ಇದ್ದರೆ ಇರಬೇಕು ಪುಟ್ಯಾನ ಹಾಂಗ…

0
24

ರಷಿಯಾದ ಪುಟ್ಯಾನನ್ನು ನಮ್ಮವರು ಕಂಡಕಂಡಂಗೆ ಹೊಗಳುತ್ತಿದ್ದಾರೆ. ಆ ಪುಟ್ಯಾ ಅಲ್ಲಿರುವ ಬದಲಿಗೆ ಇಲ್ಲಿದ್ದಿದ್ದರೆ ಇಷ್ಟೊತ್ತಿಗೆ ನಮ್ಮ ಜನಸಂಖ್ಯೆ ಎಷ್ಟಕ್ಕೆ ಏರುತ್ತಿತ್ತೋ ಏನೋ… ಮಕ್ಕಳಿರಲವ್ವ ಮನೆತುಂಬ, ನೀವು ಈಗಿನಿಂದಲೇ ಪ್ರಯತ್ನಿಸಿ ಎಂದು ಪ್ರೋತ್ಸಾಹಿಸಿದ ಪುಟ್ಯಾನ ಗುಣ ಎಷ್ಟು ಮಂದೀಗೆ ಇದ್ದೀತು? ಒಂದು ಎರಡು ಸಾಕು ಅನ್ನುತ್ತ ಆದೇಶ ಹೊರಡಿಸುತ್ತಿದ್ದ ನಮ್ಮ ಸರ್ಕಾರ ಇತ್ತೀಚಿಗೆ ಒಂದಾದರೂ ಯಾಕೆ ಬೇಕು ಅನ್ನುವಷ್ಟರ ಮಟ್ಟಿಗೆ ಬಂದಿದೆ. ಪುಟ್ಯಾನಿಗೆ ಇರುವ ಬುದ್ಧಿಯ ಗಿರ್ಧದಷ್ಟಾದರೂ ನಮ್ಮವರಿಗೆ ಇರಬೇಕಿತ್ತು. ಈಗ ನೋಡಿ ಅಲ್ಲಿನವರಿಗೆ ಮಧ್ಯಾಹ್ನ ಅರ್ಧದಿನ ಬೇಕು ಅಂದರೆ ಅರ್ಧದಿನ. ಪೂರಾ ದಿನ ಬೇಕು ಅಂದರೆ ಪೂರಾದಿನ ಹೀಗೆ ಎಲ್ಲ ಸಮಯದಲ್ಲೂ ರಜೆ ಕೊಟ್ಟು ಮಜಾ ಮಾಡಿ ಅನ್ನುತ್ತಿದ್ದರೆ ನಮ್ಮವರು ಯಾಕೆ ಬೇಕು ರಜೆ ಎಂದು ನೌಕರರೂ ಸಹ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಿದ್ದಾರೆ. ಪುಟ್ಯಾ ಅಲ್ಲಿ ಮಾತನಾಡಿದ್ದ ವಿಡಿಯೋ ರಿಕಾರ್ಡ್ ಮಾಡಿದ್ದನ್ನು ಕಷ್ಟಪಟ್ಟು ತರಿಸಿಕೊಂಡು ವಾಟ್ಸಾಪ್‌ನಲ್ಲಿ ಎಲ್ಲರಿಗೂ ಶೇರ್ ಮಾಡಿ ಕಟ್ಟಕಡೆಯ ಮನುಷ್ಯನಿಗೆ ಮುಟ್ಟುವಂತೆ ಕಳುಹಿಸಿ ಎಂದು ಬರೆದು ಪ್ರಯತ್ನ ಮಾಡುತ್ತಿದ್ದಾರೆ.
ಪುಟ್ಯಾ ಇಲ್ಲಿದ್ದಿದ್ದರೆ ಊರು ಊರುಗಳಲ್ಲಿ ನಾಗರಿಕ ಸನ್ಮಾನ ಹಮ್ಮಿಕೊಳ್ಳಬಹುದಿತ್ತು ಎಂದು ಕೆಲವು ಸನ್ಮಾನ ಮೇಕರ್ಸ್ ಹೇಳುತ್ತಿದ್ದಾರೆ. ಇನ್ನೂ ಹಲವರು ಹೇಗಾದರೂ ಮಾಡಿ ಇಲ್ಲಿಗೆ ಕರೆಯಿಸೋಣ ಅವರ ನಂಬರ್ ಇದ್ದರೆ ಕೊಡಿ ಎಂದು ದುಂಬಾಲು ಬೀಳುತ್ತಿದ್ದಾರೆ. ಹೆಚ್ಚು ಜನರು ಗೂಗಲ್‌ನಲ್ಲಿ ಆತನ ಕಲರ್ ಫೋಟೋ ತೆಗೆಸಿಕೊಂಡು ಅದನ್ನು ಕಟ್ಟು ಹಾಕಿಸಿ ಮನೆಯಲ್ಲಿ ಮೊಳೆ ಹೊಡೆದು ತೂಗು ಹಾಕಿದ್ದಾರೆಂಬ ಸುದ್ದಿಯೂ ಬರುತ್ತಿದೆ. ಧಾರ್ಮಿಕ ಮನೋಭಾವದವರು ಪುಟ್ಯಾನ ಹಾಗೆ ನಮ್ಮವರಿಗೆ ಬುದ್ಧಿ ಕೊಡು ಎಂದು ಬೇಡಿಕೊಳ್ಳುತ್ತಿದ್ದಾರೆ. ಇನ್ನೂ ಹಲವರು ಅದಕ್ಕಿಂತ ಮುಂದೆ ಹೋಗಿ ನಮ್ಮ ಬೇಡಿಕೆ ಈಡೇರಿಸಿದರೆ ನಿಮಗೆ ಜೋಡು ಗಾಯಿ ಒಡೆಸುತ್ತೇನೆ ಎಂದು ಬೇಡಿಕೊಂಡಿದ್ದಾರಂತೆ. ಅದಕ್ಕೆ ಅನ್ನುವುದು ಇದ್ದರೆ ಇರಬೇಕು ಪುಟ್ಯಾನ ಹಾಂಗ ಅನ್ನುವುದು. ಇಷ್ಟಕ್ಕೂ ಆ ಪುಟ್ಯಾ ಹೇಳಿದ್ದಾದರೂ ಏನೆಂದರೆ….. ಬಿಡುವಿನ ಸಮಯದಲ್ಲಿ ಸುಮ್ಮನೇ ಟೈಮ್ ವೇಸ್ಟ್ ಮಾಡಬೇಡಿ.. ಹೆಚ್ಚಾನು ಹೆಚ್ಚು ಸಂತಾನ ಅಭಿವೃದ್ಧಿ ಮಾಡಿಕೊಳ್ಳಿ ಎಂದು.

Previous articleರಾಜ್ಯಪಾಲರ ನಡೆ ಸಂದೇಹಕ್ಕೆ ಆಸ್ಪದ ಬೇಡ
Next articleಸ್ವರಾಜ್ಯದ ಗೆಲುವಿಗೆ ಬಲಿದಾನದ ತೋರಣ