ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಭಾರತೀಯ ಇತಿಹಾಸ ಹಾಗೂ ಶಾಸನಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ರಮಾ ಗುಂಡೂರಾವ್ ಅವರ ಕೊಠಡಿಗೆ ವಾಮಾಚಾರ ಮಾಡಿದ್ದು ಹಾಗೂ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸೂಕ್ತ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಪೊಲೀಸ್ ಆಯುಕ್ತರಿಗೆ ಸೂಚಿಸಿದೆ.
ಸಹಾಯಕ ಪ್ರಾಧ್ಯಾಪಕಿ ರಮಾ ಗುಂಡೂರಾವ ಅವರು ಮಹಿಳಾ ಆಯೋಗಕ್ಕೆ ಅರ್ಜಿ ಸಲ್ಲಿಸಿ, ಭಾರತೀಯ ಇತಿಹಾಸ ಹಾಗೂ ಶಾಸನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಸ್.ಜಿ. ಚಲವಾದಿ ಹಾಗೂ ಪ್ರವೀಣ ದೊಡ್ಡಮನಿ ತಮ್ಮ ಕೊಠಡಿಗೆ ವಾಮಾಚಾರ ಮಾಡಿಸಿದ್ದಲ್ಲದೇ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಪ್ರಕರಣ ಮುಚ್ಚಿ ಹಾಕಲು ಹುನ್ನಾರ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ರಮಾ ಗುಂಡೂರಾವ ಅವರಿಗಾದ ಕಿರುಕುಳ ಪ್ರಕರಣದ ಸಮರ್ಪಕ ವಿಚಾರಣೆ ನಡೆಸಿ ನ್ಯಾಯ ಒದಗಿಸಬೇಕು. ಕ್ರಮ ಕೈಗೊಂಡ ವರದಿಯನ್ನು ೧೫ ದಿನಗಳೊಳಗಾಗಿ ಆಯೋಗಕ್ಕೆ ಸಲ್ಲಿಸುವಂತೆ ತಿಳಿಸಲಾಗಿದೆ.
























