ಕವಿವಿ ಹುಡುಗನಿಗೆ ಹೊನ್ನಿನ ಪದಕ

0
20

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ನಾಗರಾಜ ದಿವಟೆ ಗುವಾಹತಿಯಲ್ಲಿ ನಡೆದ ‘ಖೇಲೋ ಇಂಡಿಯಾ’ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಹೊನ್ನಿನ ಪದಕ ಬಾಚಿಕೊಂಡಿದ್ದಾರೆ.
ಸ್ಥಳೀಯ ಕರ್ನಾಟಕ ಕಾಲೇಜಿನ ನಾಗರಾಜ, ಪುರುಷರ ೩,೦೦೦ ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ದೂರವನ್ನು ೯ ನಿಮಿಷ ೩೮.೫೮ ಸೆಕಂದುಗಳಲ್ಲಿ ಕ್ರಮಿಸಿ ಮೊದಲಿಗರಾಗಿ ಗುರಿ ಮುಟ್ಟಿದರು. ರಾಜಸ್ಥಾನದ ಶ್ರೀ ಕುಶಾಲದಾಸ ವಿವಿಯ ರಾಜೇಶ(೯ ನಿ. ೪೪.೭೦ ಸೆ.) ಹಾಗೂ ಹಜಾರಿಬಾಗ್(ಜಾರ್ಖಂಡ್)ನ ವಿನೋಭಾ ಭಾವೆ ವಿವಿಯ ವಿಕಾಸ ರೇ(೯ ನಿ. ೪೫.೬೨ ಸೆ.) ಅನುಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡರು.
ಬಿ.ಕಾಂ. ಮೊದಲ ವರ್ಷದಲ್ಲಿ ಓದುತ್ತಿರುವ ನಾಗರಾಜ, ಈ ಹಿಂದೆ ಚೆನ್ನೈನಲ್ಲಿ ನಡೆದ ನೈಋತ್ಯ ವಲಯ ಹಾಗೂ ನಂತರ ಅಲ್ಲಿಯೇ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ ಕೂಟಗಳೆರಡರಲ್ಲೂ ೩,೦೦೦ ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ಸ್ವರ್ಣ ಪದಕ ಗೆದ್ದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ರೇಲ್ವೆಯ ಹರೀಶ್ ಎಸ್. ಗೌಡ ಅವರಿಂದ ತರಬೇತಿ ಪಡೆಯುತ್ತಿರುವ ನಾಗರಾಜ ಸ್ಪರ್ಧೆಯ ಹಿಂದಿನ ರಾತ್ರಿ ತೀವ್ರ ಜ್ವರದಿಂದ ಬಳಲುತ್ತಿದ್ದರೂ, ಅದನ್ನು ಲೆಕ್ಕಿಸದೇ ಓಡಿ ಚಿನ್ನದ ಪದಕ ಬಾಚಿಕೊಂಡಿದ್ದು ಅದ್ಭುತ ಸಾಧನೆಯೇ ಸರಿ. ಪುರುಷರ ೩,೦೦೦ ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯನ್ನು ಇದೇ ಮೊಟ್ಟ ಮೊದಲ ಬಾರಿ ಕರ್ನಾಟಕ ವಿ.ವಿ. ತನ್ನ ಅಂತರ ಕಾಲೇಜು ಅಥ್ಲೆಟಿಕ್ಸ್ ಕೂಟದಲ್ಲಿ ಸೇರ್ಪಡೆ ಮಾಡಿಕೊಂಡಿದ್ದು ಅದೇ ಸ್ಪಧೆಯಲ್ಲಿ ಅಖಿಲ ಭಾರತ ಹಾಗೂ ಖೇಲೋ ಇಂಡಿಯಾ ಸ್ಪರ್ಧೆಗಳೆರಡರಲ್ಲೂ ಚಿನ್ನದ ಪದಕ ಬಂದಿದ್ದೊಂದು ವಿಶೇಷ.

Previous articleರಾಜ್ಯಸಭೆ ಚುನಾವಣೆ ಏಜೆಂಟರ ನೇಮಕ
Next articleಆಮಿಷಕ್ಕೆ ಒಳಗಾಗಬೇಡಿ, ಗೆಲುವು ನಮ್ಮದೇ