Home Advertisement
Home ಕ್ರೀಡೆ ಧೋನಿಗೆ ೧೫ ಕೋಟಿ ಪಂಗನಾಮ: ಮಾಜಿ ಪಾಲುದಾರನ ಬಂಧನ

ಧೋನಿಗೆ ೧೫ ಕೋಟಿ ಪಂಗನಾಮ: ಮಾಜಿ ಪಾಲುದಾರನ ಬಂಧನ

0
50

ರಾಂಚಿ: ಭಾರತೀಯ ಕ್ರಿಕೆಟ್‌ನ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಮಾಜಿ ವ್ಯವಹಾರ ಪಾಲುದಾರ ಮಿಹಿರ್ ದಿವಾಕರ್‌ರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದು, ತಮಗೆ ದಿವಾಕರ್‌ನಿಂದ ೧೫ ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆಂದು ಧೋನಿ ಆರೋಪ ಮಾಡಿದ್ದಾರೆ.
೨೦೧೭ರಲ್ಲಿ ಮಿಹಿರ್ ದಿವಾಕರ್ ಧೋನಿ ಜೊತೆಗೂಡಿ ಕ್ರಿಕೆಟ್ ಅಕಾಡೆಮಿ ಆರಂಭಿಸಲು ಒಪ್ಪಂದ ಮಾಡಿಕೊಂಡಿದ್ದರು. ಅರ್ಕಾ ಸ್ಪೋರ್ಟ್ಸ್ ಅಕಾಡೆಮಿ ಹೆಸರಿನಲ್ಲಿ ಆರಂಭವಾದ ಈ ಕ್ರಿಕೆಟ್ ಅಕಾಡೆಮಿಯಿಂದ ಧೋನಿಗೆ ಫ್ರಾಂಚೈಸಿ ಶುಲ್ಕ ಹಾಗೂ ಲಾಂಭಾಂಶವನ್ನು ಹಂಚಿಕೊಳ್ಳುವ ಬಗ್ಗೆ ಒಪ್ಪಂದದಲ್ಲಿ ಉಲ್ಲೇಖವಿತ್ತು. ಆದರೆ, ಇದ್ಯಾವುದನ್ನೂ ದಿವಾಕರ್ ಪಾಲಿಸದ ಹಿನ್ನೆಲೆಯಲ್ಲಿ ಧೋನಿ ದೂರು ಸಲ್ಲಿಸಿದ್ದು, ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ಸದ್ಯ ಈ ಬಗ್ಗೆ ಮಾಹಿತಿ ನೀಡಿರುವ ಜೈಪುರ ಪೊಲೀಸ್ ವರಿಷ್ಠಾಧಿಕಾರಿ ಬಿಜು ಜಾರ್ಜ್, ಮಿಹಿರ್ ದಿವಾಕರ್, ಧೋನಿ ಹೆಸರಿನಲ್ಲಿ ದೇಶದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲೂ ಸಾಕಷ್ಟು ಕ್ರಿಕೆಟ್ ಅಕಾಡೆಮಿಗಳನ್ನು ಆರಂಭಿಸಿದ್ದು, ಈತ ಹಾಗೂ ಈತನ ಪತ್ನಿ ಸೌಮ್ಯ ದಾಸ್ ಈ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಒಪ್ಪಂದದ ಪ್ರಕಾರ ದಿವಾಕರ್ ನಡೆದುಕೊಳ್ಳದ ಹಿನ್ನೆಲೆಯಲ್ಲಿ ಧೋನಿ ಸಂಸ್ಥೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದ್ದಾರೆ.
ಅದಾಗ್ಯೂ ಧೋನಿ ಕ್ರಿಕೆಟ್ ಅಕಾಡೆಮಿಗಳ ಹೆಸರಿನಡಿ ದಿವಾಕರ್ ಮತ್ತಷ್ಟು ಕ್ರಿಕೆಟ್ ಅಕಾಡೆಮಿಗಳನ್ನು ಪ್ರಾರಂಭಿಸಿದ್ದು, ಸಾರ್ವಜನಿಕರಿಂದ ಹಣ ಪಡೆದಿದ್ದಾರೆ. ಇದರಿಂದ ಸುಮಾರು ೧೫ ಕೋಟಿ ರೂಪಾಯಿವರೆಗೂ ನಷ್ಟವಾಗಿದ್ದು, ಧೋನಿಯ ಹೆಸರನ್ನು ಕೂಡ ದುರ್ಬಳಕೆ ಮಾಡಿಕೊಂಡಿರುವ ಆರೋಪ ಮಾಡಲಾಗಿದೆ. ಸದ್ಯ ದಿವಾಕರ್ ವಿರುದ್ಧ ಸೆಕ್ಷನ್ ೪೦೬, ೪೨೦, ೪೬೭, ೪೬೮, ೪೭೧ ಹಾಗೂ ೧೨೦ರ ಅಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ.

Previous articleಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಅರ್ಚಕ ವೇಷಧಾರಿ ಪೊಲೀಸರು
Next articleಪಾಂಡ್ಯ ಬ್ರದರ್ಸ್‌ಗೆ ಮೋಸ ಸೋದರನ ಬಂಧನ