ದಾವಣಗೆರೆ: ದೇವರಿಗೆ ಬಿಟ್ಟಿದ್ದ ಕೋಣವೊಂದು ವ್ಯಕ್ತಿಯೋರ್ವರ ಮೇಲೆ ದಾಳಿ ನಡೆಸಿ ಇರಿದು ಕೊಂದಿರುವ ಘಟನೆ ಚನ್ನಗಿರಿ ತಾಲ್ಲೂಕಿನ ಎನ್.ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಲಿಂಗದಹಳ್ಳಿಯ ಉಡುಸಲಾಂಭದೇವಿಗೆ ಕೋಣವನ್ನು ಬಿಡಲಾಗಿತ್ತು. ಪ್ರತಿ ಐದು ವರ್ಷಕ್ಕೊಮ್ಮೆ ದೇವಿಯ ಜಾತ್ರಾ ಮಹೋತ್ಸವವು ನಡೆಯುತ್ತಿತ್ತು. ದೇವಿಗಾಗಿ ಬಿಟ್ಟಿದ್ದ ಕೋಣ ಗ್ರಾಮದ ಜಯ್ಯಪ್ಪ (೪೮)ನನ್ನು ಕೊಂದು ಹಾಕಿದೆ. ಜಯ್ಯಪ್ಪ ತಾಲೂಕಿನ ಲಿಂಗದಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನೀರು ಗಂಟಿಯಾಗಿ ಕೆಲಸ ಮಾಡುತ್ತಿದ್ದ.
ಜಯ್ಯಪ್ಪನ ಮನೆಯಲ್ಲಿ ನಾಲ್ಕೈದು ಎಮ್ಮೆಗಳನ್ನು ಸಾಕಿದ್ದರಿಂದ ಈತ ಪ್ರತಿ ದಿನ ಸಂಜೆ ಎಮ್ಮೆಗಳನ್ನು ಜಮೀನಿಗೆ ಕರೆದೊಯ್ದು ಮೇಯಿಸಿಕೊಂಡು ಬರುತ್ತಿದ್ದ. ಈ ವೇಳೆಯಲ್ಲಿ ಉಡುಸಲಾಂಭದೇವಿಗೆ ಬಿಟ್ಟಿದ್ದ ಕೋಣವೂ ಅಲ್ಲಿಗೆ ಬಂದು ಆ ಎಮ್ಮೆಗಳಿಗೆ ಕಿರಿಕಿರಿ ಉಂಟುಮಾಡುತ್ತಿತ್ತು. ಪ್ರತಿದಿನವೂ ಕೋಣವನ್ನು ಹೊಡೆದೋಡಿಸುವುದೇ ಜಯ್ಯಪ್ಪನ ಕಾಯಕವಾಗಿ ಹೋಗಿತ್ತು. ಭಾನುವಾರ ಸಂಜೆಯೂ ಕೂಡ ಕೋಣ ಎಮ್ಮೆಗಳೊಂದಿಗೆ ಗುದ್ದಾಟಕ್ಕಿಳಿದಿತ್ತು. ಇದನ್ನು ಕಂಡು ರೊಚ್ಚಿಗೆದ್ದ ಜಯ್ಯಪ್ಪ ಕೋಣವನ್ನು ಕೋಲಿನಿಂದ ಹೊಡೆದೋಡಿಸಲು ಮುಂದಾಗಿದ್ದಾನೆ. ಈ ವೇಳೆ ಕೋಣ ಸಿಟ್ಟಿಗೆದ್ದು ಸತತ ೧೫ರಿಂದ ೨೦ ಬಾರಿ ಜಯ್ಯಪ್ಪನಿಗೆ ಇರಿದು ಕೊಂದಿದೆ.
ಘಟನೆ ನಡೆಯುತ್ತಿದ್ದಂತೆಯೇ ಎನ್.ಬಸವನಹಳ್ಳಿ ಗ್ರಾಮಸ್ಥರು ಮೃತ ಜಯ್ಯಪ್ಪ ಇವರ ಶವವನ್ನು ಟ್ರಾಕ್ಟರ್‌ನಲ್ಲಿ ಇಟ್ಟುಕೊಂಡು ಲಿಂಗದಹಳ್ಳಿ ಗ್ರಾಮದ ಸರ್ಕಲ್‌ನಲ್ಲಿ ಮೃತನ ಮನೆಯವರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸಿದಾಗ ದೇವಾಲಯ ಸಮಿತಿಯವರು ಮೃತ ಜಯ್ಯಪ್ಪನ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಮೃತ ಜಯ್ಯಪ್ಪನ ಮಗನಿಗೆ ನೀರುಗಂಟಿಯ ಕೆಲಸವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಪ್ರಕರಣ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.