ್ತು ಸಮಾಜಕ್ಕೆ ಅವರ ಪ್ರಭಾವಶಾಲಿ ಕೊಡುಗೆಗಳನ್ನು ಗಮನಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅದರಲ್ಲಿ ಕನ್ನಡತಿ ಡಾ. ಶಾಂತಾದೇವಿ ಎಲ್. ಸಣ್ಣೆಲ್ಲಪ್ಪನವರ್ ಅವರು ಒಬ್ಬರಾಗಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.
ಯೋಗ, ಜಾನಪದ, ಕನ್ನಡ ಭಾಷೆ ಮತ್ತು ಸಾಹಿತ್ಯ ಅಪಾರ ಸೇವೆ ಸಲ್ಲಿಸಿರುವ ಡಾ. ಶಾಂತಾದೇವಿ, ಕನ್ನಡ ಸಾಹಿತ್ಯದ ಮೇಲೆ ಗಮನ ಕೇಂದ್ರೀಕರಿಸಿ ಯೋಗದ ಸಾಹಿತ್ಯಿಕ ಅಂಶಗಳಲ್ಲಿ ಪಿಎಚ್‌ಡಿ ಪದವಿ ಪಡೆದ ವಿಶ್ವದ ಮೊದಲ ವ್ಯಕ್ತಿಯಾಗಿದ್ದಾರೆ. ಯೋಗ ಮತ್ತು ಕನ್ನಡ ಸಾಹಿತ್ಯ ಎರಡು ಕ್ಷೇತ್ರಗಳಿಗೆ ಅಮೂಲ್ಯ ಕೊಡುಗೆಯಾಗಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಯೋಗ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ ಮೊದಲ ಮಹಿಳೆ. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಯೋಗ ಅಧ್ಯಯನ ವಿಭಾಗವನ್ನು ಸ್ಥಾಪಿಸಲು ಮತ್ತು ಇತರ ಹಲವಾರು ಸ್ಥಳಗಳಲ್ಲಿ ಯೋಗ ಕಾರ್ಯಕ್ರಮಗಳನ್ನು ಸ್ಥಾಪಿಸಲು ತಮ್ಮ ಪತಿ ಪ್ರೊ. ಲಕ್ಷ್ಮಣಕುಮಾರ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ. ಯೋಗ ಮತ್ತು ಕನ್ನಡ ಕ್ಷೇತ್ರದಲ್ಲಿ ಭಾರತ ಮತ್ತು ವಿದೇಶಗಳಲ್ಲಿ ಸುಮಾರು ೪೦ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.
ರಷ್ಯನ್ ಭಾಷೆಯಲ್ಲಿ ನಿಪುಣರಾಗಿದ್ದ ಡಾ. ಶಾಂತಾದೇವಿ, ಮಾಸ್ಕೋದ (ರಷ್ಯಾ, ಹಿಂದಿನ ಸೋವಿಯತ್ ಒಕ್ಕೂಟ) ಪ್ರೋಗ್ರೆಸ್ ಪಬ್ಲಿಕೇಶನ್‌ನ ಸಂಪಾದಕೀಯ ಮಂಡಳಿಗೆ ಮತ್ತು ಕನ್ನಡ ಸಂಸ್ಕೃತಿ/ಭಾಷೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ಇತರ ರಷ್ಯನ್ನರಿಗೆ ಕನ್ನಡ ಭಾಷೆಯನ್ನು ಉಚಿತವಾಗಿ ಕಲಿಸಿದ್ದಾರೆ.
ಡಾ. ಶಾಂತಾದೇವಿ ಸುಮಾರು ೪೦ ವಿದ್ಯಾರ್ಥಿಗಳಿಗೆ ಎಂಫಿಲ್ ಮತ್ತು ಪಿಎಚ್‌ಡಿ ಪದವಿಗಳನ್ನು ಪಡೆಯಲು ಮಾರ್ಗದರ್ಶನ ನೀಡಿದ್ದಾರೆ. ಅವರಿಗೆ ೨೦೨೦ರಲ್ಲಿ ಕರ್ನಾಟಕ ಮಹಿಳಾ ಸಾಧಕಿಯರ ಪ್ರಶಸ್ತಿ (ಕೆಡಬ್ಲ್ಯೂಎಎ)ಯೂ ಒಲಿದಿದೆ. ಈ ಎಲ್ಲ ಸಾಧನೆಯೇ ಅವರಿಗೆ ‘ಶಿಕ್ಷಾ ರತ್ನ’ ಪ್ರಶಸ್ತಿ ಒದಗಿ ಬರಲು ಕಾರಣವಾಗಿದೆ.
ತಕ್ಷಶಿಲಾ ಬಿಸಿನೆಸ್ ಸ್ಕೂಲ್‌ನಲ್ಲಿ ಇತ್ತಿಚೇಗೆ ನಡೆದ ಕಾರ್ಯಕ್ರಮದಲ್ಲಿ ಡಾ. ಶಾಂತಾದೇವಿ ದಂಪತಿಗೆ ಸನ್ಮಾನ ಮಾಡಲಾಗಿದೆ. ಮುಖ್ಯ ಅತಿಥಿ ಐಪಿಎಸ್ ಪಂಕಜ್ ಚೌಧರಿ ಪ್ರಶಸ್ತಿ ಪ್ರದಾನ ಮಾಡಿದರು. ತಕ್ಷಶಿಲಾ ಬ್ಯುಸಿನೆಸ್ ಸ್ಕೂಲ್‌ನ ಸಿಬ್ಬಂದಿ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು.

Previous articleಕೆಎಸ್‌ಡಿಎಲ್ ಲಾಭಾಂಶ 108 ಕೋಟಿ ರೂ. ಸರ್ಕಾರಕ್ಕೆ ಹಸ್ತಾಂತರ
Next articleಪ್ರಯಾಣಿಕರ ಗಮನಕ್ಕೆ… ೧೧೬ ಪ್ಯಾಸೆಂಜರ್ ರೈಲುಗಳಿಗೆ ಮರುಸಂಖ್ಯೆ