ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥರಾಗಿದ್ದ ಜಗದೀಶ್ ಅವರನ್ನು ಆ್ಯಂಬುಲೆನ್ಸ್ ನಲ್ಲಿ ಮೈಸೂರಿಗೆ ಸಾಗುಸುತ್ತಿದ್ದಾಗ ಜೆಡಿಎಸ್ ನಾಯಕ, ಮಾಜಿ ಶಾಸಕ ಸುರೇಶ್ ಗೌಡ ಅವರು ಮಾರ್ಗ ಮಧ್ಯೆ ಆ್ಯಂಬುಲೆನ್ಸ್ ಅನ್ನು ತಡೆದಿದ್ದರು ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಆರೋಪವನ್ನು ಜೆಡಿಎಸ್ ನಾಯಕರು ತಿರಸ್ಕರಿಸಿದ್ದರು. ಆ್ಯಂಬುಲೆನ್ಸ್ ತಡೆದಿದ್ದು ಸಾಬೀತಾದರೆ ತಾವು ರಾಜಕೀಯದಿಂದ ನಿವೃತ್ತಿ ಘೋಷಿಸುವುದಾಗಿ ಸವಾಲು ಹಾಕಿದ್ದರು. ಅದರ ಬೆನ್ನಲ್ಲೇ ಕಾಂಗ್ರೆಸ್ ಐಟಿ ಸೆಲ್, ಸುರೇಶ್ ಗೌಡ ಅವರು ಆ್ಯಂಬುಲೆನ್ಸ್ ತಡೆದಿದ್ದಾರೆಂಬುದಕ್ಕೆ ಸಂಬಂಧಿಸಿದೆಯೆನ್ನಲಾದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಮೊಬೈಲ್ ನಿಂದ ಚಿತ್ರೀಕರಿಸಲಾದ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಸುರೇಶ್ ಗೌಡರನ್ನು ಹಾಗೂ ಜೆಡಿಎಸ್ ನಾಯಕರನ್ನು ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿಸಿದೆ. ಇದೀಗ ಘಟನೆಗೆ ಸಂಬಂಧಿಸಿಂತೆ ವೀಡಿಯೋ ಬಿಡುಗಡೆ ಮಾಡಿರುವ ಜೆಡಿಎಸ್, ನಾವು ಜಗದೀಶ್‌ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ವಿಚಾರಿಸಲು ಅಂಬುಲೆನ್ಸ್ ಅನ್ನು ನಿಲ್ಲಿಸಿದ್ದೆವು ಎಂದು ಸ್ಪಷ್ಟಪಡಿಸಿದೆ. ಜಗದೀಶ್‌ನ ಎಲ್ಲಿಗೆ ಕರೆದುಕೊಂಡು ಹೋಗ್ತಾ ಇದ್ದೀರಾ? ಬಿಜಿಎಸ್‌ನಲ್ಲಿ ಚಿಕಿತ್ಸೆ ಕೊಡೋಕೆ ಆಗಲ್ವಾ? ಮಣಿಪಾಲ್‌ಗೆ ಕರೆದುಕೊಂಡು ಹೋಗ್ತಾ ಇದ್ದೀರಾ? ಸರಿ ಹೋಗಿ ಎಂದು ಸುರೇಶ್ ಗೌಡ ಮಾತನಾಡಿರುವ ವೀಡಿಯೋ ರಿಲೀಸ್ ಆಗಿದೆ. ಜಗದೀಶ್ ಆಸ್ಪತ್ರೆಗೆ ಸೇರಿಸಿದ್ದು ಜೆಡಿಎಸ್ ಕಾರ್ಯಕರ್ತರೆ, ಆತನನ್ನು ಮೈಸೂರಿಗೆ ಕರೆದುಕೊಂಡು ಹೋಗಿದ್ದು ನಮ್ಮ ಕಾರ್ಯಕರ್ತರೆ. ನನಗೆ ಯಾವುದೇ ದುರುದ್ದೇಶವಿಲ್ಲ, ಹಾಗೆ ಏನಾದ್ರು ಇದ್ರೆ ದೊಡ್ಡ ಸರ್ಕಲ್‌ನಲ್ಲಿ ಅದು ಸಿಸಿಟಿವಿ ಇರೋ ಪ್ರದೇಶದಲ್ಲೇ ಏಕೆ ನಿಲ್ಲುತ್ತಿದ್ದೆವು ಎಂದು ಹೇಳಿದ್ದಾರೆ.