ಬೆಂಗಳೂರು: ಪೆನ್‌ಡ್ರೈವ್ ಬಿಡುಗಡೆಯನ್ನು ಸದ್ಯಕ್ಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್’ಡಿ.ಕುಮಾರಸ್ವಾಮಿಯವರು ಗುರುವಾರ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ಡ್ರೈವ್ ಬಿಡುಗಡೆಗೆ ಬಗ್ಗೆ ಕಾಂಗ್ರೆಸ್‌ನವರಿಗೆ ಯಾಕೆ ಇಷ್ಟು ಆತುರ? ಇವರ ಸಮಸ್ಯೆ ಬಗ್ಗೆ ಎಲ್ಲವನ್ನೂ ಬಿಚ್ಚಿಟ್ಟಿದ್ದೇನೆ, ಸಲಹೆ ನೀಡಿದ್ದೇನೆ. ಸರಿಪಡಿಸಿಕೊಳ್ಳುವುದಾದರೆ ಸರಿಪಡಿಸಿಕೊಳ್ಳಲಿ ಎಂದರು. ಅದು ಸಾಮಾನ್ಯ ಪೆನ್‍ಡ್ರೈವ್ ಅಲ್ಲ. ಈ ಪೆನ್‍ಡ್ರೈವ್ ರಿಲೀಸ್‍ಗೆ ನನಗೆ ಆತುರ ಇಲ್ಲ. ಪೆನ್‍ಡ್ರೈವ್ ಬಿಡುಗಡೆಯನ್ನು ಕಾಂಗ್ರೆಸ್‌ನವರೇ ತಡೆಯುತ್ತಿದ್ದಾರೆಂದು ಹೇಳಿದ ಅವರು ವರ್ಗಾವಣೆ ದಂಧೆಗೆ ಅಡ್ಡಗಳನ್ನು ಮಾಡಿಕೊಂಡಿದ್ದಾರೆ. ಈ ದರಪಟ್ಟಿ ಅವರೇ ಕೊಟ್ಟಿದ್ದ ಜಾಹೀರಾತಿನ ಮುಂದುವರೆದ ಭಾಗ ಇರಬಹುದು. ವಾಸ್ತವಾಂಶವನ್ನು ಸದನದ ಮುಂದೆ ಇಟ್ಟಿದ್ದೇನೆ. ಭ್ರಷ್ಟಾಚಾರ ನಿಲ್ಲಿಸುವ ಧೈರ್ಯವಿದ್ದರೆ ಕ್ರಮ ಕೈಗೊಳ್ಳಲಿ. ಈ ದರಪಟ್ಟಿ ಈಗ ಇವರ ಅವಧಿಯಲ್ಲೇ ಮಾಡಿದ್ದಾರೆ. ಅಧಿಕಾರಿಗಳಿಂದಲೇ ಈ ಮಾಹಿತಿ ಸೋರಿಕೆ ಆಗಿದೆ ಎಂದರು.
