ಹುಬ್ಬಳ್ಳಿ: ಫ್ಲೈ ಓವರ್ ನಿರ್ಮಾಣ ಕಾಮಗಾರಿ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬೃಹತ್ `ಹೈಡ್ರೋ ಕ್ರೇನ್’ ನಡು ರಸ್ತೆಯಲ್ಲೇ ಮಗುಚಿ ಬಿದ್ದಿದೆ.
ಹಳೇ ಕೋರ್ಟ್ ವೃತ್ತದಿಂದ ದೇಸಾಯಿ ವೃತ್ತಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಅವಘಢ ಸಂಭವಿಸಿದೆ. ಅದೃಷ್ಟವಶಾತ್ ಯಾರಿಗೂ ಗಾಯ, ಪ್ರಾಣ ಹಾನಿ ಸಂಭವಿಸಿಲ್ಲ. ಪರಿಸ್ಥಿತಿಯ ಸೂಕ್ಷ್ಮತೆಯನ್ನರಿತ ವಾಹನ ಚಾಲಕ, ಕ್ರೇನ್ ಬೀಳುವ ಮೊದಲೇ ಹೊರ ಜಿಗಿದಿದ್ದಾನೆ. ಹೈಡ್ರೋ ಕ್ರೇನ್ ನಡು ರಸ್ತೆಯಲ್ಲಿಯೇ ಸಿಮೆಂಟ್ ಮಿಶ್ರಣದ ಸಮೇತ ನೆಲಕ್ಕುರುಳಿದೆ. ಅಲ್ಲದೇ, ಸನಿಹದಲ್ಲೇ ಇದ್ದ ಎರಡು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದವು. ವಾಹನ ಬಿದ್ದ ಪರಿಣಾಮ ವೇದಾಂತ್ ಸ್ಕ್ಯಾನ್ ಸೆಂಟರ್ ಬೋರ್ಡ್, ಕಟ್ಟಡಕ್ಕೆ ಹಾನಿಯಾಗಿದೆ. ಇದೇ ಕಟ್ಟಡದ ಎದುರು ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನ ಸಂಪೂರ್ಣ ಜಖಂಗೊಂಡಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ದೊಡ್ಡ ಅನಾಹುತ ತಪ್ಪಿಸಿದರು.