ಇಡಿ ಬಹಿಷ್ಕಾರಕ್ಕೆ ಪ್ರಸ್ತಾಪ, ಗಲಾಟೆ

0
25

ವಿಧಾನ ಪರಿಷತ್ತು: ವಾಲ್ಮೀಕಿ ನಿಗಮ ಹಗರಣದ ತನಿಖೆ ವೇಳೆ ಇ.ಡಿ ಅಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೇಲೆ ಒತ್ತಡ ಹೇರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ, ಆದ್ದರಿಂದ ಇ.ಡಿ.ಯನ್ನು ಬಹಿಷ್ಕಾರ ಮಾಡಬೇಕು ಎಂದು ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಸದನಕ್ಕೆ ಪ್ರಸ್ತಾಪಿಸಿದರು.
ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತು. ಈ ವೇಳೆ, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಈ ಹಿನ್ನೆಲೆ ಸಭಾಪತಿ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ೧೦ ನಿಮಿಷ ಮುಂದೂಡಿದರು.
ವಿಧಾನ ಪರಿಷತ್ ಶೂನ್ಯವೇಳೆ ಮುಗಿದ ನಂತರ ಇ.ಡಿ. ಅಧಿಕಾರಿಗಳ ತನಿಖಾ ಕಾರ್ಯವೈಕರಿ ಬಗ್ಗೆ ಪ್ರಸ್ತಾವನೆ ಸಲ್ಲಿಸಿ, ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ನಿಲುವಳಿ ಸೂಚನೆ ಮಂಡಿಸಿದರು. ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ಬಿ.ಕಲ್ಲೇಶ ಎಂಬುವರ ಇಡಿ ಒತ್ತಡ ಹೇರುತ್ತಿರುವ ಕುರಿತು ಜುಲೈ ೨೨ರಂದು ವಿಲ್ಸನ್ ಗಾರ್ಡ್‌ನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಡಿ ತನಿಖೆಯ ಮೂಲ ಮುಖ್ಯಮಂತ್ರಿಗಳಿಗೆ ಕಳಂಕ ತರುವ ಹುನ್ನಾರ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಬಿಳಿಸುವ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಸದನದ ಗಮನಕ್ಕೆ ತಂದರು.
ಪ್ರಕರಣ ಕೋರ್ಟ್‌ನಲ್ಲಿ:
ಇದಕ್ಕೆ ಅವಕಾಶ ನಿರಾಕರಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಇದು ಕೋರ್ಟ್‌ನಲ್ಲಿದೆ, ಯಾವ ನಿಯಮದಲ್ಲಿಯೂ ಚರ್ಚೆಗೆ ಅವಕಾಶ ನೀಡಲು ಬರಲ್ಲ. ಸಾರ್ವಜನಿಕ ಹಿತಾಸಕ್ತಿ ವಿಷಯದಡಿಯೂ ಬರಲ್ಲ. ಬೇರೆ ರೂಪದಲ್ಲಿ ಕೊಡಿ, ಪರಿಗಣಿಸಲಾಗುತ್ತದೆ. ಇ.ಡಿಗೂ, ಸರ್ಕಾರಕ್ಕೂ ಏನು ಸಂಬಂಧ, ಸಿಬಿಐ, ಇಡಿ ಎಲ್ಲ ಇದರಲ್ಲಿದೆ. ಹಾಗಾಗಿ ಚರ್ಚೆಗೆ ಅವಕಾಶವಿಲ್ಲ ಎಂದರು.
ಇದನ್ನು ವಿರೋಧಿಸಿದ ಯು.ಬಿ. ವೆಂಕಟೇಶ್, ನಿಯಮಾವಳಿ ೨೮೬ರ ಪ್ರಕಾರ ಚರ್ಚೆ ಮಾಡಬಹುದಾಗಿದೆ ಎಂದರು. ಇ.ಡಿ. ಅಧಿಕಾರಿಗಳು ಸರ್ಕಾರದ ಮತ್ತು ತಮಗೆ ನೀಡಿರುವ ಜವಾಬ್ದಾರಿ ಮರೆತು ವರ್ತನೆ ಮಾಡುತ್ತಿದ್ದಾರೆ. ಅಧಿಕಾರಿಯಾಗಿದ್ದವರು ದೂರು ನೀಡಿದ್ದಾರೆ, ಹಾಗಾಗಿ ನಿಲುವಳಿ ಸೂಚನೆಯಡಿ ವಿಷಯ ಪ್ರಾಸ್ತಾಪಕ್ಕೆ ಅವಕಾಶ ನೀಡಿ, ಚರ್ಚೆಗೆ ಯಾವಾಗಲಾದರೂ ಅವಕಾಶ ನೀಡಿ ಎಂದು ಮನವಿ ಮಾಡಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಯಾರು ಯಾರ ಮೇಲೆ ಬೇಕಾದರೂ ದೂರು ಕೊಡಬಹುದು, ಸತ್ಯ ಹೊರಬರಬೇಕಲ್ಲ, ತನಿಖೆ ಮಾಡಲಿ, ಈ ಕುರಿತು ಚರ್ಚೆಗೆ ಅವಕಾಶ ನೀಡಬಾರದು ಎಂದು ಪಟ್ಟುಹಿಡಿದರು.
ಸಭಾಪತಿ ಹೊರಟ್ಟಿ ಪ್ರಸ್ತಾವನೆಗೆ ಅವಕಾಶ ನೀಡಿ, ಇ.ಡಿ. ಸಂವಿಧಾನಬದ್ದ ಸ್ವತಂತ್ರ ಸಂಸ್ಥೆಯಾಗಿದೆ. ನಿಯಮ ೫೮ರ ಅಡಿಯಲ್ಲಿ ಅಕ್ರಮದ ಕುರಿತು ತನಿಖೆ ನಡೆಸುತ್ತಿದೆ. ಆದ್ದರಿಂದ ಈ ವಿಷಯವನ್ನು ಚರ್ಚೆಗೆ ಅವಕಾಶ ನಿರಾಕರಿಸಲಾಗುವದು ಎಂದರು.
ಈ ವಿಚಾರವಾಗಿ ಸದನದಲ್ಲಿ ಮತ್ತೆ ಗದ್ದಲ ಸೃಷ್ಟಿಯಾಯಿತು. ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸದನ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಸಭಾಪತಿಗಳನ್ನು ಕಲಾಪವನ್ನು ಮಧ್ನಾಹ್ನ ೨.೩೦ಕ್ಕೆ ಮುಂದೂಡಿದರು.

Previous articleಅಗ್ಗವಾಗಲಿವೆ ಮೊಬೈಲ್‌ಗಳು ಎಲೆಕ್ಟ್ರಾನಿಕ್ಸ್ ಉದ್ಯಮದ ಮೌಲ್ಯವರ್ಧನೆ
Next article೧೪ ಗಂಟೆ ಕೆಲಸ ಅಲ್ಲ