ಇಂಧನ ಸಚಿವ ಜಾರ್ಜ್‌ಗೆ ಮುತ್ತಿಗೆ ಬಿಸಿ

ಚಿತ್ರದುರ್ಗ: ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಇಂಧನ ಸಚಿವ ಕೆ.ಜಿ.ಜಾರ್ಜ್, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರಿಗೆ ಮುತ್ತಿಗೆಯ ಬಿಸಿ ತಟ್ಟಿತು.
ಜಿಪಂ ಆವರಣಕ್ಕೆ ಆಗಮಿಸಿದ ಸಚಿವರು, ಸಭಾಂಗಣಕ್ಕೆ ತೆರಳುವ ಸಂದರ್ಭ ಅಡ್ಡಗಟ್ಟಿದ ಜಾನಕೊಂಡ, ಪಂಡರಹಳ್ಳಿ ಸೇರಿ ಸುತ್ತಮುತ್ತಲಿನ ರೈತರು, ವಿದ್ಯುತ್ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಟಿಸಿ ಬದಲಾವಣೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ, ವಿದ್ಯುತ್ ವಿತರಣಾ ಸ್ಟೇಷನ್ ಆರಂಭಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ಸಭೆ ನಡೆಸಲು ಅವಕಾಶ ಕೊಡುವುದಿಲ್ಲ. ನಮಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಆಗಬೇಕು, ನಮ್ಮ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕೃಷಿಕರ ಆಕ್ರೋಶ ಮನಗಂಡು ಅವರೊಂದಿಗೆ ಕೆಲಕಾಲ ಚರ್ಚಿಸಿದ ಸಚಿವರು, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಪವರ್ ಕಟ್ ಮಾಡುತ್ತಿಲ್ಲ. ಏಳು ಗಂಟೆ ವಿದ್ಯುತ್ ಪೂರೈಕೆಗೆ ಆದೇಶಿಸಲಾಗಿದೆ. ಇಲ್ಲಿ ಸಮಸ್ಯೆ ಇದೆ ಎಂಬುದು ನೀವುಗಳು ತಿಳಿಸಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಬಳಿಕ ಸಭೆ ನಡೆಸಲು ಅನುಮತಿ ಕೊಟ್ಟ ರೈತರು, ಅಧಿಕಾರಿಯನ್ನು ಒಳ ಹೋಗಲು ಅವಕಾಶ ಕೊಡದೆ ದಿಗ್ಬಂಧನ ಹಾಕಿದರು. ಸಚಿವರು ಬಂದಿದ್ದಾರೆಂಬ ಕಾರಣಕ್ಕೆ ಈಗ ಭರವಸೆ ನೀಡಿ ಬಳಿಕ ನಮ್ಮ ಸಮಸ್ಯೆಗೆ ಸ್ಪಂದಿಸುದಿಲ್ಲ. ನೀವು ಸಭೆಗೆ ಹೋಗಿ ಏನ್ ಮಾಡೋದು ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು. ನಂತರ ಪೊಲೀಸರು ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿ ತಿಳಿಗೊಳಿಸಿದರು.