ನವಲಗುಂದ: ಹನುಮಂತನ ಭಕ್ತರು ಬಜರಂಗದಳದ ಬಜರಂಗಿಗಳು. ಅದನ್ನು ಬ್ಯಾನ್ ಮಾಡುತ್ತೇವೆ ಎಂದು ಕಾಂಗ್ರೆಸ್ ಅವರು ಹೇಳುತ್ತಿದ್ದಾರೆ. ಹನುಮನ ಭಕ್ತರು ಒಬ್ಬೊಬ್ಬರು ಸಿಡಿದೆದ್ದು ನಿಂತರೆ ಕಾಂಗ್ರೆಸ್ ಪಕ್ಷ ದೇಶದಿಂದಲೇ ಬೇರು ಸಮೇತ ಕಿತ್ತೊಗಿಯುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನವಲಗುಂದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಂಕರ ಪಾಟೀಲ್ ಮುನೇನಕೊಪ್ಪ ಅವರ ಪರವಾಗಿ ರೋಡ್ ಶೋ ನಡೆಸಿದ ವೇಳೆ ರೋಡ್ ಶೋ ನಲ್ಲಿಯೇ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್‌ನವರು ಬಜರಂಗ ದಳ ನಿಷೇಧ ಮಾಡುವುದಾಗಿ ಹೇಳುತ್ತಾರೆ. ದೇಶದ್ರೋಹ, ಭಯೋತ್ಪಾದನೆ ಮಾಡುವ ಪಿಎಫ್‌ಐ ಜೊತೆ ಬಜರಂಗದಳವನ್ನು ಸೇರಿಸಿದ್ದಾರೆ. ನಮ್ಮ ಪ್ರಧಾನಿ ಮೋದಿ ಈಗಾಗಲೇ ಪಿಎಫ್‌ಐ ಬ್ಯಾನ್ ಮಾಡಿದ್ದಾರೆ. ನಮ್ಮ ಪರಂಪರೆ, ನಮ್ಮ ಧರ್ಮ, ನಮ್ಮ ಇತಿಹಾಸವನ್ನು ಗಟ್ಟಿಕೊಳಿಸಿರುವುದು ಬಜರಂಗದಳ. ಹನುಮನ ಭಕ್ತರು ಒಬ್ಬೊಬ್ಬರು ಸಿಡಿದೆದ್ದು ನಿಂತರೆ ಕಾಂಗ್ರೆಸ್ ಪಕ್ಷ ದೇಶದಿಂದಲೇ ಬೇರು ಸಮೇತ ಕಿತ್ತೊಗೀತಾರೆ. ಉತ್ತರದ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ದೇವಸ್ಥಾನ ನಿರ್ಮಾಣ ಆಗ್ತಿದ್ರೆ, ದಕ್ಷಿಣದ ಅಂಜನಾದ್ರಿಯಲ್ಲಿ ಆಂಜನೇಯ ಸ್ವಾಮಿ ಅಭಿವೃದ್ಧಿ ಆಗುತ್ತಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಧೋರಣೆಗೆ ಟಾಂಗ್ ನೀಡಿದರು.
`ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎನ್ನುವುದು ನಮ್ಮ ಸರ್ಕಾರ ಮಾಡುತ್ತಿದೆ. ಅದನ್ನು ನೀವು ಮನೆ ಮನೆಗೆ ಹೋಗಿ ಜನರಿಗೆ ತಿಳಿಸಬೇಕು ಎಂದು ಕರೆ ನೀಡಿದರು.